Advertisement

UV Fusion: ಸ್ತ್ರೀ ಮಹತ್ವ ಸಾರುವ ನವರಾತ್ರಿ

03:07 PM Oct 30, 2024 | Team Udayavani |

ಪುರಾತನ ಭಾರತದಿಂದ ಹಿಡಿದು ಇಂದಿನ ಆಧುನಿಕ ಭಾರತದ ತನಕವೂ  ಪ್ರತಿಯೊಂದರಲ್ಲೂ ಕೂಡ ಸ್ತ್ರೀಯನ್ನು ಆರಾಧಿಸಿಕೊಂಡು ಪೂಜಿಸಿಕೊಂಡು ಬಂದಿರುವ ಪುಣ್ಯ ನೆಲ  ನಮ್ಮ ಭರತಖಂಡವಾಗಿರುತ್ತದೆ.ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ.ಎಲ್ಲಿ ಸ್ತ್ರೀಯರನ್ನು  ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆನ್ನುವ ಮಾತಿನಂತೆ ಪೂರ್ಣ ದೇಶವನ್ನೇ ತಾಯಿಗೆ ಹೋಲಿಸುವ ನಾವು ದೇಶದ ಎಲ್ಲ ನದಿಗಳಿಗೂ ಇಟ್ಟಿರೋ ಹೆಸರುಗಳನ್ನು ನೋಡಿದರೆ ಈ ದೇಶ ಸ್ತ್ರೀ ಸಮಾಜಕ್ಕೆ  ನೀಡುತ್ತಿರುವ ಗೌರವದ ಮಹತ್ವ ಎಷ್ಟು ಎನ್ನುವುದು ತಿಳಿಯುವುತ್ತದೆ.

Advertisement

ಹಿಂದೂ ಸಂಪ್ರದಾಯದ ಪ್ರತಿಯೊಂದು ಹಬ್ಬಕ್ಕೂ ಕೂಡ ಅದರದ್ದೇ ಆದ ಒಂದೊಂದು ಆಚರಣೆ ಇರುತ್ತದಂತೆ. ಅವುಗಳಲ್ಲಿ ಮಹಾನವರಾತ್ರಿ ಹಬ್ಬವು  ಪ್ರಪಂಚದಾದ್ಯಂತದ ಹಿಂದೂಗಳಿಗೆ ಬಹಳ ಮುಖ್ಯವಾದ ಹಬ್ಬವಾಗಿದೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬವು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ.ನವರಾತ್ರಿಯ ಒಂಬತ್ತು ದಿನಗಳಲ್ಲಿ ಬಹಳ ನಿಯಮ ನಿಷ್ಠೆಯಿಂದ  ವ್ರತವನ್ನು ಆಚರಿಸುವ ಮಹಿಳೆಯರು ದುರ್ಗಾದೇವಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತೆ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಅನ್ನುವ ಒಂಬತ್ತು ರೂಪಗಳಲ್ಲಿ ಪೂಜಿಸಲ್ಪಡುತ್ತಾರೆ ಹಾಗೂ ಹತ್ತನೇ ದಿನವನ್ನು ವಿಜಯದಶಮಿ ಹಬ್ಬವಾಗಿ ಆಚರಿಸಿ ನವರಾತ್ರಿ ಹಬ್ಬವನ್ನು ಸಂಪನ್ನಗೊಳಿಸುತ್ತಾರೆ.

ಮಹಾನವರಾತ್ರಿ ಹಬ್ಬಕ್ಕೆ ಪುರಾತನವಾದ ಇತಿಹಾಸ ಪ್ರತಿ ಪ್ರಾಂತದಲ್ಲೂ ಕೂಡ ವಿವಿಧ ರೀತಿಯಲ್ಲಿ ರೂಢಿಯಲ್ಲಿದೆ. ಅವುಗಳಲ್ಲಿ ಹಿರಿಯರಿಂದ ಕೇಳಿ ತಿಳಿದ ಮಾಹಿತಿಯ ಪ್ರಕಾರ, ಸೃಷ್ಟಿಕರ್ತನಾದ ಬ್ರಹ್ಮದೇವನು ರಾಕ್ಷಸ ರಾಜನಾದ ಮಹಿಷಾಸುರನ ಘೋರ ತಪಸ್ಸನ್ನು ಮೆಚ್ಚಿ ಆತನಿಗೆ ಅಮರತ್ವವನ್ನು ವಾಗ್ಧಾನ ಮಾಡಿದನು ಜತೆಗೆ  ಕೇವಲ ಒಬ್ಬ ಮಹಿಳೆಯಿಂದ ಮಾತ್ರ ಅವನನ್ನು ಸೋಲಿಸಲು ಅಥವಾ ಸಂಹಾರ ಮಾಡಲು ಸಾಧ್ಯ ಎಂದು ವರ ನೀಡಿದ್ದನು. ಯಾವ ಹೆಣ್ಣು ಕೂಡ ತನ್ನನ್ನು ಕೊಲ್ಲಲು ಸಾಧ್ಯವೇ ಇಲ್ಲ ಎಂಬ ಅಹಂಕಾರಭೂರಿತನಾದ ಮಹಿಷಾಸುರನು ತ್ರಿಲೋಕಗಳ ಮೇಲೆ ದಾಳಿ ಮಾಡುವುದನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ಆಗ ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು,ಮಹೇಶ್ವರರ ತ್ರಿಶಕ್ತಿ ಸಂಗಮವಾಗಿ ತ್ರಿಶೂಲದ್ಧಾರಿಯಾಗಿ ಶ್ರೀ ದುರ್ಗಾ ದೇವಿಯು ಅವತರಿಸಿ ಮಹಿಷಾಸುರನನ್ನು ಸಂಹಾರಿಸಿದಳೆನ್ನುವುದು ಪುರಾಣಗಳ ಇತಿಹಾಸ. ರಾಕ್ಷಸನ ಸಂಹಾರ ಹಾಗೂ ಭೂಮಿಯಲ್ಲಿ  ಶಾಂತಿ ನೆಮ್ಮದಿ ಮತ್ತೇ ಪುನಃ ಸ್ಥಾಪಿತವಾದ ಖುಷಿಯಾಗಿ ವಿಜಯದಶಮಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ದುರ್ಗಾದೇವಿಯ ಪ್ರತಿರೂಪವೇ ಆಗಿರುವ ನಾಡ ದೇವಿ ಯಾದ ತಾಯಿ ಚಾಮುಂಡೇಶ್ವರಿ ದೇವಿಯು ಮಹಿಷಾಸುರನನ್ನು ಸಂಹಾರ ಮಾಡಿ ಶಾಂತಿ ಸ್ಥಾಪಿಸಿದ ಪುಣ್ಯಭೂಮಿ ನಮ್ಮ ರಾಜ್ಯವೇ ಆಗಿರುವುರಿಂದ ನವರಾತ್ರಿ ಹಬ್ಬವನ್ನು ನಾಡ ಹಬ್ಬವೆಂದೇ ನಾವು ಕರೆಯಲ್ಪಡುತ್ತಾ ಆಚರಿಸಿಕೊಂಡು ಬಂದಿರುತ್ತೇವೆ. ನವರಾತ್ರಿ ಹಬ್ಬದ ಬಹುಮುಖ್ಯವಾದ ತಾತ್ಪರ್ಯವೇನೆಂದರೇ, ಪುರುಷ ಸಮಾಜ ತನ್ನ ಸುತ್ತ ಇರುವ ಸ್ತ್ರೀಯನ್ನು ಗೌರವಯುತವಾಗಿ ಪೂಜಿಸಿ ಅವರಲ್ಲಿ ದೇವಿ ಸ್ವರೂಪವನ್ನು  ನೋಡಬೇಕಂತೆ ಹಾಗೆ ಆರಾಧಿಸಬೇಕಂತೆ. ಪ್ರತಿಯೊಂದು ಮನೆಯ ಪ್ರತಿಯೊಂದು ಹೆಣ್ಣಲ್ಲೂ ಕೂಡ ಸಕಲ ಸಂಪನ್ನೇ ಅಲಂಕಾರ ಭೂಷಿತೆಯಾಗಿರುವ ಸಾûಾತ್‌ ಶ್ರೀ ದುರ್ಗಾದೇವಿ ಈ ಒಂಬತ್ತು ದಿನವೂ ಅವತಾರವೇತ್ತಿಬಂದು ಪ್ರತಿಯೊಬ್ಬರ ಮನಸಿನಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯ ಎನ್ನುವ ರಾಕ್ಷಸನನ್ನು ಸಂಹರಿಸಿ ಅವರಲ್ಲಿ ಶಾಂತಿ,ನೆಮ್ಮದಿ, ಖುಷಿಯನ್ನು ಸ್ಥಾಪಿಸುವುದೇ ಆಗಿರುತ್ತದೆ.

ಸರ್ವೇ ಜನಾಃ ಸುಖೀನೋ ಭವಂತು ಸರ್ವೇ ಸಂತು ನಿರಾಮಯಃ

Advertisement

-ಪ್ರಸಾದ್‌ ಆಚಾರ್ಯ

ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next