ಗದಗ: ಯಾರೋ ಟೀಕೆ ಮಾಡುತ್ತಾರೆಂದು ಮುಖ್ಯಮಂತ್ರಿಗಳು ನಡು ರಸ್ತೆಯಲ್ಲಿ ಲಾಠಿ ಹಿಡಿದು ನಿಲ್ಲಲು ಸಾಧ್ಯವಿಲ್ಲ. ಯಾವುದೋ ಸರ್ಕಲ್ ನಲ್ಲಿ ನಿಂತು ಚರ್ಚೆ ಮಾಡುವ ಅಗತ್ಯವೂ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಸಮೀಪದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಆವರಣದಲ್ಲಿ ಗೋಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಸವಣ್ಣನೂ ಹೌದು, ಬಸವರಾಜೂ ಹೌದು. ಆದರೆ, ಮೂಖ ಬಸವಣ್ಣ ಅಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಆದರೂ, ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶ ಮಾಡುತ್ತಿಲ್ಲ ಎಂಬ ಹೇಳಿಕೆ ಸರಿಯಲ್ಲ” ಎಂದರು.
“ನಮಗೆ ರಾಜ್ಯದ ಜನತೆ ಅಧಿಕಾರ ಕೊಟ್ಟಿದ್ದಾರೆ. ಅವರ ಬೇಕು, ಬೇಡಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಮಾಡಲು ಕೆಲಸವಿಲ್ಲ. ವಿನಾಕಾರಣ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಇದನ್ನೂ ಓದಿ:ಮುಸ್ಕಾನ್ ಗೆ ಅಲ್ ಖೈದಾ ಬೆಂಬಲ; ಅನಂತ ಕುಮಾರ್ ಹೆಗಡೆ ಬಳಿ ಚರ್ಚೆ: ಸಿಎಂ
ರಷ್ಯಾ- ಉಕ್ರೇನ್ ಯುದ್ಧ ಪರಿಣಾಮ ಕಚ್ಛಾ ತೈಲಬೆಲೆಗಳು ಏರಿಕೆಯಾಗಿವೆ. ಪರಿಸ್ಥಿತಿ ತಿಳಿಯಾದ ಬಳಿಕ ಬೆಲೆಗಳು ಇಳಿಕೆಯಾಗಲಿವೆ ಎಂದರು.
ಕೃಷಿ ಇಲಾಖೆಯಲ್ಲಿ ಶೇ.50 ರಷ್ಟು ಹುದ್ದೆಗಳಿ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಕೋರಿದ್ದೇನೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ರಾಜ್ಯ ದ್ರಾಕ್ಷಾರಸ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ ಉಪಸ್ಥಿತರಿದ್ದರು.