Advertisement

ಮಹಿಳಾ ಮೀಸಲಾತಿಗೆ ಹೋರಾಟ ಅಗತ್ಯ: ದಿನೇಶ್‌ಗುಂಡೂರಾವ್‌

06:00 AM Sep 08, 2018 | Team Udayavani |

ಬೆಂಗಳೂರು:ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ಕಾನೂನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಮಹಿಳಾ ಶಾಸಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಧೇಯಕ ಯುಪಿಎ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು ಲೋಕಸಭೆಯಲ್ಲಿ ಬಹುಮತದ ಕೊರತೆಯಿಂದ ಅಂಗೀಕಾರಗೊಂಡಿಲ್ಲ. ಈಗ ಎನ್‌ಡಿಎಗೆ ಸ್ಪಷ್ಟ ಬಹುಮತ ಇದ್ದರೂ ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸದೇ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದು  ಈ ಬಗ್ಗೆ ಹೋರಾಟ ನಡೆಸಬೇಕು ಎಂದು ಹೇಳಿದರು.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ತರುವುದಾಗಿ ಹೇಳಿತ್ತು. ಆದರೆ, ಈಗ ಮೌನ ವಹಿಸಿದೆ. ದೇಶದಲ್ಲಿ ಯಾವುದೇ ಪ್ರಗತಿಪರವಾದ ಕೆಲಸವನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ. ಮಹಿಳಾ ಮೀಸಲಾತಿ, ಹಿಂದುಳಿದ ವರ್ಗದವರಿಗೆ ಮೀಸಲಾತಿ, ಆರ್‌ಟಿಇ, ಆಹಾರ ಭದ್ರತೆ ಕಾಯ್ದೆ ಎಲ್ಲವನ್ನೂ ಬಿಜೆಪಿ ವಿರೋಧಿಸುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

ನಮ್ಮ ಸಮಾಜದಲ್ಲಿ ಮಹಿಳೆ ಸಬಲರಾಗಿದ್ದರೂ ಮುಕ್ತವಾಗಿ ಒಪ್ಪಿಕೊಳ್ಳುವ ಮನಸ್ಥಿತಿ ಬಂದಿಲ್ಲ. ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50 ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಿ ನಾಯಕತ್ವ ಗುಣ ಬೆಳೆಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕಿಯರು ಸ್ವಂತ ಶಕ್ತಿಯಿಂದ ಹೋರಾಟ ಮಾಡಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.

ಖಾನಾಪುರ ಹಾಗೂ ಕೆಜಿಎಫ್ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಸ್ತಿತ್ವವೇ ಇಲ್ಲದಿದ್ದರೂ, ಮಹಿಳಾ ನಾಯಕಿಯರು ಆ ಕ್ಷೇತ್ರಗಳಲ್ಲಿ ಪಕ್ಷದ ಪರವಾಗಿ ಹೋರಾಟ ಮಾಡಿ ಗೆಲುವು ಪಡೆದಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕಿ ಸೌಮ್ಯಾ ರೆಡ್ಡಿ, ನಮ್ಮ ತಂದೆ ರಾಜಕೀಯದಲ್ಲಿ ಇರದಿದ್ದರೆ, ನನಗೂ ಅವಕಾಶ ಸಿಗುತ್ತಿರಲಿಲ್ಲ.  ರಾಜಕೀಯದಲ್ಲಿ ಮಹಿಳೆಯರು ಬೆಳೆಯಲು ಬಿಡುವುದಿಲ್ಲ. ನಾವೆಲ್ಲರೂ ಸಹೋದರಿಯರ ಹಾಗೆ ಇದ್ದು ಮತ್ತಷ್ಟು ಮಹಿಳೆಯರು ರಾಜಕಾರಣಕ್ಕೆ ಬಂದು ಗೆಲ್ಲುವಂತೆ ಮಾಡಬೇಕು ಎಂದು ಹೇಳಿದರು.

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌, ಮಹಿಳೆಯರು ಉನ್ನತ ಮಟ್ಟಕ್ಕೇರಲು ಸಾವಿತ್ರಿ ಬಾಯಿ ಫ‌ುಲೆ ಕಾರಣ ಅಲ್ಲದೇ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರ ತ್ಯಾಗ ನಮಗೆಲ್ಲ ಸ್ಪೂರ್ತಿಯಾಗಿದೆ. ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್‌ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು ಉಪಸ್ಥಿತರಿದ್ದರು. ನೂತನ ಶಾಸಕಿಯರದಾರ ಲಕ್ಷ್ಮೀ ಹೆಬ್ಟಾಳ್ಕರ್‌, ರೂಪಾ ಶಶಿಧರ್‌ ಹಾಗೂ ಫಾತೀಮಾ ಖತೀಜ್‌ ಗೈರು ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next