Advertisement

ನಿರ್ಣಾಯಕ ನಿರ್ಧಾರ ಕೈಗೊಳ್ಳಲಿ ಸಾಧಿಸಲು ಬೇಕಾದಷ್ಟಿದೆ

11:35 AM May 26, 2018 | Harsha Rao |

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿ ನಾಲ್ಕು ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಸರಕಾರದ ಸಾಧನೆ ಮತ್ತು ವೈಫ‌ಲ್ಯಗಳ ಕುರಿತು ಮೌಲ್ಯಮಾಪನ ಮಾಡುವುದು ಸಹಜ ಪ್ರಕ್ರಿಯೆ. ಹಾಗೆ ತಕ್ಕಡಿಗೆ ಹಾಕಿದರೆ ಸಾಧನೆಗಳ ತಟ್ಟೆಯೇ ಹೆಚ್ಚು ತೂಗುತ್ತದೆ. ಹಾಗೆಂದು ವಿಫ‌ಲವಾಗಿಯೇ ಇಲ್ಲ ಎಂದಲ್ಲ.

Advertisement

ಯಾವುದೇ ಸರಕಾರದ ಮೌಲ್ಯಮಾಪನ ಮಾಡುವಾಗ ಆರ್ಥಿಕ, ಅಂತಾರಾಷ್ಟ್ರೀಯ, ಸಾಮಾಜಿಕ, ರಾಜಕೀಯ ಕ್ಷೇತ್ರಗಳನ್ನು ಆದ್ಯತೆಯಲ್ಲಿ ಪರಿಗಣಿಸುವುದು ವಾಡಿಕೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗಣನೀಯ ಎನ್ನುವಂತಹ ಸಾಧನೆಯನ್ನೇ ಮಾಡಿದೆ. ಜಿಎಸ್‌ಟಿಯನ್ನು ಜಾರಿಗೊಳಿಸುವ ಮೂಲಕ ಸರಕಾರ ಇಡೀ ಆರ್ಥಿಕ ವ್ಯವಸ್ಥೆಯನ್ನು ಹೊಸ ದಿಕ್ಕಿಗೆ ತಿರುಗಿಸಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದಾಗಿ ಆರಂಭದಲ್ಲಿ ಸಮಸ್ಯೆಗಳಾಗಿದ್ದರೂ ಈಗ ಇವೆರಡು ಅತ್ಯಂತ ಯಶಸ್ವೀ ನಿರ್ಧಾರಗಳು ಎಂದು ಅನುಭವಕ್ಕೆ ಬರುತ್ತದೆ. ಈ ಎರಡು ದಿಟ್ಟ ನಿರ್ಧಾರಗಳ ಬಳಿಕವೂ ದೇಶದ ಜಿಡಿಪಿ ಸ್ಥಿರವಾಗಿದೆ. ಅಂತೆಯೇ ಹಣದುಬ್ಬರವನ್ನು ನಿಯಂತ್ರಿಸಿ ಬೆಲೆಯೇರಿಕೆಯನ್ನು ತಡೆಯುವಲ್ಲಿ ಸರಕಾರ ಯಶಸ್ವಿಯಾಗಿದೆ. ಆದರೆ ಇದೇ ವೇಳೆ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಏರಿಕೆ ತಡೆಯದೆ ಟೀಕೆಗೂ ಗುರಿಯಾಗಿದೆ.

ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಗೆ ಮೋದಿ ಕೈಗೊಂಡಿರುವ ನಿರ್ಧಾರಗಳೆಲ್ಲ ಫ‌ಲ ನೀಡುತ್ತಿವೆ.  ಸಾಮಾಜಿಕ ಪರಿವರ್ತನೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇವುಗಳೆಲ್ಲ ಸಂಪೂರ್ಣವಾಗಿ ಗುರಿಮುಟ್ಟಿರದಿದ್ದರೂ ಭವಿಷ್ಯದಲ್ಲಿ ಸದೃಢ ಸಮಾಜ ನಿರ್ಮಿಸಲು ಬುನಾದಿಯಾಗಬಹುದು. 

ರಾಜಕೀಯವಾಗಿ ಮೋದಿಯದ್ದು ತಡೆಯಿಲ್ಲದ ಓಟ. 2014ರ ಬಳಿಕ ನಡೆದ ಹೆಚ್ಚಿನೆಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಸರಕಾರವೇ ಇದೆ. ಅದೇ ರೀತಿ ರಾಜಕೀಯವಾಗಿ ಅತಿ ಹೆಚ್ಚು ಜನಪ್ರಿಯತೆಯನ್ನು ಸಂಪಾದಿಸಿದ ಹಾಗೂ ಇದೇ ವೇಳೆ ಅತಿ ಹೆಚ್ಚು ವಿರೋಧಿಸಲ್ಪಟ್ಟ ನಾಯಕ ಮೋದಿ. ಮೋದಿ ಪ್ರಭಾವ ಎಷ್ಟು ದಟ್ಟವಾಗಿವೆ ಎಂದರೆ 2019ರಲ್ಲಿ ಎನ್‌ಡಿಎ ಗೆಲುವಿನ ಓಟವನ್ನು ತಡೆಯುವ ಸಲುವಾಗಿ ಎಲ್ಲ ವಿಪಕ್ಷಗಳು ಒಂದಾಗಿವೆ. ವಿಶೇಷವೆಂದರೆ ಕಾಂಗ್ರೆಸ್‌ ಈ ಪ್ರಾದೇಶಿಕ ಪಕ್ಷಗಳ ಕಿರಿಯ ಪಾಲುದಾರನಾಗಲು ಕೂಡಾ ತಯಾರಾಗಿದೆ. 

ಜನಜೀವನದ ಮೇಲೆ ಗುಣಾತ್ಮಕ ಪರಿಣಾಮಗಳನ್ನು ಬೀರುವಲ್ಲಿ ಸಫ‌ಲವಾದ ಸರಕಾರವನ್ನು ಯಶಸ್ವಿ ಸರಕಾರ ಎಂದು ಪರಿಭಾವಿಸುತ್ತೇವೆ. ಈ ಮಾನದಂಡದ ಪ್ರಕಾರ ಹೇಳುವುದಾದರೆ ಮೋದಿ ಇನ್ನೂ ಸಾಧಿಸಲು ಬೇಕಾದಷ್ಟಿದೆ.ಇದೇ ವೇಳೆ ಕಪ್ಪುಹಣವನ್ನು ತರುವಂತಹ ಜನಪ್ರಿಯ ಘೋಷಣೆಯನ್ನು ಈಡೇರಿಸಲು ಸಾಧ್ಯವಾಗದೆ ಇರುವುದು ಸರಕಾರದ ಜನಪ್ರಿಯತೆಯ ಓಟಕ್ಕೂ ತಡೆಯಾಗಿದೆ.  ಇನ್ನೊಂದು ವರ್ಷದಲ್ಲಿ ಈ ನಿಟ್ಟಿನಲ್ಲಿ ಸರಕಾರ ಯಾವಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದು ಮುಖ್ಯ. ಕೊನೆಯ ವರ್ಷದಲ್ಲಿ ಸರಕಾರ ಮಾಡುವ ಸಾಧನೆಯೇ ಜನರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವುದರಿಂದ  ಮೋದಿ ಸರಕಾರ ನಿರ್ಣಾಯಕವಾದ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ. 

Advertisement
Advertisement

Udayavani is now on Telegram. Click here to join our channel and stay updated with the latest news.

Next