ಜ್ಯೂರಿಚ್: ಭಾರತದ “ಗೋಲ್ಡನ್ ಬಾಯ್’ ನೀರಜ್ ಚೋಪ್ರಾಗೆ ಮತ್ತೊಂದು ಸುವರ್ಣಾವಕಾಶ ಕಾದು ಕುಳಿತಿದೆ. ಗುರುವಾರ ಮತ್ತು ಶುಕ್ರವಾರ ಜ್ಯೂರಿಚ್‌ನಲ್ಲಿ ಪ್ರತಿಷ್ಠಿತ “ಡೈಮಂಡ್ ಲೀಗ್ ಫೈನಲ್ಸ್’ ನಡೆಯಲಿದ್ದು, ಇಲ್ಲಿನ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆ್ಯತ್ಲೀಟ್ ಆಗಿ ಗೋಚರಿಸುತ್ತಿದ್ದಾರೆ.
ಒಂದು ತಿಂಗಳ ವಿಶ್ರಾಂತಿ ಬಳಿಕ ಲುಸಾನ್ನೆ “ಡೈಮಂಡ್ ಲೀಗ್’ನಲ್ಲಿ 89.08 ಮೀಟರ್ ದೂರದ ಐತಿಹಾಸಿಕ ಸಾಧನೆಗೈದ ನೀರಜ್ ಚೋಪ್ರಾ ಜ್ಯೂರಿಚ್ ಡೈಮಂಡ್ ಲೀಗ್ ಫೈನಲ್ಸ್ ಅರ್ಹತೆ ಸಂಪಾದಿಸಿದ್ದರು. ಡೈಮಂಡ್ ಲೀಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಆ್ಯತ್ಲೀಟ್ ಎಂಬ ಹೆಗ್ಗಳಿಕೆ ನೀರಜ್ ಅವರದಾಗಿತ್ತು.
ಯುಎಸ್‌ಎ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ವೇಳೆ ಗಾಯಾಳಾಗಿದ್ದ ನೀರಜ್ ಚೋಪ್ರಾ, ಅನಂತರದ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಟೂರ್ನಿಯನ್ನು ತಪ್ಪಿಸಿಕೊಳ್ಳಬೇಕಾಯಿತು. ಆದರೆ ಲುಸಾನ್ನೆಯಲ್ಲಿ ಭರ್ಜರಿ ಪುನರಾಗಮನ ಸಾರಿದರು.
ನೀರಜ್ ಚೋಪ್ರಾ 2017 ಮತ್ತು 2018ರ ಡೈಮಂಡ್ ಲೀಗ್ ಫೈನಲ್ಸ್‌ಗೂ ಆಯ್ಕೆಯಾಗಿದ್ದರು. ಅಲ್ಲಿ ಕ್ರಮವಾಗಿ 7ನೇ ಹಾಗೂ 4ನೇ ಸ್ಥಾನಿಯಾಗಿದ್ದರು.
6 ಜಾವೆಲಿನ್ ಸ್ಪರ್ಧಿಗಳ ಫೈನಲ್ಸ್‌ನಲ್ಲಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ ಪಾಲ್ಗೊಳ್ಳುತ್ತಿಲ್ಲ. ಅವರು ಗಾಯಾಳಾಗಿದ್ದಾರೆ. ಹೀಗಾಗಿ ಜೆಕ್ ಗಣರಾಜ್ಯದ ಜಾಕುಬ್ ವಾಲೆªಶ್ ಭಾರತೀಯನ ಪ್ರಬಲ ಎದುರಾಳಿಯಾಗಲಿದ್ದಾರೆ. ಅವರು 27 ಅಂಕಗಳೊಂದಿಗೆ ಫೈನಲ್ಸ್ ತಲುಪಿದ್ದಾರೆ. ನೀರಜ್ ಚೋಪ್ರಾಗೆ 4ನೇ ಸ್ಥಾನ (15 ಅಂಕ).