Advertisement

ನವೋದಯ ಶಿಕ್ಷಣ ಸಂಕುಲ: ವಿಚಾರ ಮಂಥನ, ಸಾಂಸ್ಕೃತಿಕ ಕಾರ್ಯಕ್ರಮ

04:20 PM Feb 28, 2018 | |

ಮುಂಬಯಿ: ನವೋದಯ ಕನ್ನಡ ಸೇವಾ ಸಂಘ ಥಾಣೆ ಇವರ ಸಂಚಾಲಕತ್ವದಲ್ಲಿರುವ ನವೋದಯ ಇಂಗ್ಲೀಷ್‌ ಹೈಸ್ಕೂಲಿನ ಪ್ರಾಥಮಿಕ ವಿಭಾಗದ ಕನ್ನಡ ತರಗತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಚಾರ ಮಂಥನ ಕಾರ್ಯಕ್ರಮವು ಫೆ. 17 ರಂದು ಸಂಸ್ಥೆಯ ಜೂನಿಯರ್‌ ಕಾಲೇಜಿನ ಸಭಾಗೃಹದಲ್ಲಿ ನಡೆಯಿತು.

Advertisement

ಕಾರ್ಯಕ್ರಮದ  ಅಂಗವಾಗಿ  ಸದೃಢ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣದ ಅಗತ್ಯ. ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಕವಿ, ಬರಹಗಾರ, ಸಂಘಟಕ ವಿಶ್ವನಾಥ್‌ ಶೆಟ್ಟಿ ಪೇತ್ರಿ ಇವರು,  ಉತ್ತಮ ಸಮಾಜದ ನಿರ್ಮಾಣದಲ್ಲಿ ನೈತಿಕ ಶಿಕ್ಷಣದ ಅಗತ್ಯತೆಯ ಬಗ್ಗೆ ತಿಳಿಸುವುದರ ಜೊತೆಗೆ ಬೆಳೆಯ ಸಿರಿ ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ಮಕ್ಕಳಲ್ಲಿ ಉತ್ತಮ ಗುಣಗಳಾದಂತಹ ಶಿಸ್ತು, ನಿಷ್ಠೆ, ಗೌರವ, ಸಹನೆ ಹಾಗೂ ಆಧ್ಯಾತ್ಮಿಕತೆಯನ್ನು ಅಳವಡಿಸುವುದು ಬಾಲ್ಯದಲ್ಲಿಯೇ ಸಾಧ್ಯ.  ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಕುಟುಂಬದ ಪಾತ್ರ ಮುಖ್ಯವಾಗಿದೆ ಎಂದರು.

ಪಾಲಕರು ಸದಾ ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಹಾಗೂ ನಮ್ಮ ಪರಂಪರೆಯ ಬಗ್ಗೆ ಹೆಚ್ಚು ತಿಳಿಸಿಕೊಡಬೇಕು.  ನೈತಿಕ ಶಿಕ್ಷಣ ನೀಡುವಲ್ಲಿ ಪಾಲಕರ ಮತ್ತು ಶಿಕ್ಷರ ಜವಾಬ್ದಾರಿ ಸಮಾನವಾಗಿದೆ.  ನೈತಿಕ ಶಿಕ್ಷಣದೊಂದಿಗೆ ಬೆಳೆದ ಮಕ್ಕಳು ಸದೃಢ ಭಾರತದ  ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸುವುದರಲ್ಲಿ ಸಂಶಯವೇ ಇಲ್ಲ ಎಂದು ತಿಳಿಸಿದರು.

ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಕಾರ್ಯಕ್ರಮವು ಪ್ರಾರ್ಥನೆ ಹಾಗೂ ಸ್ವಾಗತಗೀತೆಯೊಂದಿಗೆ ಪ್ರಾರಂಭಗೊಂಡಿತು.  ನವೋದಯ ಕನ್ನಡ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ  ದಯಾನಂದ್‌ ಎಸ್‌. ಶೆಟ್ಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯಕಾರಿ ಸಮಿತಿಯ ಸದಸ್ಯರಾದ   ಗೋಪಾಲ ಎ. ಸೇರಿಗಾರ ಮತ್ತು   ರವಿ ಹೆಗ್ಡೆ ಇವರು ಅತಿಥಿಗಳನ್ನು ಪರಿಚಯಿಸಿದರು.  ಸಂಘದ ಅಧ್ಯಕ್ಷರಾದ  ಜಯ ಕೆ. ಶೆಟ್ಟಿ ಅತಿಥಿಗಳನ್ನು ಸ್ಮರಣಿಕೆಯನ್ನಿತ್ತು ಗೌರವಿಸಿದರು.  

ಶಾಲಾ ಶಿಕ್ಷಕಿ ಶ್ರುತಿ ಎನ್‌. ಇವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳ ಯಾದಿಯನ್ನು ಓದಿದರು.  ಈ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಕಲಿತು ಅತ್ಯುತ್ತಮ ವಿದ್ಯಾರ್ಥಿಗಳೆಂದು ಗುರುತಿಸಲ್ಪಟ್ಟ ಕು| ಭಾವಿಕಾ ಡಿ. ಹೆಗ್ಡೆ ಹಾಗೂ ಕು| ಅಶ್ವಿ‌ತ್‌ ಎ. ಶೆಟ್ಟಿ ಇವರನ್ನು ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ  ಗೌರವ ಅತಿಥಿಯಾಗಿ ಆಗಮಿಸಿದ ಉದ್ಯಮಿ  ಶೇಖರ ಶೆಟ್ಟಿ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪಾಲು ಪಾಲಕರದ್ದೂ ಇರುವುದರಿಂದ, ಮನೆಯಲ್ಲಿಯೂ ಒಳ್ಳೆಯ ವಾತಾವರಣವನ್ನು ಸೃಷ್ಟಿಸಿ ಕೊಡಬೇಕಾದುದು ಪಾಲಕರ ಆದ್ಯ ಕರ್ತವ್ಯ ಎಂದರು.

ನಕಾರಾತ್ಮಕವಾದುದನ್ನು ಸಕಾರಾತ್ಮಕವಾಗಿಸಿ 
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಜಯ ಕೆ. ಶೆಟ್ಟಿ ಅವರು, ಮಕ್ಕಳಿಗೆ ಹಾಗೂ ಪಾಲಕರಿಗೆ ಹಲವು ಹಿತನುಡಿಗಳನ್ನು ತಿಳಿಸುವುದರ ಜೊತೆಗೆ ಮಕ್ಕಳು ಕೆಲವು ನಕಾರಾತ್ಮಕ ವಿಚಾರಗಳನ್ನು ಹೇಗೆ ಸಕಾರಾತ್ಮಕವಾಗಿ ಪರಿವರ್ತಿಸಬೇಕು.  ಆಂಗ್ಲ ಭಾಷೆಯ ನಕಾರಾತ್ಮಕ ಶಬ್ದಗಳ ಅರ್ಥವನ್ನು ಯಾವ ರೀತಿಯಾಗಿ ಸಕಾರಾತ್ಮಕವಾಗಿ ಪರಿವರ್ತಿಸುವುದರ  ಮೂಲಕ ಮಕ್ಕಳು ಯಶಸ್ಸನ್ನು ಪಡೆಯಬಹುದು ಎಂದು ಅಭಿಪ್ರಾಯಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಭಾವಗೀತೆ, ಸಮೂಹಗೀತೆ, ನೃತ್ಯ ಹಾಗೂ ಅಕ್ಷರ ದಾಸೋಹ ಎಂಬ ಕಿರುನಾಟಕ ಪ್ರದರ್ಶನಗೊಂಡಿತು. ಕು| ಅಶ್ವಿ‌ತ್‌ ಎ. ಶೆಟ್ಟಿ ಕಾರ್ಯಕ್ರಮದ ನಿರೂಪಣೆಗೈದರು. ಕು| ಭಾವಿಕಾ ಹೆಗ್ಡೆ ಸ್ವಾಗತಿಸಿದರು.  

ಕು| ಸಾನಿಕಾ ಶೆಟ್ಟಿ ವಂದಿಸಿದರು. ನವೋದಯ ಕನ್ನಡ ಸೇವಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಮಾಜಿ ಪದಾಧಿಕಾರಿಗಳು, ಪ್ರಾಥಮಿಕ, ಮಾಧ್ಯಮಿಕ ಹಾಗೂ ಕಾಲೇಜು ವಿಭಾಗದ ಮುಖ್ಯೋಪಾಧ್ಯಾಯನಿಯರು, ಉಪ ಮುಖ್ಯೋಪಾಧ್ಯಾಯನಿ, ಶಿಕ್ಷಕ ವೃಂದ, ಪಾಲಕ -ಪೋಷಕರ ಉಪಸ್ಥಿತಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next