Advertisement

Hebri: ನಕ್ಸಲ್‌ ಎನ್‌ಕೌಂಟರ್‌ ಪ್ರಕರಣ: ಕಬ್ಬಿನಾಲೆ ಸುತ್ತಮುತ್ತ ಮುಂದುವರಿದ ಶೋಧ ಕಾರ್ಯ

10:45 PM Dec 01, 2024 | Team Udayavani |

ಹೆಬ್ರಿ: ಹೆಬ್ರಿ ತಾಲೂಕಿನ ನಾಡಪಾಲ್‌ ಗ್ರಾಮದ ಪೀತಬೈಲು ಎಂಬಲ್ಲಿ ನಡೆದ ನಕ್ಸಲ್‌ ನಾಯಕ ವಿಕ್ರಂ ಗೌಡನ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬಿನಾಲೆ, ಮತ್ತಾವು, ನಾಡ್ಪಾಲು, ಪೀತಬೈಲು ಸುತ್ತಮುತ್ತ ಶೋಧ ಕಾರ್ಯ ಮುಂದುವರಿದಿದೆ.

Advertisement

ತನಿಖೆಯನ್ನು ಹೆಬ್ರಿ ಪೊಲೀಸ್‌ ಠಾಣೆಗೆ ನೀಡಲಾಗಿದ್ದು ಡಿವೈಎಸ್ಪಿ ನೇತೃತ್ವದಲ್ಲಿ ಹೆಬ್ರಿ ಪೊಲೀಸರು ಹಾಗೂ ಎಎನ್‌ಎಫ್‌ ಸಿಬಂದಿ ಎನ್‌ಕೌಂಟರ್‌ ಪ್ರದೇಶದ ಸುತ್ತಮುತ್ತ ಶೋಧ ಕಾರ್ಯ ನಡೆಸುತ್ತಿದ್ದಾರೆ. ವಿಕ್ರಂ ಗೌಡನೊಂದಿಗೆ ಇದ್ದ ನಕ್ಸಲರು ತಪ್ಪಿಸಿಕೊಂಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗುತ್ತಿದೆ.

ಭಯಭೀತರಾದ ಜನ
ಎನ್‌ಕೌಂಟರ್‌ ಪ್ರಕರಣದ ಬಳಿಕ ಕಬ್ಬಿನಾಲೆ ಸುತ್ತಮುತ್ತ ಜನ ಭಯಭೀತರಾಗಿದ್ದಾರೆ. ಎನ್‌ಕೌಂಟರ್‌ ಪ್ರಕರಣ ನಡೆದ ಮನೆಯ ವಾರಸುದಾರರು ಇನ್ನು ಕೂಡ ಮನೆ ಕಡೆ ತೆರಳಿಲ್ಲ. ವಿಕ್ರಂ ಗೌಡ ಮೃತ ಪಟ್ಟ ಹಿನ್ನೆಲೆಯಲ್ಲಿ ಆ ಮನೆಯಲ್ಲಿ ಪೂಜಾ ಕಾರ್ಯದ ಬಳಿಕ ಮನೆಗೆ ಪ್ರವೇಶ ಮಾಡುತ್ತಾರೆ ಎನ್ನಲಾಗುತ್ತಿದೆ. ಪಕ್ಕದ ಮನೆಯಲ್ಲಿ ಎಎನ್‌ಎಫ್‌ ತಂಡ ಬಿಡು ಬಿಟ್ಟಿದೆ. ಇದರಿಂದ ಈ ಮನೆಯಲ್ಲಿ ವಾಸಿಸುವವರು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗುತ್ತಿದೆ ಪ್ರಕರಣದ ಬಳಿಕ ಈ ಭಾಗದ ಜನ ಇನ್ನೂ ಕೂಡ ಸಹಜ ಸ್ಥಿತಿಯತ್ತ ಬಂದಿಲ್ಲ.

ಪ್ರಕರಣದ ತನಿಖೆ ಏನಾಯಿತು?
ಹೆಬ್ರಿ: ಕಬ್ಬಿನಾಲೆ ಸಮೀಪ ಪೀತಬೈಲಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮರುಣೋತ್ತರ ಪರೀಕ್ಷೆ ಮತ್ತು ಎಫ್‌ಎಸ್‌ಎಲ್‌ ತಜ್ಞರ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರಕರಣದ ತನಿಖಾಧಿಕಾರಿ, ಕಾರ್ಕಳ ಡಿವೈಎಸ್‌ ಪಿ. ಅರವಿಂದ್‌ ತಿಳಿಸಿದ್ದಾರೆ. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಎಲ್ಲ ಆಯಾಮಗಳಿಂದಲೂ ವಿಚಾರಣೆ ನಡೆಸಿ, ಸ್ಥಳ ಮಹಜರು, ಪರಿಶೀಲನೆ ಕೈಗೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next