ಹಾಸನ- ಮೈಸೂರು ಸೀಮೆಯಲ್ಲಿ ಸೆಟ್ ದೋಸೆ, ಬೆಂಗಳೂರಿನಲ್ಲಿ ಮಸಾಲೆ ದೋಸೆ, ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹೇಗೆ ಪ್ರಸಿದ್ಧವೋ, ಹಾಗೆಯೇಮಲೆನಾಡು, ಮಂಗಳೂರು ಮತ್ತು ಕಾಸರಗೋಡು ಸೀಮೆಯಲ್ಲಿ ನೀರ್ ದೋಸೆ ಬಹಳ ಹೆಸರುವಾಸಿ. ಕೊಟ್ಟಿಗೆಹಾರದಲ್ಲಿ ಬಸ್ ಇಳಿದ ಹಲವರಿಗೆ ಅಲ್ಲಿ ನೀರ್ ದೋಸೆ ತಿನ್ನದಿದ್ದರೆ, ಏನನ್ನೋ ಕಳೆದುಕೊಂಡಂತೆ ಫೀಲ್ ಆಗುವುದು ಸುಳ್ಳಲ್ಲ.
ನೀರ್ ದೋಸೆ ಮಾಡುವ ಅಥವಾ ನೀರ್ ದೋಸೆ ಹುಯ್ಯುವ ರೀತಿಯೇ ಬಹಳ ಸೊಗಸಿನದು. ಇಲ್ಲಿ ಒಂದು ವಿಚಾರವನ್ನು ಹೇಳಿಬಿಡಬೇಕು. ನೀರುದೋಸೆ ಮಾಡುವ ಚಾಕಚಕ್ಯತೆಯಲ್ಲಿ ಕರಾವಳಿಗರನ್ನು ಮೀರಿಸುವುದು ಕಷ್ಟ ಕಷ್ಟ.
ಕಾಸರಗೋಡು ಮತ್ತು ಮಂಗಳೂರು ಮತ್ತು ಮಲೆನಾಡು ಸೀಮೆಯಲ್ಲಿ ಈ ತಿನಿಸು ಅದೆಷ್ಟು ಜನಪ್ರಿಯ ಅಂದರೆ, ಹಾಸ್ಟೆಲ್ ನಿಂದ ಮನೆಗೆ ಬಂದ ಮಗ ಅಥವಾ ಮಗಳಲ್ಲಿ ಬೆಳಗ್ಗೆಗೆ ಏನು ತಿಂಡಿ ಮಾಡಲಿ ಎಂದು ರಾತ್ರೆ ಅಮ್ಮ ವಿಚಾರಿಸಿದರೆ, ಮುಸುಕಿನ ಒಳಗಿಂದಲೇ ಬರುವ ಸಿದ್ಧ ಉತ್ತರ- ನೀರು ದೋಸೆ. ಪ್ರೀತಿಪಾತ್ರರು ಅತಿಥಿಗಳಾಗಿ ಬಂದಾಗ ಕೂಡ ಹೆಚ್ಚಿನ ಕರಾವಳಿಗರು ಬೆಳಗಿನ ಉಪಾಹಾರಕ್ಕೆ ಮಾಡುವ ತಿಂಡಿಯೂ ಹೆಚ್ಚಾಗಿ ನೀರ್ ದೋಸೆಯೇ ಆಗಿರುತ್ತದೆ. ನೀರು ದೋಸೆ ಕರಾವಳಿಯ ಸ್ಪೆಶಲ್ ಕೂಡಾ. ಯಾವ ಗರಂ ಮಸಾಲೆ, ಜಿಡ್ಡು, ಖಾರವೂ ತಾಗದ ಮಲ್ಲಿಗೆ ಹೂವಿನ ಬಣ್ಣದ ತೆಳು ತೆಳು ದೋಸೆ.
ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನುಅರ್ಧ ಗಂಟೆ ನೀರಿನಲ್ಲಿ ನೆನೆಸಿದರೆ ಸಾಕು. ಹಸಿ ಕೊಬ್ಬರಿ ಸುಳಿ ನಾಲ್ಕು ಚಮಚೆ ಹಾಕಿ ನಯವಾಗಿ ರುಬ್ಬಿದರೆ ಅಲ್ಲಿಗೆ ಅರ್ಧ ಕೆಲಸ ಮುಗೀತು. ಇಷ್ಟೇನಾ, ಉಫ್ ಅಂತ ತಾತ್ಸಾರ ಮಾಡಿದ್ದೇ ಆದರೆ ಸರಿಯಾಗದು. ಇನ್ನೀಗ ಇದೆ ಅದನ್ನು ತೆಳ್ಳಗೆ ಕಾವಲಿಗೆ ಎರಚಲು. ಕಾದ ಕಾವಲಿಗೆ ಅರ್ಧ ಚಮಚೆ ತುಪ್ಪಹಾಕಿ ನೀರಿನಷ್ಟು ತೆಳ್ಳಗೆ ಮಾಡಿದಹಿಟ್ಟನ್ನು ಕಾವಲಿಯ ತುಂಬ ಮೆಲ್ಲಗೆ ಎರಚಬೇಕು.ಸೌಟಿನಲ್ಲಿ ಹರಡಕೂಡದು.
ಅರೆನಿಮಿಷದಲ್ಲಿ ಹತ್ತಾರು ಕಣ್ಣುಕಣ್ಣುಗಳಾಗಿ ಕಾದ ದೋಸೆ ಬದಿಯಿಂದ ಮೆಲ್ಲಗೆ ಎದ್ದು ಬರುತ್ತದೆ. ಸಟ್ಟುಗ ತಾಗಿಸಿದರೆ ಸಾಕು. ಉರುಟಾದ ಮಲ್ಲಿಗೆ ವರ್ಣದ ದೋಸೆಯನ್ನು ಅರ್ಧದಲ್ಲಿಮಡಚಿ ಹಾಕಬೇಕು. ಮೆದು ಮೆದುವಾಗಿರುವ ಈ ತಿನಿಸಿನ ಜೊತೆಗೆ ಕಾಯಿ ಚಟ್ನಿ ಅಥವಾ ಕೆಂಪು ಚಟ್ನಿ ಒಳ್ಳೆಯ ಕಾಂಬಿನೇಷನ್. ಅದೂ ಬೇಡವೆಂದರೆ ಸಾಂಬಾರಿನ ಸಾಥ್ ಇರುತ್ತದೆ. ಈ ತಿನಿಸು, ಎಳೆಯಮಗುವಿಗೂ ಬೇಗನೆ ಅರಗುತ್ತದೆ.ಎಂಭತ್ತರ ಹಿರಿಯರೂ ಅಗಿಯುವಷ್ಟು ಮೆತ್ತಗೆ ಇರುತ್ತದೆ. ಅರಗದ ಸಮಸ್ಯೆಇಲ್ವೇಇಲ್ಲ. ಹಾಗೆಯೇ, ತಿಂಡಿ ಹೆವಿ ಆಯ್ತು ಅನ್ನುವ ಪ್ರಶ್ನೆಯೂ ಬರುವುದಿಲ್ಲ. ತುಳುನಾಡಿನಲ್ಲಿ ನೂತನ ಮದುಮಕ್ಕಳಿಗೆ ವಿವಾಹದ ಮಾರನೆ ದಿನ ಸನ್ಮಾನಕ್ಕೆ ಮಾಡುವ ತಿಂಡಿ ಕೂಡ ನೀರುದೋಸೆಯೇ ಆಗಿರುತ್ತದೆ ಅಂದರೆ, ನೀರು ದೋಸೆಯ ಮಹತ್ವವನ್ನು ಅಂದಾಜು ಮಾಡಿಕೊಳ್ಳಿ.
–ಕೃಷ್ಣವೇಣಿ ಕಿದೂರ್