ಬೆಂಗಳೂರು: ಯುಜಿ ನೀಟ್ ನೋಂದಣಿ ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್ ಸೈಟ್ ಸರ್ವರ್ ಮತ್ತೆ ಕೈಕೊಟ್ಟಿದೆ. ಪರಿಣಾಮ, ನೂರಾರು ವಿದ್ಯಾರ್ಥಿಗಳು ಮಂಗಳವಾರ ಕೆಇಎ ಕಚೇರಿಗೆ ಧಾವಿಸಿ ಸಮಸ್ಯೆ ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆದಿರುವ ಹಲವು ವಿದ್ಯಾರ್ಥಿಗಳು ಈ ವರೆಗೆ ನೋಂದಣಿ ಮಾಡಿಕೊಂಡಿಲ್ಲ. ಇಂತಹ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಡಿ.22ರ ವರೆಗೆ ಸಮಯ ನೀಡಲಾಗಿದೆ.
ಆದರೆ, ನೋಂದಣಿಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದ್ದು, ಮಂಗಳವಾರ ಸರ್ವರ್ ಡೌನ್ ಆಗಿದ್ದರಿಂದ ಆತಂಕಕೊಂಡು ಕೆಇಎ ಕಚೇರಿ ಬಳಿಗೆ ಬಂದಿದ್ದರು. ಸುಮಾರು ಅರ್ಧದಿನ ಪ್ರಯತ್ನ ಮಾಡಿದರೂ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಭಯವಾಗಿ ಕೆಇಎ ಕಚೇರಿಗೆ ಬಂದಿದ್ದೇನೆ ಎಂದು ಸಮಸ್ಯೆ ಬಗ್ಗೆ ಮಾಹಿತಿ ನಿಡಿದರು.
ಸರ್ವರ್ ಸಮಸ್ಯೆಗೆ ಕಾರಣವೇನು? ಕೆಇಎ ಸರ್ವರ್ ಏಕಕಾಲದಲ್ಲಿ ಯುಜಿ- ನೀಟ್ ನೋಂದಣಿ, ಬಿಎಸ್ಸಿ ನರ್ಸಿಂಗ್ ದಾಖಲಾತಿ ಪರಿಶೀಲನೆ, ಪಿಜಿಇಟಿ ಎರ ಡನೇ ಸುತ್ತಿನ ಸೀಟು ಹಂಚಿಕೆ, ಡಿಸಿಇಟಿ ಪ್ರವೇಶ ಪ್ರಕ್ರಿಯೆ ಸೇರಿದಂತೆ ಹಲವು ಪ್ರಕ್ರಿಯೆಗಳು ನಡೆಯುತ್ತಿವೆ.
ಹೀಗಾಗಿ, ಸರ್ವರ್ ಸಮಸ್ಯೆ ಎದುರಾಗಿದೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ. ಡಿ.27ರ ವರೆಗೆ ವಿಸ್ತರಣೆ ಸರ್ವರ್ ಸಮಸ್ಯೆ ಎದುರಾಗಿದ್ದರಿಂದ ನೋಂದಣಿಗೆ ಕೆಇಎ ಡಿ.27ರ ವರೆಗೆ ಅವಧಿ ವಿಸ್ತರಿಸಿದೆ. ವಿದ್ಯಾರ್ಥಿಗಳು ಆತಂಕಗೊಳ್ಳದೆ ನೋಂದಣಿ ಮಾಡಿಕೊಳ್ಳಬಹುದು.