Advertisement

Naxal Encounter: ಬಂಧಿತ ಸುರೇಶ್‌ ಅಂಗಡಿ ಮಾಹಿತಿಯಂತೆ ʼಆಪರೇಷನ್‌ ವಿಕ್ರಂ ಗೌಡʼ

01:24 AM Nov 21, 2024 | Team Udayavani |

ಬೆಂಗಳೂರು: ಹೆಬ್ರಿ ಸಮೀಪ ನಡೆದ ನಕ್ಸಲ್‌ ಮುಖಂಡ ವಿಕ್ರಂ ಗೌಡನ ಎನ್‌ಕೌಂಟರ್‌ ಆತನ ಸಂಗಾತಿ ಸುರೇಶ್‌ ಅಂಗಡಿ ನೀಡಿದ ಖಚಿತ ಮಾಹಿತಿಯನ್ನು ಆಧರಿಸಿಯೇ ನಡೆದಿದೆ ಎಂಬ ವಿಚಾರ ತಿಳಿದುಬಂದಿದೆ.

Advertisement

ಕೇರಳ ಪೊಲೀಸರು ಕಣ್ಣೂರು ಭಾಗದಲ್ಲಿ ಸಕ್ರಿಯವಾಗಿದ್ದ ಕಬಿನಿ ದಳಂ-2 ಸದಸ್ಯನಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುರೇಶ್‌ ಅಂಗಡಿಯನ್ನು ಕಳೆದ ಫೆಬ್ರವರಿಯಲ್ಲಿ ಬಂಧಿಸಿದ್ದರು. ಬಳಿಕ ಕರ್ನಾಟಕದ ಎಎನ್‌ಎಫ್ ಪಡೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೊಟ್ಟ ಹಲವು ಮಾಹಿತಿಗಳು-ಸುಳಿವುಗಳಿಂದಾಗಿ ಆರೇಳು ತಿಂಗಳ ಹಿಂದೆಯೇ ವಿಕ್ರಂಗೌಡನ ವಿರುದ್ಧದ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿತ್ತು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಒಕ್ಕಲೆಬ್ಬಿಸುವ ಯೋಜನೆ ಕುರಿತ ಹೋರಾಟದ ಬಳಿಕ ಹಂತಹಂತವಾಗಿ ನಕ್ಸಲ್‌ ಚಟುವಟಿಕೆಗೆ ಇಳಿದಿದ್ದ ವಿಕ್ರಂ 2005ರಲ್ಲಿ ತನ್ನ ನಾಯಕ ಸಾಕೇತ್‌ ರಾಜನ್‌ ಎನ್‌ಕೌಂಟರ್‌ ಬಳಿಕ ನಕ್ಸಲ್‌ ಪಡೆಯನ್ನು ಮುನ್ನಡೆಸಿದ್ದ. ಅನಂತರ ಸುರೇಶ್‌ ಅಂಗಡಿ, ಜಯಣ್ಣ ಅಲಿಯಾಸ್‌ ಜಾನ್‌, ಸುಂದರಿ, ವನಜಾಕ್ಷಿ, ರವೀಂದ್ರ, ಮುಂಡಗಾರು ಲತಾ, ಕೋಟೆ ಉಂಡೆ ರವಿ ಜತೆ ನಕ್ಸಲ್‌ ಚಟುವಟಿಕೆ ಆರಂಭಿಸಿದ್ದು, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿದ್ದ.

ಸುರೇಶ್‌ ವಿಚಾರಣೆ
ಕಳೆದ ಫೆಬ್ರವರಿಯಲ್ಲಿ ಕೇರಳ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಅಂಗಡಿಯನ್ನು ರಾಜ್ಯ ಎಎನ್‌ಎಫ್ ಪಡೆ ವಶಕ್ಕೆ ಪಡೆದು ತಿಂಗಳುಗಟ್ಟಲೇ ತೀವ್ರ ವಿಚಾರಣೆ ನಡೆಸಿತ್ತು. ಈ ವೇಳೆ ವಿಕ್ರಂ ಗೌಡನ ಸಂಪೂರ್ಣ ಮಾಹಿತಿಯನ್ನು ಈತ ನೀಡಿದ್ದ. ವಿಕ್ರಂ ಜತೆ ಯಾರೆಲ್ಲ ಸುತ್ತಾಡುತ್ತಾನೆ. ಯಾವ ಪ್ರದೇಶ, ಎಲ್ಲೆಲ್ಲಿ ಹೆಚ್ಚು ಓಡಾಡುತ್ತಾನೆ. ಯಾರೆಲ್ಲ ಸಂಪರ್ಕ ಇದ್ದಾರೆ ಎಂಬ ಬಗ್ಗೆಯೂ ಮಾಹಿತಿಯನ್ನು ಬಿಚ್ಚಿಟ್ಟಿದ್ದ.

4 ಬಾರಿ ಪರಾರಿ
ಸುರೇಶ್‌ ಅಂಗಡಿಯ ಮಾಹಿತಿ ಆಧರಿಸಿ ಎಎನ್‌ಎಫ್ ಪಡೆ ಮಾರುವೇಷದಲ್ಲಿ ಚಿಕ್ಕಮಗಳೂರು, ಉಡುಪಿಯ ಪೀತಬೈಲು, ಕಬ್ಬಿನಾಲೆ ಸಹಿತ ವಿವಿಧೆಡೆ 6 ತಿಂಗಳಿನಿಂದ ಬೀಡುಬಿಟ್ಟಿತ್ತು. ಅಲ್ಲಿ ಒಂದೆರಡು ಬಾರಿ ವಿಕ್ರಂ ಕಾಣಿಸಿಕೊಂಡಿದ್ದ. ಹೀಗಾಗಿ ಎಎನ್‌ಎಫ್ ಆತನ, ಉಡುಪಿ ಭಾಗ ಮಾತ್ರವಲ್ಲದೆ, ಚಿಕ್ಕಮಗಳೂರು, ಕುದುರೆ ಮುಖ ಭಾಗದಲ್ಲಿ 6 ತಿಂಗಳು ಶೋಧ ನಡೆಸಿತ್ತು. ಜತೆಗೆ ಪ್ರಮುಖವಾಗಿ ಸ್ಥಳೀಯರಿಗೆ ಕೆಲವು ಮೂಲಸೌಲಭ್ಯಗಳನ್ನು ಮಾಡಿಕೊಡಲಾಗಿತ್ತು. ಅದು ಕೂಡ ವಿಕ್ರಂ ವಿರುದ್ಧದ ಕಾರ್ಯಾಚರಣೆಗೆ ನೆರವಾಯಿತು. ಆದರೂ ಆತ 4 ಬಾರಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಎಸ್ಕೇಪ್‌ ಆಗಿದ್ದ ಎಂದು ಮೂಲಗಳು ತಿಳಿಸಿವೆ.

Advertisement

10 ದಿನಗಳ ಕಾರ್ಯಾಚರಣೆ‌
ಕಳೆದ 15 ದಿನಗಳ ಹಿಂದೆ ಪೀತಬೈಲು, ಕಬ್ಬಿನಾಲೆ ಭಾಗದ ಯಾವುದಾದರೂ ಒಂದು ಸ್ಥಳಕ್ಕೆ ಬಂದೇ ಬರುತ್ತಾನೆ ಎಂಬ ಖಚಿತ ಮಾಹಿತಿ ಪಡೆದ ಎಎನ್‌ಎಫ್ ಈ ಭಾಗದಲ್ಲೇ ಮಾರುವೇಷದಲ್ಲಿ ಸುತ್ತಾಡಿತ್ತು. 10 ದಿನಗಳಿಂದ ನಿರ್ದಿಷ್ಟ ಸ್ಥಳದಲ್ಲಿ ಬೀಡುಬಿಟ್ಟಿತ್ತು. 3 ಬಾರಿ ಆ ಸ್ಥಳದ ಕಡೆ ಬಂದವ ಕ್ಷಣಾರ್ಧದಲ್ಲಿ ನಾಪತ್ತೆಯಾಗುತ್ತಿದ್ದ.

ಆದರೆ ನ. 18ರ ಸಂಜೆ ಸುಮಾರು ಹೊತ್ತು ಕಾಯ್ದಿದ್ದ ಎಎನ್‌ಎಫ್, ಈ ಸಲವೂ ಮಾಹಿತಿ ಸೋರಿಕೆ ಆಗಿರಬಹುದೆಂದು ಭಾವಿಸಿ ಆತ ಬರುವುದಿಲ್ಲವೆಂದು ತಿಳಿದು ಇನ್ನೇನು ಸ್ಥಳದಿಂದ ತೆರಳಬೇಕಿತ್ತು. ಆದರೆ ಏಕಾಏಕಿ ಬಂದೂಕು ಹಾಗೂ ತನ್ನ ಸಹಚರರ ಜತೆ ವಿಕ್ರಂ ಮನೆಯೊಂದರ ಸಮೀಪಕ್ಕೆ ಬಂದಿದ್ದ. ಕೂಡಲೇ ಎಚ್ಚೆತ್ತ ಎಎನ್‌ಎಫ್, ಆ ಮನೆಯನ್ನು ಸುತ್ತುವರಿದು ವಿಕ್ರಂಗೆ ಶರಣಾಗುವಂತೆ ಹಲವು ಬಾರಿ ಸೂಚಿಸಿದ್ದರೂ ಕೇಳದ್ದರ ಪರಿಣಾಮ ಎನ್‌ಕೌಂಟರ್‌ನಲ್ಲಿ ಹತನಾದ.

ಕಬಿನಿ ದಳಂ2 ಮುಖಂಡ
ಮೈಸೂರು ಭಾಗದಲ್ಲಿ ಹರಿಯುವ ಕಬಿನಿ ನದಿಯ ಹೆಸರನ್ನೇ ತಮ್ಮ ತಂಡಕ್ಕೆ ಇಟ್ಟುಕೊಂಡಿದ್ದ ವಿಕ್ರಂ ಮತ್ತು ತಂಡ 2 ಭಾಗವಾಗಿ ಬೇರ್ಪಟ್ಟಿತ್ತು. ಕಬಿನಿ ದಳಂ1ಕ್ಕೆ ತಮಿಳುನಾಡು ಮೂಲದ ವ್ಯಕ್ತಿ ಮುಖ್ಯಸ್ಥನಾಗಿದ್ದರೆ, ಕಬಿನಿ ದಳಂ 2ಕ್ಕೆ ವಿಕ್ರಂ ಮುಖ್ಯಸ್ಥನಾಗಿದ್ದ. ಕಬಿನಿ ಜಲಾಶಯ ವ್ಯಾಪ್ತಿ ಸೇರಿ ಪಶ್ಚಿಮ ಘಟ್ಟ ಭಾಗದಲ್ಲೇ ಈ ತಂಡ ಹೆಚ್ಚು ಸಕ್ರಿಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

4 ಬಾರಿ ಚಳ್ಳೆಹಣ್ಣು ತಿನ್ನಿಸಿದ್ದ ವಿಕ್ರಂ
- ಸುರೇಶ್‌ ಮಾಹಿತಿ ಹಿನ್ನೆಲೆಯಲ್ಲಿ 6 ತಿಂಗಳಿಂದ ಶೋಧ

- ಈ ವೇಳೆ 4 ಬಾರಿ ಎಎನ್‌ಎಫ್‌ಗೆ  ಚಳ್ಳೆಹಣ್ಣು ತಿನ್ನಿಸಿ ಪಾರಾಗಿದ್ದ ವಿಕ್ರಂ ಗೌಡ

- ಎನ್‌ಕೌಂಟರ್‌ ನಡೆಯುವ ಮುಂಚೆ ಪೀತಬೈಲು, ಕಬ್ಬಿನಾಲೆಯಲ್ಲಿ 10 ದಿನಗಳಿಂದ ಮಾರುವೇಷದಲ್ಲಿದ್ದ ಪೊಲೀಸರು

– ಇದಕ್ಕೂ ಮೊದಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಎಎನ್‌ಎಫ್

ಮೆಶಿನ್‌ ಗನ್‌ ಇತ್ತು
ಶರಣಾಗತಿಗೆ ಸೂಚಿಸಿದರೂ ವಿಕ್ರಂ ಗೌಡ ಕೇಳಿಲ್ಲ. 09 ಎಂ.ಎಂ. ಕಾರ್ಬೈನ್‌ ಮೆಶಿನ್‌ಗನ್‌, .08 ರಿವಾಲ್ವರ್‌, ಚಾಕುವನ್ನು ಆತ ಹೊಂದಿದ್ದ. ಈ ಎನ್‌ಕೌಂಟರ್‌ ಬಗ್ಗೆ ಯಾವುದೇ ಸಂಶಯ ಬೇಡ. – ಪ್ರಣವ್‌ ಮೊಹಂತಿ, ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next