ಹುನಗುಂದ: ತಾಲೂಕಿನ ವೀರಾಪುರ ಅವ್ಯವಸ್ಥೆಯ ಆಗರವಾಗಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ಮುಖ್ಯ ರಸ್ತೆ ಕೆಸರಿನ ಗದ್ದೆಯಂತಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯುದ್ದಕ್ಕೂ ಅಲ್ಲಲ್ಲಿ ನೀರು ನಿಂತ ಪರಿಣಾಮ ದುರ್ನಾತ ಬೀರುತ್ತಿದೆ. ಇಂತಹ ಸ್ಥಿತಿ ಗ್ರಾಮದ ರಸ್ತೆಗಳುದ್ದಕ್ಕೂ ಕಾಣಸಿಗುತ್ತದೆ. ಈ ರಸ್ತೆಯಲ್ಲಿಯೇ ಸಾರ್ವಜನಿಕರು ಸಂಚರಿಸಬೇಕಾದ ದುಃಸ್ಥಿತಿ ಬಂದಿದೆ. ಗ್ರಾಮದಲ್ಲಿದ್ದರೂ ಅ ಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಗ್ರಾಮವು ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಸುಳಿದಿಲ್ಲ. ಮಳೆ ಬಂದರಂತೂ ಜನರ ಗೋಳು ಹೇಳತೀರದು. ಊರಿನ ರಸ್ತೆಗಳೆಲ್ಲಿ ಮಳೆನೀರು ನಿಲ್ಲುತ್ತದೆ.
ಇದರಿಂದ ಕ್ರಿಮಿಕೀಟಗಳು ಸೇರಿದಂತೆ ಸೊಳ್ಳೆಗಳ ಹಾವಳಿ ಹೆಚ್ಚಾಗಿ ರೋಗ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ದುರ್ನಾತ ಬೀರುತ್ತಿದ್ದರೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕನಿಷ್ಟ ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ರಾಸಾಯನಿಕ ಔಷಧ ಸಿಂಪಡಣೆ ಕಾರ್ಯ ನಡೆದಿಲ್ಲ. ಗ್ರಾಮಸ್ಥರು ನಿತ್ಯ ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಿದೆ.
ನೀರು ಸರಾಗವಾಗಿ ಸಾಗಲು ಸರಿಯಾದ ಚರಂಡಿ ವ್ಯವಸ್ಥೆ ಗ್ರಾಮ ಪಂಚಾಯಿತಿನವರು ಮಾಡಿಲ್ಲ, ಗ್ರಾಮಕ್ಕೆ ಅಪರೂಪಕ್ಕೊಮ್ಮೆ ಭೇಟಿ ನೀಡುವ ಅಧಿಕಾರಿಗಳು ಕೆಲಸ ಮಾಡುವುದಾಗಿ ಮಾತ್ರ ಭರವಸೆ ನೀಡುತ್ತಿದ್ದಾರೆ. ಸಮಸ್ಯೆಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ನಮ್ಮ ಗೋಳು ಕೇಳುವವರು ಯಾರು? ಇಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆಗೆ ಹೊಂದಿಕೊಂಡು ಸರ್ಕಾರಿ ಶಾಲೆ ಇದ್ದು, ಮಕ್ಕಳು ಈ ದುರ್ವಾಸನೆಯಲ್ಲಿ ಅಕ್ಷರ ಕಲಿಯಲು ಶಾಲೆಗೆ ಬರಲು ಹಿಂದೇಟು ಹಾಕುವಂತಾಗಿದೆ.
ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ಕುಡಿಯುವ ನೀರು ತಲುಪಿಸುವ ಯೋಜನೆಯಾದ ಜಲಜೀವನ ಮಿಷನ್ ಕಾಮಗಾರಿಗೆ ಲಕ್ಷಾಂತರ ರೂ, ಅನುದಾನ ಬಿಡುಗಡೆ ಮಾಡಿದೆ. ಗ್ರಾಮದಲ್ಲಿ ಕಾಮಗಾರಿ ಆರಂಭ ಮಾಡಿದ್ದು ಪೈಪ್‌ಲೈನ್ ಕಾರ್ಯ ವ್ಯವಸ್ಥಿತವಾಗಿ ಆಗಿಲ್ಲ.
ಪ್ರವೀಣ ವಡಗೇರಿ ಗ್ರಾಮಸ್ಥ
ಸರ್ಕಾರದಿಂದ ಹಣ ಮಂಜೂರಾಗಿದೆ. ಶೀಘ್ರ ರಸ್ತೆ ಕಾಮಗಾರಿ ಆರಂಭಿಸಲಾಗುವುದು.
*ಎಸ್.ಬಿ.ಅಕ್ಕಿ ಹಿರೇಬಾದವಾಡಗಿ
ಗ್ರಾ,ಪಂ ಪಿಡಿಒ.