ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯ ನಿರ್ಧಾರದಿಂದಾಗಿ ನಕ್ಸಲ್ ಹಿಂಸಾಚಾರ ಗಣನೀಯ ಪ್ರಮಾಣದಲ್ಲಿ ತಗ್ಗಿದ್ದು, ನಗರ ನಕ್ಸಲೀಯರು ಬಹಿರಂಗಗೊಂಡಿದ್ದಾರೆ ಎಂದು ಬಿಜೆಪಿಯ ಥಿಂಕ್ ಟ್ಯಾಂಕ್ (ಚಿಂತ ಕರ ಚಾವಡಿ) ಹೇಳಿದೆ. 2016ರ ನ. 8ರಂದು ನರೇಂದ್ರ ಮೋದಿ ಅವರು 500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರ ವನ್ನು ಘೋಷಿಸಿದ್ದರು. ಇದಾದ ಮೇಲೆ ನಕ್ಸಲೀಯರು ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸಿದರು. ಅಲ್ಲದೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಸಾರ್ವಜನಿಕ ನೀತಿ ಸಂಶೋಧನಾ ಕೇಂದ್ರದ (ಪಿಪಿಆರ್‌ಸಿ) ವರದಿ ಹೇಳಿದೆ. ಛತ್ತೀಸ್‌ಗಢದ ನಕ್ಸಲ್ ಪೀಡಿತ ಜಿಲ್ಲೆಗಳಾದ ಸುಖ್ಮಾ, ಬಿಜಾಪುರ, ರಾಜ್‌ನಂದಗಾಂವ್ ಮತ್ತು ನಾರಾಯಣಪುರದಲ್ಲಿನ ಶರಣಾದ ನಕ್ಸಲರು ಮತ್ತು ಆದಿವಾಸಿಗಳನ್ನು ಮಾತನಾಡಿಸಿ ಈ ವರದಿ ತಯಾರಿಸಲಾಗಿದೆ. ಜತೆಗೆ ಛತ್ತೀಸ್‌ಗಡದಲ್ಲೂ ಗಣನೀಯ ಪ್ರಮಾಣದಲ್ಲಿ ನಕ್ಸಲ್ ಹಾವಳಿ ಕಡಿಮೆಯಾಗಿದ್ದು, 2017ರಲ್ಲಿ ನಕ್ಸಲ್ ಅಪರಾಧಗಳು ಶೇ.20ರಷ್ಟು ಇಳಿಕೆಯಾಗಿವೆ ಎಂದೂ ಈ ವರದಿ ಹೇಳಿದೆ. ಅಲ್ಲದೆ ನೋಟು ಅಮಾನ್ಯ ನಿರ್ಧಾರವು ದಿಟ್ಟ ಕ್ರಮವಾಗಿದೆ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಬುಧವಾರವಷ್ಟೇ ಈ ವರದಿಯನ್ನು ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರೆಬುದ್ದೆ ಅವರು ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, 2015ಕ್ಕೆ ಹೋಲಿಕೆ ಮಾಡಿದರೆ 2017ರಲ್ಲಿ ನಕ್ಸಲೀಯರ ಬಂಧನ ಪ್ರಕರಣಗಳು ಶೇ. 55ರಷ್ಟು ಹೆಚ್ಚಾಗಿವೆ ಎಂದಿದ್ದಾರೆ.
ನಕ್ಸಲ್ ಸಮಸ್ಯೆ ಹೋಗಲಾಡಿಸಲು ರಾಜಕೀಯ ಇಚ್ಛಾಶಕ್ತಿ ಬೇಕಿತ್ತು. ಅದನ್ನು ಹಿಂದೆ ಯಾರೂ ತೋರಿಸಿರಲಿಲ್ಲ, ಈಗ ನರೇಂದ್ರ ಮೋದಿ ಅವರು ಈ ಇಚ್ಛಾಶಕ್ತಿ ತೋರಿಸಿ ನಕ್ಸಲೀಯರ ಬೆನ್ನುಮೂಳೆ ಮುರಿದಿದ್ದಾರೆ ಎಂದರು. ಜತೆಗೆ ಹಣಕಾಸಿನ ಸಮಸ್ಯೆ ಎದುರಾಗಿದ್ದರಿಂದಲೇ ನಗರ ನಕ್ಸಲರ ಮುಖವಾಡವೂ ಬಯಲಾಯಿತು ಎಂದಿದ್ದಾರೆ.