ನವದೆಹಲಿ: ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಬಯಸಿದ್ದ ನೀಟ್ ಯುಜಿಯ 1563 ಅಭ್ಯರ್ಥಿಗಳ ಕೃಪಾಂಕವನ್ನು ರದ್ದುಪಡಿಸಿದ್ದು, ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸಿ, ಜೂನ್ 30ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ (ಜೂನ್ 13) ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಇದನ್ನೂ ಓದಿ:Hubballi: ನಟ ದರ್ಶನ್ ಪ್ರಕರಣದ ಕುರಿತು ಇಂದ್ರಜಿತ್ ಲಂಕೇಶ್ ಹೇಳಿದ್ದೇನು?
ತಪ್ಪು ಪ್ರಶ್ನೆಗಳಿಗೆ ಗ್ರೇಸ್ ಅಂಕಗಳನ್ನು ನೀಡಿದ್ದು ಭಾರೀ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು. ಮೆಡಿಕಲ್ ಪ್ರವೇಶಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಒಂದು ವೇಳೆ ಅಭ್ಯರ್ಥಿಗಳು ಮರು ಪರೀಕ್ಷೆ ಬರೆಯದಿದ್ದರೆ, ಅವರ ಕೃಪಾಂಕ ಮಾರ್ಕ್ಸ್ ಅನ್ನು ಪರಿಗಣಿಸದೇ ಮೊದಲು ಪಡೆದ ಅಂಕವನ್ನೇ ಫಲಿತಾಂಶವನ್ನಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದೆ.
ನೀಟ್ ಪರೀಕ್ಷೆಗೆ ಸಂಬಂಧಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೂನ್ 10, 11 ಮತ್ತು 12ರಂದು ಸಮಿತಿ ಸಭೆ ನಡೆಸಿತ್ತು. ಸಮಿತಿಯ ಶಿಫಾರಸಿನ ಆಧಾರದ ಮೇಲೆ, ಗ್ರೇಸ್ ಮಾರ್ಕ್ಸ್ ಪಡೆದ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ರದ್ದುಪಡಿಸಿದ್ದು, ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ನಿರ್ಧಾರವು 2024ರ ನೀಟ್ ಯುಜಿ ಕೌನ್ಸೆಲಿಂಗ್ ಪ್ರಕ್ರಿಯೆ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಒಂದು ವೇಳೆ ಮರು ಪರೀಕ್ಷೆ ನಡೆಸುವುದಾದರೆ, ಅದೇ ರೀತಿ ಕೌನ್ಸೆಲಿಂಗ್ ಪ್ರಕ್ರಿಯೆ ಕೂಡಾ ಮುಂದುವರಿಯಬೇಕು ಎಂದು ಸುಪ್ರೀಂ ತಿಳಿಸಿತ್ತು.
ಎಂಬಿಬಿಎಸ್, ಬಿಡಿಎಸ್ ಹಾಗೂ ಇತರ ಕೋರ್ಸ್ ಗಳ ಪ್ರವೇಶದ ಕೌನ್ಸೆಲಿಂಗ್ ಜುಲೈ 6ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ಸ್ಪಷ್ಟಪಡಿಸಿದೆ.