Advertisement
ಸೋಮವಾರ ಸಂಜೆ 6ಕ್ಕೆ ಗುಂಡಿನ ಚಕಮಕಿ ನಡೆದಿದೆ. ಈ ಪ್ರದೇಶದಲ್ಲಿ ಎರಡು-ಮೂರು ಮನೆ ಇತ್ತು. ನಕ್ಸಲ್-ಪೊಲೀಸ್ ಮುಖಾಮುಖೀಯಾದರು. ಈ ವೇಳೆ ಶರಣಾಗತಿಗೆ ಸೂಚನೆ ನೀಡಿದರೂ ಅವರು ಕೇಳಲಿಲ್ಲ. ಒಮ್ಮೆಲೇ ದಾಳಿ ಆರಂಭಿಸಿದ್ದಾರೆ ಎಂದರು. ವಿಕ್ರಂ ಗೌಡ 09 ಎಂ.ಎಂ. ಕಾರ್ಬೈನ್ ಮೆಶಿನ್‌ಗನ್, .08 ರಿವಾಲ್ವರ್, ಚಾಕು ಹೊಂದಿದ್ದ. ಅವರಿಂದಲೂ ಸಾಕಷ್ಟು ಸುತ್ತು ಗುಂಡಿನ ದಾಳಿ ನಡೆದಿದೆ. ಈ ಎನ್ ಕೌಂಟರ್ ಬಗ್ಗೆ ಯಾವುದೇ ಸಂಶಯ ಬೇಡ. ದಾಳಿಗೆ ಪ್ರತಿದಾಳಿ ನಡೆಸಿದ ಸಂದರ್ಭ ವಿಕ್ರಂ ಗೌಡ ಹತನಾಗಿದ್ದಾನೆ ಎಂದು ಮೊಹಂತಿ ತಿಳಿಸಿದರು.
ಗುಂಡಿನ ದಾಳಿಯಲ್ಲಿ ವಿಕ್ರಂ ಗೌಡನಿಗೆ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಗುಂಡೇಟು ಬಿದ್ದಿದೆ. ಆದರೆ ಎಷ್ಟು ಗುಂಡು ಬಿದ್ದಿದೆ ಎಂಬುವುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಲಿದೆ. ಬೇರೆಯವರಿಗೆ ಯಾವುದೇ ಗಾಯಗಳು ಆಗಿಲ್ಲ. ಪರಾರಿಯಾದ ನಕ್ಸಲರಿಗೆ ಗಾಯವಾಗಿದೆಯೇ ಎಂಬುದು ತಿಳಿದಿಲ್ಲ ಎಂದು ಮೊಹಂತಿ ಮಾಹಿತಿ ನೀಡಿದರು. 5 ಲಕ್ಷ ರೂ. ಘೋಷಣೆ
ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಮೂರು ರಾಜ್ಯಗಳಿಗೆ ಸಿಂಹಸ್ವಪ್ನವಾಗಿದ್ದ ವಿಕ್ರಂ ಗೌಡ ವಿರುದ್ಧ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಸುಲಿಗೆ, ಬೆದರಿಕೆ ಮುಂತಾದ ಒಟ್ಟು 64 ಪ್ರಕರಣಗಳು ದಾಖಲಾಗಿದ್ದವು. ಉಡುಪಿ ಜಿಲ್ಲೆಯೊಂದರಲ್ಲೇ 34 ಪ್ರಕರಣಗಳು ದಾಖಲಾಗಿದ್ದು 2003ರಲ್ಲಿ ಕೊಲೆ ಯತ್ನದ ಬಗ್ಗೆ ಮೊದಲನೇ ಪ್ರಕರಣ ವರದಿಯಾಗಿತ್ತು. ಈತನ ಪತ್ತೆಗೆ ಮಾಹಿತಿ ನೀಡಿದವರಿಗೆ ಸರಕಾರವು 5 ಲಕ್ಷ ರೂ. ಗಳ ಬಹುಮಾನ ಘೋಷಣೆ ಮಾಡಿತ್ತು ಎಂದು ಪ್ರಣಬ್ ಮೊಹಂತಿ ಹೇಳಿದರು.
Related Articles
ಘಟನ ಸ್ಥಳದಲ್ಲಿ ಕಾರ್ಯಾಚರಣೆಗೆ ಮೊದಲು ಯಾವುದೇ ಮನೆಗಳನ್ನು ಖಾಲಿ ಮಾಡಿಸಿಲ್ಲ. ಅನಂತರವೂ ಮಾಡಿಸಿಲ್ಲ. ಅವರು ಅವರ ಪಾಡಿಗೆ ಇದ್ದಾರೆ. ನಾಗರಿಕರಿಗೆ ಸಮಸ್ಯೆಯಾಗದಂತೆ ಕಾರ್ಯಾ ಚರಣೆ ಮಾಡಿದ್ದೇವೆ. ಸಂಜೆಯ ವೇಳೆ ಸಾಧಾರಣ ಕತ್ತಲಾಗಿತ್ತು. ಎಂದಿನಂತೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಜರಗಿದ ಎನ್‌ಕೌಂಟರ್ ಇದಾಗಿದೆ ಎಂದರು.
Advertisement
ಪ್ರತಿದಾಳಿ ಬಗ್ಗೆ ಅಲರ್ಟ್ಉಡುಪಿ, ಚಿಕ್ಕಮಗಳೂರು -ಕೊಡಗು, ಶಿವಮೊಗ್ಗ-ದ.ಕ., ಕೇರಳ ನಡುವೆ ನಕ್ಸಲ್ ಚಲನವಲನವಿದೆ. ಈ ಘಟನೆ ಯಿಂದ ನಕ್ಸಲ್ ಪ್ರತಿದಾಳಿ ಸಾಧ್ಯತೆಯ ಬಗ್ಗೆಯೂ ಅಲರ್ಟ್ ಇದ್ದೇವೆ. ನಕ್ಸಲ್ ಚಟುವಟಿಕೆ ಪೂರ್ಣವಾಗಿ ತಡೆಯುತ್ತೇವೆ. ನಕ್ಸಲರ ಶರಣಾಗತಿಗೆ ನಾವು ಹೆಚ್ಚಿನ ಮುತುವರ್ಜಿ ವಹಿಸು ತ್ತಿದ್ದೇವೆ ಎಂದು ಹೇಳಿದರು. ಎನ್‌ಕೌಂಟರ್ ನಮ್ಮ ಗುರಿಯಲ್ಲ, ಶರಣಾಗತಿಯೇ ಪ್ರಧಾನ ಉದ್ದೇಶ
ನಮ್ಮ ಉದ್ದೇಶ ಎನ್‌ಕೌಂಟರ್ ಮಾಡುವುದಷ್ಟೇ ಅಲ್ಲ. ಶಸ್ತ್ರಾಸ್ತ್ರ ತೊರೆದು ಶರಣಾಗಿ ಮುಖ್ಯವಾಹಿನಿಗೆ ಬಂದು ಸಾಮಾನ್ಯ ಜೀವನ ನಡೆಸಲು ಬಯಸುವ ನಕ್ಸಲರಿಗೆ ರಾಜ್ಯ ಸರಕಾರದಿಂದ 2024ರಲ್ಲಿ ವಿಶೇಷ ಪ್ಯಾಕೇಜ್ ಮತ್ತು ಪುನರ್ ವಸತಿಗಳನ್ನು ಸಹ ಘೋಷಣೆ ಮಾಡಲಾಗಿದೆ ಎಂದು ಮೊಹಂತಿ ಹೇಳಿದರು. ಎಷ್ಟು ಮಂದಿ ಇದ್ದಾರೆಂಬುದು ಖಚಿತವಾಗಿಲ್ಲ
ಪೀತಬೈಲ್ ಪ್ರಕರಣದಲ್ಲಿ ತಪ್ಪಿಸಿಕೊಂಡು ಹೋಗಿರುವ ನಕ್ಸಲರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನಕ್ಸಲರ ತಂಡದಲ್ಲಿ ಎಷ್ಟು ಜನ ಇದ್ದರು ಎಂಬುದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕಾರ್ಯಾಚರಣೆ ವೇಳೆ ಮೂರು-ನಾಲ್ಕು ಮಂದಿ ಬಂದೂಕುದಾರಿ ನಕ್ಸಲರು ಕಾಣ ಸಿಕ್ಕಿದ್ದಾರೆ. ಅವರೆಲ್ಲರೂ ಗುಂಡು ಹಾರಿಸುತ್ತ ಕಾಡಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿಸಿದರು. ಅವರಾಗಿ ಶರಣಾದರೆ ಮುಕ್ತ ಅವಕಾಶ ನೀಡುತ್ತೇವೆ. ಇಲ್ಲದಿದ್ದರೂ ಅವರನ್ನು ಹುಡುಕಿ ಬಂಧಿಸುವುದು ಖಚಿತ ಎಂದು ಮೊಹಂತಿ ತಿಳಿಸಿದರು. ನಮ್ಮ ತಂಡ ನಿರಂತರ ಶೋಧ ಮಾಡುತ್ತಲೇ ಇದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದ.ಕ. ಜಿಲ್ಲೆ, ಉಡುಪಿ ಸಹಿತ ಎಲ್ಲೆಡೆ ಶೋಧ ನಡೆಯುತ್ತಿದೆ ಎಂದರು.