Advertisement
ರಾಜ್ಯದ ಆಡಳಿತದಲ್ಲಿ ಕನ್ನಡ ಬಳಕೆ ಕುರಿತು ‘ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ಕನ್ನಡದ ಅಧಿಕಾರಿಗಳಿಗೆ ಕನ್ನಡದ ಬಗ್ಗೆ ಕೀಳರಿಮೆ ಇರುವುದು, ಕೆಲವು ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಬೇಕಿಲ್ಲದಿರುವ ದೋಷಗಳು ಕನ್ನಡದ ಅನುಷ್ಠಾನಕ್ಕೆ ಅಡ್ಡಿಗಳಾಗಿವೆ. ಇವನ್ನು ಪೀಡೆಗಳು ಅಂತಲೂ ಹೇಳಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಪ್ರಾಧಿಕಾರಕ್ಕೆ ದಂಡನೆಯ ಅಧಿಕಾರ ಕೊಟ್ಟಿದ್ದಿದ್ದರೆ ಅದರ ದುರುಪಯೋಗ ಜಾಸ್ತಿಯಾಗುತ್ತಿತ್ತು. ಸರ್ವಾಧಿಕಾರಿಗಳಾಗಿ ಬಿಡುತ್ತಿದ್ದೆವು. ಆದ್ದರಿಂದ ಶಿಫಾರಸಿಗೆ ಮಿತಿ ಬಳಸುವುದೇ ಒಂದು ದೊಡ್ಡ ಶಕ್ತಿ. ನಮಗೆ ವಿನಯ ಇರಬೇಕು. ವಿನಯ ಇದ್ದಾಗ ಕೆಲಸ ಮಾಡುತ್ತೇವೆ. ಏಕೆಂದರೆ ಕರ್ತವ್ಯ ಪ್ರಜ್ಞೆ ಇರುತ್ತದೆ. ಸರ್ವಾಧಿಕಾರಿ ಧೋರಣೆಯಲ್ಲಲ್ಲ. ಈಗಿರುವ ಮಿತಿ ಆರೋಗ್ಯಕರವಾದದ್ದು ಎಂದು ಹೇಳಿದರು.
ಜಿಲ್ಲಾಮಟ್ಟದಲ್ಲಿ 15 ಜಿಲ್ಲೆಗಳನ್ನು ನಾನು ನೋಡಿದ್ದೇನೆ. ನಡಾವಳಿಗಳನ್ನು ಅನುಪಾಲನ ವರದಿಗಳು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ದೋಷಗಳನ್ನು ಗುರುತಿಸಿ ತಿದ್ದಿಕೊಳ್ಳಲು ಗಡುವು ನೀಡಿದ್ದೇನೆ. ಮುಂದಿನ ಕ್ರಮವಾಗಿ ಅನುಪಾಲನಾ ವರದಿ ತರಿಸಿಕೊಳ್ಳುತ್ತೇವೆ. ಆಮೇಲೆ ಮರು ಪರಿಶೀಲನೆಗೆ ಹೋಗುತ್ತೇವೆ. ಅವರು ಕೊಟ್ಟ ವರದಿ ಸುಳ್ಳಿದ್ದರೆ ಅಲ್ಲಿಯೇ ಅವರಿಗೆ ವಾಗ್ಧಂಡನೆ ಮಾಡುತ್ತೇವೆ ಮತ್ತು ಸರ್ಕಾರಕ್ಕೆ ಮುಂಬಡ್ತಿ ತಡೆ ಹಿಡಿಯಲು ಶಿಫಾರಸು ಮಾಡುತ್ತೇವೆ. ಇಲ್ಲಿವರೆಗೆ 17 ಇಲಾಖೆಗಳಲ್ಲಿ ಪರಿಶೀಲನೆ ಮಾಡಲಾಗಿದ್ದು ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ ಶೇ. 50ರಷ್ಟು ದಾರಿಗೆ ಬಂದಿದೆ. ತಂತ್ರಾಂಶದ ಬಳಕೆಯಲ್ಲಿ ಅದು ಹೆಚ್ಚು ಕಾಣುತ್ತಿದೆ. ನಾಮಫಲಕಕ್ಕೆ ಸಂಬಂಧಪಟ್ಟಂತೆ ತೀಕ್ಷ್ಣ ಎಚ್ಚರಿಕೆ ಕೊಡಲಾಗಿತ್ತು ಎಂದು ತಿಳಿಸಿದರು.
ನಾವು ಕನ್ನಡ ಕಾವಲು ಸಮಿತಿ ಸೇವಕರು ಮುಖ್ಯ ಕಾರ್ಯದರ್ಶಿಯವರಿಗೆ ಕಡತಗಳು ಹಾಗೂ ಇತರೆ ಪತ್ರ ವ್ಯವಹಾರಗಳು ಇಂಗ್ಲಿಷ್‌ನಲ್ಲೇ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಅದಕ್ಕೆ ತಡೆಯೊಡ್ಡಬೇಕು. ರಾಜ್ಯದ ಒಳಾಡಳಿತದಲ್ಲಿ ಹೊರ ದೇಶ, ಹೊರ ರಾಜ್ಯಗಳಿಗೆ ಸಂಬಂಧಪಟ್ಟಂತೆ ಅವರು ಇಂಗ್ಲಿಷ್ ಬಳಸಲಿ, ನಮ್ಮ ಅಭ್ಯಂತರವಿಲ್ಲ. ಆದರೆ, ಒಳಾಡಳಿತದಲ್ಲಿ ಕನ್ನಡ ಅನುಷ್ಠಾನವಾಗಲೇಬೇಕು. ಅಭಿವೃದ್ಧಿ ಪ್ರಾಧಿಕಾರದೊಳಗಿನ ಮಿತಿಯೊಳಗೆ ನಾವು ಯಾವ ಹಿರಿಯ ಅಧಿಕಾರಿಗಳನ್ನೂ ಬಿಡುವುದಿಲ್ಲ. ಏಕೆಂದರೆ ನಾವು ಕನ್ನಡ ಕಾವಲು ಸಮಿತಿಯ ಸೇವಕರು ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು. – ಸಂಪತ್ ತರೀಕೆರೆ