ಬೆಂಗಳೂರು: ರಾಜ್ಯದಲ್ಲಿ 2018ರ ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಂತೆ ಒಂದೆಡೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದ್ದರೆ, ಮತ್ತೂಂದಡೆ ಚುನಾವಣಾ ಆಯೋಗ ಸಿದ್ಧತಾ ಕಾರ್ಯಗಳನ್ನು ಚುರುಕುಗೊಳಿಸಿದೆ.
ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಹಾಗೂ ದಿಲೀಪ್ ಶರ್ಮಾ ಪ್ರಧಾನ ನಿರ್ದೇಶಕ (ಚುನಾವಣಾ ವೆಚ್ಚ) ನೇತೃತ್ವದ 6 ಜನ ಹಿರಿಯ ಅಧಿಕಾರಿಗಳ ತಂಡ ಮಂಗಳವಾರ ಇಡೀ ದಿನ ರಾಜಕೀಯ ಪಕ್ಷಗಳ ಮುಖಂಡರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳ ಸರಣಿ ಸಭೆಗಳನ್ನು ನಡೆಸಿ ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿತು. ಚುನಾವಣೆ ದೃಷ್ಠಿಯಿಂದ ಮುಂಬರುವ ತಿಂಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಆದ್ಯತಾವಾರು ವರ್ಗೀಕರಿಸಿ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗುವಂತೆ ಅಧಿಕಾರಿಗಳಿಗೆ ಕೇಂದ್ರದ ತಂಡ ಸೂಚನೆ ನೀಡಿದೆ.
ವಿಶೇಷವಾಗಿ ಎಲ್ಲ ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಜತೆಗೆ ಸೂಕ್ಷ್ಮ ಜಿಲ್ಲೆಗಳ ಕಾನೂನು ಪರಿಸ್ಥಿತಿಯ ಬಗ್ಗೆ ಕೂಲಂಕಷವಾದ ಮಾಹಿತಿ ಪಡೆದುಕೊಳ್ಳಲಾಗಿದೆ. ಜತೆಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಅದರ ಸಿದ್ಧತೆಗಳ ಬಗ್ಗೆಯೂ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಕೇಂದ್ರದ ತಂಡ ಮಾಹಿತಿ ಪಡೆದುಕೊಂಡಿತು ಎಂದು ಹೇಳಲಾಗಿದೆ. ಇದಲ್ಲದೆ, 2013ರ ಚುನಾವಣಾ ಪ್ರಕ್ರಿಯೆ, ಮತದಾನ, ಮತ ಎಣಿಕೆ ಕಾರ್ಯದ ವೇಳೆ ಆದ ಚುನಾವಣಾ ಅಕ್ರಮಗಳು ಮತ್ತು ಗಲಾಟೆಗಳ ವಿವರಣೆ ಪಡೆದುಕೊಂಡ ಕೇಂದ್ರದ ತಂಡ, ಈ ಸಂಬಂಧ ಕೈಗೊಳ್ಳಲಾದ ಕಾನೂನು ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿತು. ಅದೇ ರೀತಿ ಫೆಬ್ರವರಿಯಿಂದ ಮೇವರೆಗೆ ರಾಜ್ಯದಲ್ಲಿ ನಡೆಯುವ ಪ್ರಮುಖ ಜಾತ್ರೆ, ಉತ್ಸವಗಳು, ಧಾರ್ಮಿಕ ಆಚರಣೆಗಳು ಯಾವುವು, ಅದರ ಭದ್ರತೆಗೆ ಪೊಲೀಸರು ಕೈಗೊಂಡ ಕ್ರಮಗಳೇನು, ಇದೇ ಅವಧಿಯಲ್ಲಿ ನಡೆಯುವ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ಕುರಿತಾಗಿಯೂ ಕೇಂದ್ರದ ತಂಡ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಕಮಲ್‌ಪಂತ್ ಎಡಿಜಿಪಿ (ಕಾನೂನು ಸುವ್ಯವಸ್ಥೆ), ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ಸೇರಿ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಸಿಎಸ್, ಡಿಜಿಪಿ ಭೇಟಿ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಕೇಂದ್ರ ತಂಡ ಬುಧವಾರ ಬೆಳಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಜತೆಗೂ ಮಾತುಕತೆ ನಡೆಸಲಿದೆ. ಬಳಿಕ ವಿಧಾನಸೌಧದಲ್ಲಿ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಎರಡು ದಿನದ ಸಭೆಯ
ವಿವರಣೆಗಳನ್ನು ನೀಡಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.