ಖರಗೋಣ್, ಮಧ್ಯ ಪ್ರದೇಶ : ಆಳುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟವು 2019ರ ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಹಾಲಿ ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೇ ಹಂತದಲ್ಲಿನ ತಮ್ಮ ಕೊನೆಯ ರಾಲಿಯಲ್ಲಿ ಹೇಳಿದರು.
ಖರಗೋಣ್ ರಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮನ್ನು ಪ್ರಧಾನಿ ಪಟ್ಟಕ್ಕೆ ಮರು ಆಯ್ಕೆ ಮಾಡಲು ನಿರ್ಧರಿಸಿರುವ ಮತದಾರರಿಗೆ ಧನ್ಯವಾದ ಹೇಳಿದರು.
ದಶಕಗಳ ಬಳಿಕ ದೇಶದ ಮತದಾರರು ನಿರಂತರ ಎರಡನೇ ಬಾರಿಗೆ ನಿಚ್ಚಳ ಬಹುಮತದ ಸರಕಾರವನ್ನು ಚುನಾಯಿಸಲಿದ್ದಾರೆ ಎಂದು ಮೋದಿ ಹೇಳಿದರು.
“ಕಾಶ್ಮೀರದಿಂದ ಕಾನ್ಯಾಕುಮಾರಿಯವರಿಗೆ, ಕಚ್ ನಿಂದ ಕಾಮರೂಪ್ ವರೆಗೆ, ಇಡಿಯ ದೇಶ ಒಕ್ಕೊರಲಿನಿಂದ ಹೇಳುತ್ತಿದೆ : ಅಬ್ ಕೀ ಬಾರ್ ತೀನ್ ಸೌ ಪಾರ್, ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂದು ಮೋದಿ ಮಾರ್ಮಿಕವಾಗಿ ಹೇಳಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು 130 ಕೋಟಿ ಭಾರತೀಯರ ಆಯ್ಕೆಯಾಗಿದೆ ಎಂದವರು ಹೇಳಿದರು.
“ಈ ಭಾನುವಾರ ನೀವು ಮತ ಹಾಕಲು ಹೋದಾಗ ಇತಿಹಾಸವನ್ನೇ ಬರೆಯುವಿರಿ; ದಶಕಗಳ ನಂತರ ನೀವು ನಿಚ್ಚಳ ಬಹುಮತದ ಸರಕಾರವನ್ನು ಎರಡನೇ ಬಾರಿಗೆ ಆಯ್ಕೆ ಮಾಡುವಿರಿ’ ಎಂದು ಮೊದಿ ಮತದಾರರಿಗೆ ಹೇಳಿದರು.