ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(post Graduate)ಯನ್ನು ಕನಿಷ್ಠ ನಾಲ್ಕು ತಿಂಗಳ ಕಾಲ ಮುಂದೂಡಲಾಗಿದೆ ಎಂದು ಸೋಮವಾರ(ಮೇ 03) ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಮೇ 3ರ ಮಧ್ಯರಾತ್ರಿಯೊಳಗೆ ದೆಹಲಿಗೆ ಆಕ್ಸಿಜನ್ ಸರಬರಾಜು ಮಾಡಿ: ಕೇಂದ್ರಕ್ಕೆ ಸುಪ್ರೀಂ
ದೇಶಾದ್ಯಂತ ಕೋವಿಡ್ 19 ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪುನರಾವಲೋಕನ ನಡೆಸಿದ ನಂತರ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪಿಜಿ ಪರೀಕ್ಷೆಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವಿವರಿಸಿದೆ.
ಸಭೆಯಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ಕೋವಿಡ್ 19 ಸನ್ನಿವೇಶವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಾನವ ಸಂಪನ್ಮೂಲ ವೃದ್ಧಿಸುವ ಕುರಿತು ಅವರು ವಿವಿಧ ಕ್ರಮಗಳ ಪರಿಶೀಲನೆ ನಡೆಸಿರುವುದಾಗಿ ವರದಿ ತಿಳಿಸಿದೆ.
ನೀಟ್ ಪಿಜಿ ಪರೀಕ್ಷೆಯನ್ನು ಕನಿಷ್ಠ ನಾಲ್ಕು ತಿಂಗಳ ಕಾಲ ಮುಂದೂಡುವ ಮೂಲಕ ಕೋವಿಡ್ 19 ಕರ್ತವ್ಯ ನಿರ್ವಹಿಸಲು ಹೆಚ್ಚಿನ ಸಂಖ್ಯೆಯ ಅರ್ಹ ವೈದ್ಯರು ಲಭ್ಯವಾಗಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಬಿಡುಗಡೆಗೊಳಿಸಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಕೋವಿಡ್ 19 ಸ್ಥಿತಿ ಕಳವಳಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕೋವಿಡ್ ಪರಿಸ್ಥಿತಿ ನಿಭಾಯಿಸಲು ಬಳಸಿಕೊಳ್ಳಲು ಭಾನುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದರು.