ಶಿರಸಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕಾಯಕಲ್ಪ ನೀಡದಿದ್ದರೆ ಉತ್ತರ ಕರ್ನಾಟಕದ ಭವಿಷ್ಯಕ್ಕೆ ಆತಂಕ ಎದುರಾಗಲಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಎಂಟು ದಿನದಲ್ಲಿ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ವಾಯವ್ಯ ಸಾರಿಗೆ ಮೂಲಕ 9 ಜಿಲ್ಲೆಗಳಲ್ಲಿ 5.36 ಲಕ್ಷ ವಿದ್ಯಾರ್ಥಿಗಳಿಗೆ ಈ ವರ್ಷ ಬಸ್‌ಪಾಸ್ ವಿತರಿಸಲಿದ್ದೇವೆ. ವಿದ್ಯಾರ್ಥಿಗಳಿಂದ ಶೇ.8 ಮಾತ್ರ ಹಣ ಪಡೆದು ಉಳಿದ ಶೇ.42 ರಷ್ಟನ್ನು ನಿಗಮ ಭರಿಸುತ್ತಿದೆ. ಇದು ನಿಗಮಕ್ಕೆ ದೊಡ್ಡ ಹೊರೆಯಾಗಿದೆ ಎಂದು ಹೇಳಿದರು. 70 ಕೋಟಿ ರೂ.ಗಳಷ್ಟು ಹಣವನ್ನು ನೌಕರರಿಗೆ ನೀಡಬೇಕಿದೆ. ವಾರ್ಷಿಕ 30 ಕೋಟಿ ರೂ. ಪಿಎಫ್ ಹಣ ತುಂಬುವುದೂ ಸಮಸ್ಯೆಯಾಗುತ್ತಿದೆ. ರಾಜ್ಯ ಸರ್ಕಾರದಿಂದ ಬರಬೇಕಾದ ಹಣ ಬಂದರೆ ನಿಗಮದ ಕಷ್ಟ ದೂರವಾಗಲಿದೆ ಎಂದು ಹೇಳಿದರು.
ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ. ನನ್ನನ್ನು ಬಿಜೆಪಿಯವರು ಭೇಟಿಯಾಗಿದ್ದು ನಿಜ. ಎಲ್ಲರನ್ನೂ ನಾನು ಭೇಟಿಯಾಗುತ್ತೇನೆ. ಆದರೆ, ಸಮ್ಮಿಶ್ರ ಸರ್ಕಾರಕ್ಕೆ ಇದು ಏಟಲ್ಲ. ಸರಕಾರ ಭದ್ರವಾಗಿದೆ. ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ.
-ಶಿವರಾಮ್ ಹೆಬ್ಬಾರ್, ಅಧ್ಯಕ್ಷ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ