Advertisement

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

10:48 PM Jun 27, 2024 | Team Udayavani |

ಧಾರವಾಡ : ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ಗೆ ಸಂಬಂಧಿಸಿದಂತೆ ದೇಶದ ಅತಿ ದೊಡ್ಡ ನೆಟ್ವರ್ಕ ಸಂಸ್ಥೆ ಏಥರ್‌ ಎನರ್ಜಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯಿಂದ ಹಿಂದೆ ಸರಿದು ಮಹಾರಾಷ್ಟ್ರಕ್ಕೆ ಹೋಗಿದ್ದು, ಇದರಿಂದ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಹೇಳಿದ್ದಾರೆ.

Advertisement

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏಥರ್‌ಎನರ್ಜಿ ಕಂಪನಿ ರಾಜ್ಯದಲ್ಲಿ ಸುಮಾರು 2000 ಕೋಟಿ ರೂ. ಹೂಡಿಕೆ ಮಾಡಿ ಸುಮಾರು 4,000 ಮಂದಿಗೆ ಉದ್ಯೋಗ ಕಲ್ಪಿಸಲು ಆಸಕ್ತಿ ತೋರಿಸಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ಪಂದಿಸದ ಕಾರಣ ಕಂಪನಿ ಈಗ ತನ್ನ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ2,000 ಕೋಟಿ ರೂ. ಹೂಡಿಕೆ ಮತ್ತು 4,000 ಮಂದಿಗೆ ಉದ್ಯೋಗಾವಕಾಶ ತಪ್ಪಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏಥರ್‌ಎನರ್ಜಿ ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕಂಪನಿಯಾಗಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿಪುಲ ಅವಕಾಶಗಳಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಕಂಪನಿ ಜತೆ ಮಾತುಕತೆ ನಡೆಸಿ ಹೂಡಿಕೆಗೆ ಕಂಪನಿಯ ಮನವೊಲಿಸುವಲ್ಲಿ ವಿಫಲವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ಇನ್ನು ಮುಂದಾದರೂ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಂಪನಿಗಳನ್ನು ಆಕರ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಏಥರ್‌ಎನರ್ಜಿಯಂತೆ ಇತರೆ ಕಂಪನಿಗಳು ಕೂಡ ರಾಜ್ಯದಿಂದ ಹಿಂದೆ ಸರಿಯುವ ಪರಿಸ್ಥಿತಿ ಎದುರಾಗಬಹುದು. ಇದು ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ ಎಂದು ಬೆಲ್ಲದ್ ಹೇಳಿದರು.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಯು ಕರ್ನಾಟಕದ ಬದಲು ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಬಂಡವಾಳ ಹೂಡಿಕೆ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೂಡಿಕೆದಾರರ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಂಪನಿ ಜತೆ ಮಾತುಕತೆ ನಡೆಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯಕ್ಕೆ ಹೂಡಿಕೆ ಮಾಡಲು ಮುಂದಾಗುವ ಕಂಪೆನಿಗಳನ್ನ ಪ್ರಧಾನಿ ಮೋದಿ ಅವರು ಗುಜರಾತ್‌ಗೆ ಸೆಳೆಯುತ್ತಿದ್ದಾರೆ ಎನ್ನುವ ಆರೋಪ ಮಾಡುವ ಕಾಂಗ್ರೆಸ್ ನಾಯಕರು ಮೊದಲು ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳರಿ ಎಂದು ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next