Advertisement

ಕೆಸರುಮಯ ಹಳ್ಳ-ಗುಂಡಿ ರಸ್ತೆಗೆ ಶೀಘ್ರ ಬೇಕಿದೆ ಕಾಯಕಲ್ಪ

07:00 PM Jul 18, 2019 | sudhir |

ಬೆಳ್ತಂಗಡಿ: ನಾಗರಿಕತೆ ಎಷ್ಟೇ ಮುಂದುವರಿದಿದ್ದರೂ ಇಂದಿಗೂ ವಿದ್ಯುತ್‌, ರಸ್ತೆ ಸಹಿತ ಮೂಲ ಸೌಕರ್ಯಗಳಿಂದ ವಂಚಿತವಾದ ಅದೆಷ್ಟೋ ಕುಟುಂಬಗಳು ಬೆಳ್ತಂಗಡಿ ತಾಲೂಕಿನಲ್ಲಿ ಕತ್ತಲ ಹಾದಿಯಲ್ಲಿ ಜೀವನ ಸಾಗಿಸುತ್ತಿದೆ.

Advertisement

ನಾವೂರು ಗ್ರಾಮದ ಕೈಕಂಬದಿಂದ ನಾಲ್ಕೈದು ಕಿ.ಮೀ. ದೂರ ಸಾಗಿದರೆ ಕುದೊRàಳಿ ಎಂಬ ಪ್ರದೇಶ ಸಿಗುತ್ತದೆ. ಅಲ್ಲಿಂದ ಮುಂದೆ ಭಜನ ಮಂದಿರ, ಪುಲಿತ್ತಡಿ, ಅಲ್ಯ, ಮಲ್ಲ, ಮುತ್ತಾಜೆ, ಎರ್ಮೆಲೆ, ಮಂಜಳ ಪ್ರದೇಶದಲ್ಲಿ ಸುಮಾರು 25 ಕುಟುಂಬ ಗಳು ಕಾಡಿನ ನಡುವೆ ವಾಸಿಸುತ್ತಿವೆ. 250ಕ್ಕೂ ಹೆಚ್ಚು ಜನರಿರುವ ಈ ಕುಟುಂಬಗಳು ಮೂಲ ಸೌಕರ್ಯಕ್ಕಾಗಿ ಹಾತೊರೆಯುತ್ತಿರುವುದು ಇಂದು ನಿನ್ನೆಯ ಕಥೆಯಲ್ಲ; ಶತಮಾನಗಳಂಚಿನ ವ್ಯಥೆ.

ಅನೇಕ ಸರಕಾರಗಳು, ಶಾಸಕರು, ಸಚಿವರು ಬಂದು ಹೋದರೂ ಇವರ ಸಮಸ್ಯೆ ಪರಿಹರಿಸುವಲ್ಲಿ ಮುತುವರ್ಜಿ ತೋರಿಲ್ಲ. ತಾಲೂಕು ಕೇಂದ್ರದಿಂದ ಕೇವಲ 20 ಕಿ.ಮೀ. ದೂರದ ಈ ಪ್ರದೇಶಗಳನ್ನು ಸಂಪರ್ಕಿಸುವ ಸುಮಾರು 12 ಕಿ.ಮೀ. ದೂರದ ರಸ್ತೆ ಇನ್ನೂ ಡಾಮರು ಕಂಡಿಲ್ಲ. ಕಲ್ಲು, ಮರದ ಬೇರು, ಗುಂಡಿ ಹೊಂದಿರುವ ರಸ್ತೆಯೇ ಇವರ ಪಾಲಿಗೆ ರಾಷ್ಟ್ರೀಯ ಹೆದ್ದಾರಿ. ವಿದ್ಯುತ್‌ ಸಂಪರ್ಕವಂತೂ ಕನಸಿನ ಮಾತು. ಶತಮಾನಗಳಿಂದಲೂ ಚಿಮಿಣಿ ದೀಪವೇ ಇವರಿಗೆ ವಿದ್ಯುತ್‌ ಸಂಪರ್ಕ. ಹಳ್ಳ – ತೊರೆಗಳನ್ನು ದಾಟಲು ಅಡಿಕೆ ಮರ, ಕಾಡು ಮರಗಳಿಂದ ನಿರ್ಮಾಣಗೊಂಡ ಪಾಲ (ಪಾಪು) ಇವರ ಪಾಲಿಗೆ ಸುಸಜ್ಜಿತ ಸೇತುವೆ.

ಪರಾರಿಗುಡ್ಡೆಗೆ ಬೇಕಿದೆ ಅನುದಾನ
ಮಲವಂತಿಗೆ ಗ್ರಾ.ಪಂ. ವ್ಯಾಪ್ತಿಗೆ ಬರುವ ಪರಂಬೇರಿನಲ್ಲಿ 25 ಗಿರಿಜನ ಕುಟುಂಬ ವಾಸವಾಗಿದ್ದು ದೈನಂದಿನ ಜೀವನಕ್ಕೆ ಹರಸಾಹಸ ಪಡಬೇಕಾಗಿದೆ. ಮಲವಂತಿಗೆ ಪಂ.ನಿಂದ 3 ಕಿ.ಮೀ. ದೂರದಲ್ಲಿರುವ ಕಾಲನಿ ರಸ್ತೆ ಸ್ಥಿತಿ ಅಯೋಮಯ. ರಸ್ತೆ ಸಂಪೂರ್ಣ ಕೆಸರು ಮತ್ತು ಹೊಂಡದಿಂದ ಕೂಡಿದ್ದು, ವಾಹನ ಗಳು, ಶಾಲಾ ಮಕ್ಕಳು ದಿನಂಪ್ರತಿ 25 ಕಿ.ಮೀ. ಸಾಗಿ ಉಜಿರೆಗೆ ಹೋಗಿ ಬರಬೇಕಾಗಿದೆ.

ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆಗೆ ತೆರಳಲು ನಂದಿಕಾಡು ಹೊಳೆ ದಾಟಿ ಬರಬೇಕು. ಮಳೆಗಾಲದಲ್ಲಿ ಗಂಟೆಗಟ್ಟಲೆ ನಿಂತು ನೀರು ಕಡಿಮೆಯಾದ ಮೇಲೆ ಬರಬೇಕಾಗುತ್ತದೆ. ಈ ಕುರಿತು ಐಟಿಡಿಪಿ, ಸಂಸದರು, ಸರಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಮುಷ್ಕರದ ಎಚ್ಚರಿಕೆ
ಗಿರಿಜನರು ಕಚೇರಿ ಅಲೆದಾಡಿ ಸುಸ್ತಾಗಿದ್ದಾರೆ. ಕುಂದುಕೊರತೆ ಸಭೆಗಳು ಫಲ ನೀಡಿಲ್ಲ. ಸಮಸ್ಯೆಗೆ ಸ್ಪಂದಿಸದಿದ್ದರೆ ಸ್ವಾತಂತ್ರÂ ದಿನಾಚರಣೆಯಂದು ತಹಶೀಲ್ದಾರ್‌ ಕಚೇರಿ ಮುಂದೆ ಕಪ್ಪು ಬಾವುಟ ಹಿಡಿದು ಮುಷ್ಕರ ಕೈಗೊಳ್ಳುವುದಾಗಿ ನಿರ್ಧರಿಸಿದ್ದೇವೆ ಎಂದು ಕಾಲನಿ ನಿವಾಸಿಗಳು ಎಚ್ಚರಿಸಿದ್ದಾರೆ.

ಇಳಂತಿಲ ಗ್ರಾಮದ ಹಾರೆಕೆರೆ
ಇಲ್ಲಿನ ಹಾರೆಕೆರೆ ಸುದೆಪಿಲ ರಸ್ತೆ ಕೆಸರುಮಯ ವಾಗಿದ್ದು, ಬೇಸಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರಿನ ಕೂಪವಾಗಿ ನಿರ್ಮಾಣವಾಗುತ್ತಿದೆ. ಪಂಚಾಯತ್‌ ಅನುದಾನದಿಂದ ಕಳೆದ 5 ವರ್ಷಗಳಿಂದ ಕಾಮಗಾರಿ ಮಾಡಿದ್ದೇವೆ ಎಂದು ಪಂಚಾಯತ್‌ ಅಧ್ಯಕ್ಷರು ಪ್ರತಿಕ್ರಿಯಿಸುತ್ತಾರೆ. ಆದರೆ ಕೆಲಸ ನಡೆದಿರುವ ಕುರಿತು ಮಾಹಿತಿ ಇಲ್ಲ.

ಡಾಮರು ರಸ್ತೆಗೆ ಊರವರು ಪ್ರತಿ ಗ್ರಾಮ ಪಂಚಾಯತ್‌ ಸಭೆಯಲ್ಲಿ ಮನವಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ. ಸುಮಾರು 25 ಮನೆಗಳಿರುವ ಈ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. 4 ಕಡೆ ಮೋರಿ ಕಾಮಗಾರಿ ನಡೆಸಿದೆ, ಅಲ್ಪಸ್ವಲ್ಪ ಹಾಕಿರುವ ಜಲ್ಲಿ ಮಳೆಗಾಲದಲ್ಲಿ ಕಣಿ ಸೇರಿದೆ. ಇತ್ತೀಚೆಗೆ ಇದೇ ಭಾಗದ ಕಾಯರ್ಪಾಡಿ- ಊಂತನಾಜೆ ರಸ್ತೆ ನಿರ್ಮಾಣಕ್ಕೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದರು.

ರಸ್ತೆ ನಿರ್ಮಾಣಕ್ಕೆ ಕ್ರಮ
ಈ ಹಿಂದೆ 20 ಲಕ್ಷ ರೂ. ಅನುದಾನದಲ್ಲಿ 3 ಕಿ.ಮೀ. ರಸ್ತೆ ನಿರ್ಮಿಸಲಾಗಿತ್ತು. ಜಿ.ಪಂ. ಸದಸ್ಯರು ಅನುದಾನ ಮೀಸಲಿರಿಸುವುದಾಗಿ ಭರವಸೆ ನೀಡಿದ್ದಾರೆ. ಗ್ರಾಮ ಸಡಕ್‌ ಯೋಜನೆಯಡಿ ಸೇರಿಸುವ ಕುರಿತಾಗಿ ಶಾಸಕರು ಭರವಸೆ ನೀಡಿದ್ದಾರೆ. ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
– ಭಾಸ್ಕರ್‌ ಡಿ. ಅಧ್ಯಕ್ಷರು, ಮಲವಂತಿಗೆ ಗ್ರಾ.ಪಂ.

 ಮೂಲ ಸೌಕರ್ಯವಿಲ್ಲ
ಮೂಲ ಸೌಕರ್ಯಗಳಿಗೆ ತಾಲೂಕು ಆಡಳಿತದಿಂದ ಹಿಡಿದು ವಿಧಾನಸೌಧ
ಬಾಗಿಲು ತಟ್ಟಿದ್ದರೂ ಇಂದಿಗೂ ನಮ್ಮ ಊರಿಗೆ ರಸ್ತೆ, ವಿದ್ಯುತ್‌ ದೊರಕಿಲ್ಲ. ಕಾಡಿನ ಮಕ್ಕಳನ್ನು ಸರಕಾರಗಳು ಕಡೆಗಣಿಸಿವೆ. ನಮ್ಮ ಮತ ನಮ್ಮ ಹಕ್ಕು ಇದ್ದಂತೆ ಸವಲತ್ತು ನೀಡಬೇಕಾದದ್ದು ಸರಕಾರದ ಜವಾಬ್ದಾರಿಯಲ್ಲವೇ?
– ಕೊರಗ ಮಲೆಕುಡಿಯ ಎರ್ಮಲೆ ನಾವೂರು

 ತಾತ್ಕಾಲಿಕ ಕ್ರಮ
ಕಳೆದ ಐದು ವರ್ಷಳಿಂದ ಜಿಲ್ಲಾ ಪಂಚಾಯತ್‌ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ರಸ್ತೆ ನಿರ್ಮಾಣವಾಗಬೇಕಿದ್ದರಿಂದ ದೊಡ್ಡ ಮೊತ್ತದ ಅನುದಾನ ಮೀಸಲಿರಿಸಬೇಕಾಗುತ್ತದೆ. ಸಮಸ್ಯೆ ಸರಿಪಡಿಸಲು ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುವುದು.
– ಯು.ಕೆ. ಇಸುಬು ಅಧ್ಯಕ್ಷರು, ಇಳಂತಿಲ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next