ಹೊಸದಿಲ್ಲಿ: ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಖ್ಯಾತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹೆಸರು ಸೂಚಿಸಿದ್ದನ್ನು ಆ್ಯತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಅಧಿಕೃತವಾಗಿ ಪ್ರಕಟಿಸಿದೆ.
ಸತತ 3ನೇ ವರ್ಷವೂ ನೀರಜ್ ಚೋಪ್ರಾ ಅವರನ್ನು ಖೇಲ್‌ರತ್ನಕ್ಕೆ ಹಾಗೂ ದ್ಯುತಿ ಚಂದ್ ಅವರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಕೆಲವು ದಿನಗಳ ಹಿಂದೆ ಪಿಟಿಐ ಪ್ರಕಟಿಸಿತ್ತಾದರೂ ಇದು ಅಧಿಕೃತಗೊಂಡಿರಲಿಲ್ಲ.
ಇದೇ ವೇಳೆ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅರ್ಪಿಂದರ್ ಸಿಂಗ್ (ಟ್ರಿಪಲ್ ಜಂಪ್) ಮತ್ತು ಮನ್‌ಜಿàತ್ ಸಿಂಗ್ (800 ಮೀ.), ಏಶ್ಯನ್ ಚಾಂಪಿಯನ್ ಪಿ.ಯು. ಚಿತ್ರಾ ಅವರನ್ನು ಅರ್ಜುನ ಪ್ರಶಸ್ತಿಗೆ ಸೂಚಿಸಲಾಗಿದೆ ಎಂದು ಎಎಫ್‌ಐ ತಿಳಿಸಿದೆ.
“ನೀರಜ್ ಚೋಪ್ರಾ ಅವರಿಗೆ ಈ ವರ್ಷ ಖೇಲ್‌ರತ್ನ ಒಲಿಯಲಿದೆ ಎಂಬ ವಿಶ್ವಾಸವಿದೆ. 2018ರಲ್ಲಿ ಮೀರಾಬಾಯಿ ಚಾನು ಹಾಗೂ ಕಳೆದ ವರ್ಷ ಭಜರಂಗ್ ಪೂನಿಯಾ ಚೋಪ್ರಾರನ್ನು ಮೀರಿಸಿದರು’ ಎಂಬುದಾಗಿ ಎಎಫ್‌ಐ ಅಧ್ಯಕ್ಷ ಎ. ಸುಮರಿವಲ್ಲ ಹೇಳಿದ್ದಾರೆ.
22ರ ಹರೆಯದ ನೀರಜ್ ಚೋಪ್ರಾ ಈಗಾಗಲೇ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ (2018). ಅಂದು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಸಾಧನೆಗೈದು ಈ ಗೌರವ ಸಂಪಾದಿಸಿದ್ದರು. ಅದೇ ವರ್ಷ ಏಶ್ಯನ್ ಗೇಮ್ಸ್‌ನಲ್ಲೂ ಬಂಗಾರ ಜಯಿಸಿ ಖೇಲ್‌ರತ್ನಕ್ಕೆ ನಾಮನಿರ್ದೇಶನಗೊಂಡಿದ್ದರು. ಚೋಪ್ರಾ ಈಗಾಗಲೇ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ.
ಧ್ಯಾನ್‌ಚಂದ್ ಪ್ರಶಸ್ತಿಗೆ ಇಬ್ಬರು
ಕುಲದೀಪ್ ಸಿಂಗ್ ಭುಲ್ಲಾರ್ ಮತ್ತು ಜಿನ್ಸಿ ಫಿಲಿಪ್ ಅವರನ್ನು ಜೀವಮಾನದ ಸಾಧನೆಗಾಗಿ ಧ್ಯಾನ್‌ಚಂದ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಡಿಸ್ಕಸ್ ಎಸೆತಗಾರ ಭುಲ್ಲಾರ್ 1982ರ ಆರಂಭಿಕ ಏಶ್ಯಾಡ್‌ನಲ್ಲಿ ಚಿನ್ನ ಗೆದ್ದರೆ, ಫಿಲಿಪ್ 2002ರ ಏಶ್ಯಾಡ್‌ನಲ್ಲಿ 4ನೇ ಸ್ಥಾನಿಯಾಗಿದ್ದರು.