Advertisement

Naxal: ವಿಕ್ರಂ ಗೌಡನ ಸುಳಿವು ಎಪ್ರಿಲ್‌ನಲ್ಲೇ ಸಿಕ್ಕಿತ್ತು: ಡಿಜಿಪಿ ಪ್ರಣವ್‌ ಮೊಹಂತಿ

03:18 AM Nov 21, 2024 | Team Udayavani |

ಹೆಬ್ರಿ: ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಆಗಿರುವ ವಿಕ್ರಂ ಗೌಡನ ಸುಳಿವು ಎಪ್ರಿಲ್‌ನಲ್ಲೇ ಸಿಕ್ಕಿತ್ತು. ಈತ ಕೊಡಗು ಭಾಗದಲ್ಲಿ ತಿರುಗಾಡಿದ್ದ. ಅಲ್ಲಿನ ಮನೆಯೊಂದಕ್ಕೆ ತೆರಳಿ ಊಟಕ್ಕೆ ಬೇಕಾದ ಸಾಮಗ್ರಿ ಪಡೆದುಕೊಂಡಿದ್ದ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೆವು. ಇವನದು ಮತ್ತು ಕೆಲವು ನಕ್ಸಲರ ಆಧುನಿಕ ಗುರುತು, ಫೋಟೊಗಳ ಬಗ್ಗೆ ಎಲ್ಲ ಮಾಹಿತಿಯನ್ನು ಎಎನ್‌ಎಫ್‌ ಗುಪ್ತಚರ ವಿಭಾಗವು ಸಂಗ್ರಹಿಸಿತ್ತು ಎಂದು ರಾಜ್ಯ ಆಂತರಿಕ ಭದ್ರತ ವಿಭಾಗದ ಡಿಜಿಪಿ ಪ್ರಣವ್‌ ಮೊಹಂತಿ ತಿಳಿಸಿದರು.

Advertisement

ಈದು ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ
ಇತ್ತೀಚೆಗೆ ಈದು ಬೊಳ್ಳೆಟ್ಟು ಗ್ರಾಮದಲ್ಲಿ ನಕ್ಸಲರು ಓಡಾಟ ನಡೆಸಿದ್ದರು ಎಂಬುದು ಸುದ್ದಿಯಾಗಿದ್ದು, ಇದೇ ತಂಡದ ಸದಸ್ಯರು ಓಡಾಟ ನಡೆಸಿರಬಹುದೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಈದು ಗ್ರಾಮದಲ್ಲಿ ನಕ್ಸಲ್‌ ಓಡಾಟ ವದಂತಿಯಾಗಿದ್ದು, ವಿಕ್ರಂ ಗೌಡ ಮತ್ತು ತಂಡ ಅಲ್ಲಿ ಓಡಾಟ ನಡೆಸಿರಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲು
ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ಹೆಬ್ರಿ ಪೊಲೀಸ್‌ ಠಾಣೆ ಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಘಟನೆ ಹೇಗೆ ನಡೆಯಿತು ಯಾಕೆ ನಡೆಯಿತು, ಮೃತಪಟ್ಟ ರೀತಿ, ಎಷ್ಟು ಸುತ್ತಿನ ಗುಂಡಿನ ದಾಳಿಯಾಗಿವೆ, ವಿಕ್ರಂ ಗೌಡನ ಜತೆ ಎಷ್ಟು ಜನರಿದ್ದರು ಸಹಿತ ಹಲವಾರು ವಿಷಯಗಳಿಗೆ ಸಂಬಂಧಿಸಿ ಜಿಲ್ಲಾ ಪೊಲೀಸ್‌ ಇಲಾಖೆ ಸಹಕಾರದಲ್ಲಿ ಹೆಬ್ರಿ ಪೊಲೀಸ್‌ರಿಂದ ತನಿಖೆ ಪ್ರಕ್ರಿಯೆ ನಡೆಯಲಿದೆ.

ಕಾರ್ಯಾಚರಣೆ ತಂಡಕ್ಕೆ ಶ್ಲಾಘನೆ
ಎನ್‌ ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 10 ದಿನಗಳಿಂದ ಕಬ್ಬಿನಾಲೆ ಪರಿಸರದಲ್ಲಿ ಎಎನ್‌ಎಫ್ ತಂಡದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು. ಎಎನ್‌ಎಫ್‌ ತಂಡದ ಅಧಿಕಾರಿ ಸಹಿತ ಎಲ್ಲ ಸಿಬಂದಿಯ ಕಾರ್ಯವೈಖರಿ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಯ ಸಹಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಮುಂದುವರಿದ ಭದ್ರತೆ
ಕಾರ್ಕಳ/ಹೆಬ್ರಿ: ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ಘಟನ ಸ್ಥಳದಲ್ಲಿ ಬಿಗು ಭದ್ರತೆಯನ್ನು ಬುಧವಾರವೂ ಮುಂದುವರಿಸಲಾಗಿದೆ. ಪರಿಸರದಲ್ಲಿನ ಆತಂಕದ ಸ್ಥಿತಿ ಇನ್ನೂ ದೂರವಾಗಿಲ್ಲ.

Advertisement

ಈ ಭಾಗದಲ್ಲಿ ಒಟ್ಟು ಆರು ಮನೆಗಳಿದ್ದು, ಮಲೆಕುಡಿಯ ಸಮುದಾಯದವರು ಇಲ್ಲಿ ವಾಸವಿದ್ದಾರೆ. ಘಟನೆಯು ವಿಕ್ರಂ ಗೌಡನ ಸಂಬಂಧಿಕರ ಮನೆಯ ಸಮೀಪವೇ ನಡೆದಿದೆ. ಈ ಭಾಗದಲ್ಲಿ ದಟ್ಟಕಾಡಿನ ನಡುವೆ 1 ಕಿ.ಮೀ., ಅರ್ಧ ಕಿ.ಮೀ. ಅಂತರದಲ್ಲಿ ಮನೆಗಳಿದ್ದು, ಉಳಿದ ಮನೆಯವರಲ್ಲೂ ಆತಂಕ ಮುಂದುವರಿದಿದೆ. ಎಎನ್‌ಎಫ್‌ ಸಶಸ್ತ್ರ ಮೀಸಲು ಪಡೆ, ಹೆಬ್ರಿ, ಅಜೆಕಾರು, ಕಾರ್ಕಳ ಪೊಲೀಸರು ಸಹಿತ ರಾಜ್ಯ ಆಂತರಿಕ ಭದ್ರತಾ ವಿಭಾಗದ ಸಿಬಂದಿಯೂ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಕೇಂದ್ರ ಗುಪ್ತಚರ ವಿಭಾಗ ನಿಗಾ
ಕೇಂದ್ರ ಗುಪ್ತಚರ ವಿಭಾಗವು (ಇಂಟೆಲಿಜೆನ್ಸ್‌ ಬ್ಯೂರೊ) ನಕ್ಸಲ್‌ ಚಟುವಟಿಕೆ ಮತ್ತು ಎನ್‌ಕೌಂಟರ್‌ ಪ್ರಕರಣದ ಮೇಲೆ ನಿಗಾ ಇರಿಸಿ ಸಮಗ್ರ ಮಾಹಿತಿಯನ್ನು ಕಲೆ ಹಾಕಿದೆ. ಎನ್‌ಕೌಂಟರ್‌ ಪ್ರದೇಶಕ್ಕೆ ರಾಜ್ಯ ಆಂತರಿಕ ಭಧ್ರತಾ ವಿಭಾಗದ ಡಿಜಿಪಿ ಪ್ರಣವ್‌ ಮೊಹಂತಿ ಬುಧವಾರ ಬೆಳಗ್ಗೆ ಭೇಟಿ ನೀಡಿದರು. ಎಎನ್‌ಎಫ್‌ ಎಸ್‌ಪಿ ಜಿತೇಂದ್ರ ದಯಾಮ, ಉಡುಪಿ ಎಸ್‌ಪಿ ಡಾ| ಅರುಣ್‌ ಕೆ., ಹೆಬ್ರಿ ನಕ್ಷಲ್‌ ನಿಗ್ರಹ ದಳದ ಡಿವೈಎಸ್‌ಪಿ ರಾಘವೇಂದ್ರ, ಪೊಲೀಸ್‌ ನಿರೀಕ್ಷಕ ಸತೀಶ್‌ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next