Advertisement
ನವರಾತ್ರಿಗಳಲ್ಲೆಲ್ಲ ಶ್ರೇಷ್ಠ ಶರದೀಯ ನವರಾತ್ರಿ. ಅದು ಮಹಾನವರಾತ್ರಿ! ಶರದೃತು ಆಶ್ವಯುಜ ಮಾಸದಲ್ಲಿ ಬರುವ ಪರ್ವ ಆದುದರಿಂದ ಶರದೀಯ ನವರಾತ್ರಿ. ನವದಿನಗಳಲ್ಲೂ ಶಕ್ತಿದೇವತೆಯ ನವ ರೂಪಗಳ ಆರಾಧನೆ. ನವದಿನೋತ್ಸವದ ಸಮಾಪನ ದಸರಾ, ವಿಜಯದಶಮಿ. ದೇವಿಯನ್ನು ಮಾತೃ ಸ್ವರೂಪಿ ಎಂದು ಪೂಜಿಸುವುದು ಸನಾತನ ಸಂಸ್ಕೃತಿಯ ವೈಶಿಷ್ಟ್ಯ. ದೇವಿ ಶಕ್ತಿ ಸ್ವರೂಪಿಯೂ ಹೌದು. ನವ ರಾತ್ರಿ ಪೂಜೆಯು ಮಾತೃಪೂಜೆಯೇ. ಅವಳು ಆದಿಮಾತೆ, ಪರಾಶಕ್ತಿ, ಆದಿಶಕ್ತಿ, ಧಾತ್ರಿ. ಅವಳು ವಿಶ್ವಮಾತೆ. ಮಹಾಮಾತೆ. ನವರಾತ್ರಿಯಲ್ಲಿ ಮಾತೃಶಕ್ತಿಯ ಆರಾಧನೆಗೆ ಪ್ರಾಶಸ್ತ್ಯ.
ದೇವೀಭಾಗವತದ ಪ್ರಥಮ ಸ್ಕಂದವು ಮಹಾಲಕ್ಷ್ಮೀ, ಸರಸ್ವತಿ, ಮಹಾಕಾಳೀ ಈ ಮೂವರು ದೇವಿಯ ಗುಣತ್ರಯದ ಮೂರು ಶಕ್ತಿರೂಪಗಳು – ಬ್ರಹ್ಮ, ವಿಷ್ಣು, ರುದ್ರ ಎಂಬ ತ್ರಿಮೂರ್ತಿಗಳು ಸಹ ಈ ಶಕ್ತಿಯಿಂದಲೇ ಜನಿಸಿದರು ಎಂದು ಹೇಳಲಾಗಿದೆ. ಹನ್ನೆರಡನೇ ಸ್ಕಂದದಲ್ಲಿ ಗಾಯತ್ರಿಸ್ವರೂಪ, ಮಹಿಮೆ, ಕೇನೋಪನಿಷತ್ತಿನಲ್ಲಿ ಬರುವ ದೇವಿಯ ಕಥೆ ಇತ್ಯಾದಿ ವರ್ಣನೆಗಳು ಬಂದಿವೆ. ದೇವೀಭಾಗವತದಲ್ಲಿ ಪರ ಬ್ರಹ್ಮದ ಒಂದು ಅನಿರ್ವಾಚ್ಯವಾದ ಮಾಯಶಕ್ತಿಯನ್ನೇ ದೇವಿ ಯೆಂದು ಚಿತ್ರಿಸಲಾಗಿದೆ. ಸರಸ್ವತಿ, ಲಕ್ಷ್ಮೀ, ದುರ್ಗಾ ಇವರೂ ಶಕ್ತಿಯ ಒಂದಂಶಗಳು. ದೇವಿಯು ಒಂದು ದೃಷ್ಟಿಯಿಂದ ತ್ರಿಮೂರ್ತಿಗಳ ಜನನಿಯಾದರೆ ಇನ್ನೊಂದು ದೃಷ್ಟಿಯಿಂದ ಪತ್ನಿ. ಅವಳು ಪರಬ್ರಹ್ಮಸ್ವರೂಪಿಣಿಯೂ ಹೌದು, ಪರಬ್ರಹ್ಮದ ಶಕ್ತಿಯೂ ಹೌದು.
Related Articles
Advertisement
ಇದನ್ನೂ ಓದಿ:ಕೋವಿಡ್ ಲಸಿಕೆ ಭೀತಿ ಇರುವವರ ಸಂಖ್ಯೆ ಶೇ.7ಕ್ಕೆ ಇಳಿಕೆ
ಬ್ರಹ್ಮಾಂಡಪುರಾಣದ ಅಂತ್ಯಭಾಗದಲ್ಲಿ ದೇವಿ ಲಲಿತೆಯ ಚರಿತ್ರೆಯನ್ನು 40 ಅಧ್ಯಾಯಗಳಲ್ಲಿ ವರ್ಣಿಸಲಾಗಿದೆ. ಈ ಲಲಿತೋಪಾಖ್ಯಾನದಿಂದಲೇ ಲಲಿತಾ ಸಹಸ್ರನಾಮವು ನೀಡ ಲ್ಪಟ್ಟಿದೆ. ಇದರಲ್ಲಿ ಮೊದಲು ದೇವಿಯ ರೂಪದ ವರ್ಣನೆಯಿದೆ. ಅನಂತರ ಗುಣವರ್ಣನೆ. ನಮ್ಮ ನೈಜ ಬದುಕಿನಲ್ಲಿ ತಂದೆ ಗಿಂತಲೂ ತಾಯಿಯಲ್ಲಿ ಪ್ರೀತಿ, ಸಲುಗೆ ಹೆಚ್ಚಿರುವಂತೆ ದೇವಿಯ ಒಲವು, ವಾತ್ಸಲ್ಯಗಳೇ ನಮಗೆ ಶ್ರೀರಕ್ಷೆ. ಹೆತ್ತ ಕರುಳಿನ ವಾತ್ಸಲ್ಯದಿಂದ, ಔದಾರ್ಯದಿಂದ ನಾವು ಬೇಡಿದ್ದನ್ನು ನೀಡುವ ಸ್ವಭಾವ ಅವಳದು. ಅವ್ಯಾಜಕರುಣಾಮೂರ್ತಿ, ಶ್ರೀಮಾತೆ ಕ್ಷಿಪ್ರಪ್ರಸಾದಿನಿಯಾಗುತ್ತಾಳೆ.
ಬ್ರಹ್ಮವಿದ್ಯೆ ಮತ್ತು ಶ್ರೀವಿದ್ಯೆಬ್ರಹ್ಮವಿದ್ಯೆಯು ಬ್ರಹ್ಮಜ್ಞಾನ. ಶ್ರೀವಿದ್ಯೆಯು ದೇವಿಯ ಜ್ಞಾನ. ಎರಡೂ ಒಂದೇ. ಬ್ರಹ್ಮವಿದ್ಯೆಯಲ್ಲಿ ಪ್ರಣವ ಓಂಕಾರ ಮಂತ್ರ ವಿದ್ದರೆ, ಶ್ರೀವಿದ್ಯೆಯಲ್ಲಿ ಬೀಜಮಂತ್ರ ಹ್ರೀಂ. ಬೀಜಮಂತ್ರ ಹ್ರೀಂ, ಮಾಯಾ ಬೀಜ ಅಥವಾ ಭುವನೇಶ್ವರಿ ಬೀಜವೆಂದು ಕರೆಯಲ್ಪಡುತ್ತದೆ. ಮರ, ಹೂ ಮತ್ತು ಹಣ್ಣು ಬೀಜದಿಂದ ಉತ್ಪನ್ನಗೊಂಡಂತೆ ದೇವಿಯ ವಿವಿಧ ಮುಖಗಳು, (ಮಹಾಕಾಳಿ, ಲಕ್ಷ್ಮೀ, ಸರಸ್ವತಿ) ಹ್ರೀಂ ಮಂತ್ರದಿಂದ ನಿಷ್ಪತ್ತಿ ಯಾಗುತ್ತದೆ. ದೇವಿ ಮಹಾತ್ಮೆಯನ್ನು ಆಂತರಿಕ ತೀರ್ಥಯಾತ್ರೆ ಎಂದೂ ಭಾವಿಸಬಹುದು. ಸತ್ವ ತಮ ರಜೋಗುಣದ ಪ್ರತಿರೂಪವೇ ಮಹಾಸರಸ್ವತಿ (ಸತ್ವ) ಮಹಾಲಕ್ಷ್ಮೀ (ರಜಸ್) ಮಹಾಕಾಳಿ (ತಮಸ್). ನವರಾತ್ರಿಯಲ್ಲಿ ಪ್ರಧಾನ ದೇವತೆ ದುರ್ಗೆಯಾದರೂ ದೇವಿ ಭವಾನಿ, ದೇವಿ ಅಂಬಾ ಎಂದೂ ಆರಾಧಿಸಲ್ಪಡುವುದಿದೆ. ಎಲ್ಲ ರೂಪಗಳು ದೇವೀ ಪಾರ್ವತಿಯೇ. ದುರ್ ಮತ್ತು ಗಮ್ ಎಂಬೆರಡು ಪದಗಳಿಂದ ಅವಿಷ್ಕರಿಸಲ್ಪಟ್ಟ ಪದ ದುರ್ಗ. ಋಗ್ವೇದದಲ್ಲಿ ಈ ಪದ ಕಂಡು ಬರುತ್ತದೆ. ಕೋಟೆಯಂತಿರುವ, ಪ್ರವೇಶಿಸಲು ಅಸಾಧ್ಯವಾದ ಅಥವಾ ಅಭೇದ್ಯ ಎಂಬರ್ಥ. ಪುರಾಣಗಳ ಉಲ್ಲೇಖದಂತೆ ಆದಿಶಕ್ತಿ ಅಥವಾ ಪರಾಶಕ್ತಿ ದುರ್ಗಮಾಸುರನೆಂಬ ರಾಕ್ಷಸನನ್ನು ಸಂಹಾರಮಾಡಿದ್ದರಿಂದ ಅವಳು ದುರ್ಗೆ. ಪಾಡ್ಯದಿಂದ ನವಮಿಯವರೆಗೆ ತಿಥಿಗನುಗುಣವಾಗಿ ಪೂಜಿಸಲ್ಪಡುವ ದುರ್ಗಾ ರೂಪಗಳೆಂದರೆ ಶೈಲಪುತ್ರಿ, ಬ್ರಹ್ಮಚಾರಿಣೀ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯನೀ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ. ಪ್ರಕೃತಿ -ಶಕ್ತಿ ದೇವಿ
ವೇದದಲ್ಲಿ ಪ್ರ ಅಂದರೆ ಶ್ರೇಷ್ಠ ಅಥವಾ ಪ್ರಥಮ.ಕೃತಿ ಅಂದರೆ ಸೃಷ್ಟಿ. ಪ್ರ ಎಂದರೆ ಸತ್ವ. ಕೃ ಅಂದರೆ ರಜ. ತಿ ತಮ. ಪ್ರಕೃತಿಯು ಸತ್ವ ತಮ ರಜೋ ಎಂಬ ಮೂರು ಗುಣಗಳನ್ನು ಹೊಂದಿರುವ ಪ್ರಬಲ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಸೃಷ್ಟಿ ಕ್ರಿಯೆ ಯಲ್ಲಿ ಪ್ರಕೃತಿಯನ್ನು ಐದು ರೂಪಗಳಲ್ಲಿ ವಿಶ್ಲೇಷಿ ಸಬ ಹುದು. ದುರ್ಗೆ, ಲಕ್ಷ್ಮೀ, ಸರಸ್ವತಿ, ಸಾವಿತ್ರಿ ಅಥವಾ ಗಾಯತ್ರಿ, ರಾಧಾ. ದುರ್ಗೆಯ ವಿಗ್ರಹ ಏನಿದರ ಸಂಕೇತ?
ದೇವತಾ ವಿಗ್ರಹವು ನಮ್ಮೊಳಗಿರುವ ಪರಮಾತ್ಮನನ್ನು ತಿಳಿಸುತ್ತದೆ. ದುರ್ಗೆಯ ಆಯುಧ ತ್ರಿಶೂಲ, ತ್ರಿ ಗುಣಗಳನ್ನು ಸೂಚಿಸುತ್ತದೆ. ನಾಲ್ಕು ಕರಗಳು ಸತ್ವ, ರಜ, ತಮ ಮತ್ತು ಅಹಂಕಾರ. ಶಂಖವು ನಿಗೂಢ ಅಂಶಗಳನ್ನು ಪ್ರತಿನಿಧಿಸುತ್ತದೆ. ಅದು ರಜೋಗುಣದ ಸಂಕೇತವೂ ಹೌದು. ಚಕ್ರವು ಮನಸಿನ ಪ್ರತಿನಿಧಿ. ಬಾಣ ಸಾತ್ವಿಕ ಮಾಯೆಯ ಸಂಕೇತ. ಗಧೆ ಅಜ್ಞಾನವನ್ನು ಹೋಗಲಾಡಿಸುವ ಚಿಹ್ನೆ. ಕೈಯಲ್ಲಿನ ತಾವರೆ ಹೂವು ವಿಶ್ವದ 24 ತಣ್ತೀಗಳ ಸಂಕೇತ. ನವರಾತ್ರಿ ಮತ್ತು ಶರೀರ ಸಂಬಂಧ!
ನವರಾತ್ರಿಯಂದು ಪ್ರತೀ ರಾತ್ರಿಯಲ್ಲೂ ದೇವಿಯ ಒಂದೊಂದು ರೂಪವನ್ನು ಆರಾಧಿಸುವುದರಿಂದ ಒಂದೊಂದು ಗ್ರಹವನ್ನೂ ಪೂಜಿಸುತ್ತೇವೆ. ಈ ಮೂಲಕ ನಮ್ಮ ಶರೀರದ ನವರಂಧ್ರಗಳನ್ನು ಶುದ್ಧೀಕರಿಸಿಕೊಳ್ಳುತ್ತೇವೆ. ಇದು ಕೇವಲ ಬಾಹ್ಯ ಶುದ್ಧಿಯಲ್ಲ, ಹೃದಯ, ಮನಸ್ಸು ಮತ್ತು ಆತ್ಮ ಶುದ್ಧಿ. ಹೀಗಾಗಿಯೇ ಆಂತರಿಕ ಶುದ್ಧಿಯನ್ನು ಮಾಡಲು ನವರಾತ್ರಿ ಪರ್ವಕಾಲ. ಅದಕ್ಕೆಂದೇ ನಮ್ಮ ದೇಹವನ್ನು ದೇವಾಲಯಕ್ಕೆ ಹೋಲಿಸಿದ್ದಾರೆ ಶಾಸ್ತ್ರಕಾರರು. ಒಂದು ನಿರ್ದಿಷ್ಟ ಸಂಖ್ಯೆಗನುಗುಣವಾಗಿ ದೇವೀಪಾರಾಯಣವನ್ನು ಮಾಡಿದರೆ ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ನಿವಾರಣೆ, ಅಗೌರವದಿಂದ ಮುಕ್ತಿ, ಸಂಪತ್ತು ನಷ್ಟದಿಂದ ಪಾರು, ಮತ್ತು ಬದುಕಿನಲ್ಲಿ ಏಳಿಗೆಯಾಗುತ್ತದೆ ಎಂದು ಮತ್ಸ್ಯ ಪುರಾಣದಲ್ಲಿ ಹೇಳಲಾಗಿದೆ. ನಮ್ಮ ಶರೀರ, ಮನಸ್ಸು ಮತ್ತು ಬುದ್ಧಿಯ ಕಥೆಯೇ ದೇವಿ ಮಹಾತ್ಮೆಯ ಸಾರ. -ಜಲಂಚಾರು ರಘುಪತಿ ತಂತ್ರಿ,
ಉಡುಪಿ