ನವದೆಹಲಿ: ಭಾನುವಾರ ನಡೆದ ನೀಟ್-ಯುಜಿ 2024ರ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ನೀಟ್ ಪರೀಕ್ಷೆಯ ಪಶ್ನೆಪತ್ರಿಕೆ ಗಳು ಸೋರಿಕೆಯಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡಿದ್ದಲ್ಲದೇ, ಕೆಲವು ಪ್ರಶ್ನೆ ಪತ್ರಿಕೆಯ ತುಣುಕುಗಳು ಸಹ ವೈರಲ್ ಆಗಿದ್ದವು. ಇದು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ.
ರಾಹುಲ್, ಪ್ರಿಯಾಂಕಾ ವಾಗ್ಧಾಳಿ: ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆ ಮಾಡಿರುವುದು 24 ಲಕ್ಷ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರಿಗೆ ಮಾಡಿದ ದ್ರೋಹ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು 12ನೇ ತರಗತಿ ಪಾಸ್ ಆದ ವಿದ್ಯಾರ್ಥಿಯೊಬ್ಬನ ಕನಸಾಗಿರುತ್ತದೆ. ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಯುವಕ ನೊಬ್ಬನ ಹೋರಾಟವಾಗಿರುತ್ತದೆ. ಇವರೆಲ್ಲ ರಿಗೂ ಮೋದಿ ಸರ್ಕಾರ ಶಾಪವಾಗಿ ಮಾರ್ಪ ಟ್ಟಿದೆ ಎಂದು ಹೇಳಿದ್ದಾರೆ. ದೇಶದ 24 ವಿದ್ಯಾರ್ಥಿಗಳ ಭವಿಷ್ಯವನ್ನು ಮತ್ತೂಮ್ಮೆ ಹಾಳು ಮಾಡಲಾಗಿದೆ. ದೇಶದ ಪ್ರಧಾನಿ ಈ ಬಗ್ಗೆ ಏನಾದರೂ ಹೇಳಲು ಬಯಸುತ್ತಾ ರೆಯೇ ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.
7 ಮಂದಿ ವಶಕ್ಕೆ: ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಬಿಹಾರದ ಪಾಟ್ನಾ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರೀಕ್ಷೆ ಆರಂಭ ವಾಗುವ ಕೆಲ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಮಾಹಿತಿ ನಮಗೆ ಲಭಿಸಿತು. ತನಿಖೆ ಆರಂಭಿಸಿ 7 ಜನ ರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹರಿದಾಡಿದ್ದು ಬೇರೆ ಪತ್ರಿಕೆ: ಎನ್‌ಟಿಎ
ನೀಟ್ ಪರೀಕ್ಷೆಯನ್ನು ನಡೆಸಿದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದು ಕೇವಲ ವದಂತಿಯಾಗಿದೆ. ಜಾಲತಾಣಗಳಲ್ಲಿ ಹರಿದಾಡಿರುವ ಪ್ರಶ್ನೆಪತ್ರಿಕೆಗಳಿಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಪರೀಕ್ಷೆ ಸುಸೂತ್ರವಾಗಿ ನಡೆದಿದೆ ಎಂದು ಎನ್‌ಟಿಎ ಸ್ಪಷ್ಟನೆ ನೀಡಿದೆ.
ಐಬಿಡಿಪಿ ಪರೀಕ್ಷೆ: ಗಣಿತ ಪತ್ರಿಕೆ ಲೀಕ್
ದ್ವಿತೀಯ ಪಿಯುಸಿಗೆ ಸಮಾನವಾಗಿ ನಡೆಸಲಾಗುವ ಇಂಟರ್‌ನ್ಯಾಷನಲ್ ಬ್ಯಾಕಲಾರಿಯೇಟ್ ಡಿಪ್ಲೋಮಾ ಪ್ರೋಗ್ರಾಂ ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಮಾ.1ರಂದು ಈ ಪರೀಕ್ಷೆ ನಡೆದಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆಪತ್ರಿಕೆ ಜಾಲತಾಣ ಗಳಲ್ಲಿ ಸಿಕ್ಕಿತ್ತು ಎನ್ನಲಾಗಿದೆ.