ಪಾಟ್ನಾ:ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಎನ್ ಡಿಎ ಮೈತ್ರಿ ಕೂಟದ ಸೀಟು ಹಂಚಿಕೆ ಒಪ್ಪಂದ ಅಂತಿಮವಾಗಿದ್ದು 40 ಸ್ಥಾನಗಳ ಪೈಕಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಬಿಹಾರ ಎನ್‌ಡಿಎ ಮೈತ್ರಿಕೂಟದ ಸದಸ್ಯರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ಸೀಟು ಹಂಚಿಕೆಯನ್ನು ಪ್ರಕಟಿಸಿದರು.
ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಪಶ್ಚಿಮ ಚಂಪಾರಣ್, ಪೂರ್ವಿ ಚಂಪಾರಣ್, ಔರಂಗಾಬಾದ್, ಮಧುಬನಿ, ದರ್ಭಾಂಗ, ಮುಜಾಫರ್‌ಪುರ, ಮಹಾರಾಜ್‌ಗಂಜ್, ಸರನ್, ಬೇಗುಸರಾಯ್, ನಾವಡಾ, ಪಾಟ್ನಾ ಸಾಹಿಬ್, ಪಾಟ್ಲಿಪುತ್ರ, ಆರಾ, ಬಕ್ಸರ್ ಮತ್ತು ಸಸಾರಾಮ್ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಜೆಡಿಯು ವಾಲ್ಮೀಕಿನಗರ, ಸೀತಾಮಧಿ, ಝಂಜರ್‌ಪುರ್, ಸುಪೌಲ್, ಕಿಶನ್‌ಗಂಜ್, ಕತಿಹಾರ್, ಪೂರ್ಣಿಯಾ, ಮಾಧೇಪುರ, ಗೋಪಾಲ್‌ಗಂಜ್, ಸಿವಾನ್, ಭಾಗಲ್ಪುರ್, ಬಂಕಾ, ಮುಂಗೇರ್, ನಲಂದಾ, ಜೆಹಾನಾಬಾದ್ ಮತ್ತು ಶೆಯೋಹಾರ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಬಣ ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ವೈಶಾಲಿ, ಹಾಜಿಪುರ, ಸಮಸ್ತಿಪುರ, ಖಗರಿಯಾ ಮತ್ತು ಜಮುಯಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ಥಾನಿ ಆವಾಮ್ ಮೋರ್ಚಾ (HAM) ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ (RLSP) ತಲಾ ಒಂದು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಎನ್ ಡಿಎ ತೊರೆಯುವ ಬೆದರಿಕೆ ಹಾಕಿದ್ದ ಕೇಂದ್ರ ಸಚಿವ ಪಶುಪತಿ ಪರಸ್ ನೇತೃತ್ವದ ಎಲ್‌ಜೆಪಿ ಬಣದೊಂದಿಗೆ ಸೀಟು ಹಂಚಿಕೆ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ. ಈ ಬಗ್ಗೆ ಬಿಹಾರ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಅವರನ್ನು ಕೇಳಿದಾಗ “ಅವರೊಂದಿಗೆ ಮಾತುಕತೆ ನಡೆಯುತ್ತಿದೆ” ಎಂದಷ್ಟೇ ಹೇಳಿದ್ದಾರೆ. ಹಾಜಿಪುರದಿಂದ ಕಣಕ್ಕಿಳಿಯುವುದು ಖಚಿತ ಎಂದು ಪಶುಪತಿ ಪರಸ್ ಈಗಾಗಲೇ ಹೇಳಿಕೆ ನೀಡಿದ್ದಾರೆ.