ನವದೆಹಲಿ:ಜಮ್ಮು-ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಗಡಿನಿಯಂತ್ರಣ ರೇಖೆ ಸಮೀಪ ಸೇನೆ, ಉಗ್ರರನ್ನು ಜಮಾವಣೆಗೊಳಿಸುತ್ತಿದ್ದರೆ, ಮತ್ತೊಂದೆಡೆ ಪೂರ್ವ ಲಡಾಖ್ ನ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್(ಎಲ್ ಎಸಿ) ಸಮೀಪ ಭಾರತ ಮತ್ತು ಚೀನಾ ಸೇನೆ ಮುಖಾಮುಖಿಯಾಗಿ ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು ಎಂದು ಸೇನಾ ವರದಿ ತಿಳಿಸಿದೆ.
ಲಡಾಖ್ ನ ಪಾಂಗೋಂಗ್ ಲೇಕ್ ನ ತೀರ ಪ್ರದೇಶದ ಬಳಿ ಭಾರತ ಮತ್ತು ಚೀನಾ ಯೋಧರು ಮುಖಾಮುಖಿಯಾಗಿದ್ದು, ಈ ಸಂದರ್ಭದಲ್ಲಿ ಉಭಯ ದೇಶಗಳ ರಕ್ಷಣಾ ನಿಯೋಗದ ಮಾತುಕತೆ ಬಳಿಕ ಉದ್ವಿಗ್ನ ಸ್ಥಿತಿ ತಿಳಿಗೊಂಡಿರುವುದಾಗಿ ವರದಿ ವಿವರಿಸಿದೆ.
ಲಡಾಖ್ ಬಳಿ ಏನಾಗಿತ್ತು:
ಉತ್ತರ ಲಡಾಖ್ ನ ಪಾಂಗೋಂಗ್ ಸರೋವರ ಪ್ರದೇಶ 3/2ರಷ್ಟು ಭಾಗ ಚೀನಾ ಹತೋಟಿಯಲ್ಲಿದೆ. ಸೇನಾ ಮೂಲಗಳ ಪ್ರಕಾರ, ಭಾರತೀಯ ಸೇನೆಯ ಪಡೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮುಖಾಮುಖಿಯಾಗಿತ್ತು. ಈ ಸಂದರ್ಭ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಾಗ ಹೆಚ್ಚುವರಿ ಸೇನೆಯನ್ನು ಪ್ರದೇಶಕ್ಕೆ ಭಾರತ ಮತ್ತು ಚೀನಾ ರವಾನಿಸಿತ್ತು.
ಲಡಾಖ್ ನಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದ ಉಭಯ ದೇಶಗಳು ನಿಯೋಗದ ಹಂತದ ಮಾತುಕತೆ ನಂತರ ಬಿಕ್ಕಟ್ಟು ಈಗ ಬಗೆಹರಿದಿರುವುದಾಗಿ ಸೇನಾ ಮೂಲಗಳು ತಿಳಿಸಿದೆ. ಡೋಕ್ಲಾಮ್ ವಿಚಾರದಲ್ಲಿಯೂ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಉದ್ಭವಿಸಿದ್ದಾಗ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆದು ಬಗೆಹರಿಸಿಕೊಳ್ಳಲಾಗಿತ್ತು.
ಅರುಣಾಚಲ ಪ್ರದೇಶದಲ್ಲಿ ಸೇನಾ ತಾಲೀಮು ನಡೆಯಲಿದೆ ಎಂದು ಬುಧವಾರ ಘೋಷಿಸಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯುಪಡೆ ಮತ್ತು ಆರ್ಮಿ ಜಂಟಿಯಾಗಿ ಯುದ್ಧ ತಾಲೀಮು ನಡೆಸಲಾಗುವುದು ಎಂದು ತಿಳಿಸಿದೆ.