ಹೊಸದಿಲ್ಲಿ: ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಎನ್‌ಟಿಎಸ್‌ಇ) ಯೋಜನೆಯನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಸ್ಥಗಿತಗೊಳಿಸಿದೆ.
“ಎನ್‌ಟಿಎಸ್‌ಇ ಯೋಜನೆಗೆ 2021ರ ಮಾ.31ರ ವರೆಗೆ ಅನುಮೋದನೆ ನೀಡಲಾಗಿತ್ತು.ಅನಂತರದಲ್ಲಿ ಇದಕ್ಕೆ ಅನುಮೋದನೆ ದೊರೆತಿಲ್ಲ. ಮುಂದಿನ ಆದೇಶದವರೆಗೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಎನ್‌ಸಿಇಆರ್‌ಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಎನ್‌ಟಿಎಸ್‌ಇ ಯೋಜನೆಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಹೆಚ್ಚಿನ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿ ವೇತನದ ಮೊತ್ತ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ಪರಿಷ್ಕರಣೆಗೆ ಚಿಂತನೆ ನಡೆದಿದೆ,’ ಎಂದು ಎನ್‌ಸಿಇಆರ್‌ಟಿ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ದೇಶದಲ್ಲೇ ಖ್ಯಾತಿ ಪಡೆದಿರುವ ಈ ವಿದ್ಯಾರ್ಥಿ ವೇತನ ಯೋಜನೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಸಂಪೂರ್ಣ ಅನುದಾನ ಒದಗಿಸುತ್ತದೆ ಹಾಗೂ ಎನ್‌ಸಿಇಆರ್‌ಟಿ ಈ ಪರೀಕ್ಷೆಯನ್ನು ನಡೆಸುತ್ತದೆ. ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತದೆ. ಹಂತ 1(ರಾಜ್ಯ ಮಟ್ಟ) ಮತ್ತು ಹಂತ 2(ರಾಷ್ಟ್ರ ಮಟ್ಟ).
13 ಭಾಷೆಗಳಲ್ಲಿ: ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ದೇಶದ ಇತರ 10 ಭಾಷೆಗಳಲ್ಲಿ ಎನ್‌ಟಿಎಸ್‌ಇ ಪರೀಕ್ಷೆ ನಡೆಯುತ್ತದೆ. ಪ್ರಸ್ತುತ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ 1,250 ರೂ. ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಗಳಿಗೆ ಮಾಸಿಕ 2,000 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ದೇಶದಲ್ಲಿ ಒಟ್ಟು 2,000 ವಿದ್ಯಾ ರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.