ನೆಲಮಂಗಲ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಯಂಟಗಾನಹಳ್ಳಿ ಶ್ರೀ ಗೂಬೆ ಕಲ್ಲಮ್ಮ ದೇವಾಲಯದ ಆವರಣದಲ್ಲಿ ನಗರದ ಶ್ರೀಲಕ್ಷ್ಮೀಚನ್ನಕೇಶವ ಎಂಟರ್ ಪ್ರೈಸಸ್ ಮಾಲಿಕರಾದ ಉಮಾದೇವಿ-ರಾಮಣ್ಣ ದಂಪತಿ ಲೋಕ ಕಲ್ಯಾಣಾರ್ಥ ಮಂಡಿಗೇರೆ ಶ್ರೀಜಯರಾಮ್ ಶಾಸ್ತ್ರೀಗಳ ನೇತೃತ್ವದಲ್ಲಿ 3ದಿನ ಶ್ರೀನವ ಚಂಡಿಮಹಾ ಯಾಗ ಹಮ್ಮಿಕೊಳ್ಳಲಾಗಿದ್ದು ಶುಕ್ರವಾರ ಮಧ್ಯಾಹ್ನ ಮಹಾಯಾಗದ ಪೂರ್ಣಾಹುತಿ ಅದ್ದೂರಿಯಾಗಿ ನೆರವೇರಿತು.
ಶಾಂತಿ ನೆಲೆಸಬೇಕು: ಶ್ರೀನವಚಂಡಿ ಮಹಾಯಾಗ ದಲ್ಲಿ ಶ್ರೀಲಕ್ಷ್ಮೀಚನ್ನಕೇಶವ ಎಂಟರ್ ಪ್ರೈಸಸ್ ಮಾಲಿಕರಾದ ರಾಮಣ್ಣ ಮಾತನಾಡಿ, ಕಳೆದ 3-4 ವರ್ಷದಿಂದ ಸಮಾಜದಲ್ಲಿ ಅನಾರೋಗ್ಯ ಹೆಚ್ಚಾಗಿದ್ದು ಕೋವಿಡ್ ಮಹಾಮಾರಿ ನಮ್ಮ ದೇಶವನ್ನಷ್ಟೇ ಅಲ್ಲದೆ ಇಡೀ ಪ್ರಪಂಚವನ್ನು ತಲ್ಲಣಗೊಳಿಸಿತ್ತು. ಪ್ರಸ್ತುತ ಸಮಾಜ ಚೇತರಿಕೆ ಕಾಣುತ್ತಿದೆ. ಹೀಗಾಗಿ ಸಮಾಜದ ಯಾವುದೇ ಜೀವರಾಶಿಗೂ ಯಾವುದೇ ಸಮಸ್ಯೆ ಎದುರಾಗಬಾರದು, ಸಮಾಜದಲ್ಲಿ ಸದಾ ಶಾಂತಿ ನೆಲೆಸಬೇಕು ಎಂಬ ಸಂಕಲ್ಪದಿಂದ ಲೋಕ
ಕಲ್ಯಾಣಾರ್ಥವಾಗಿ ಪ್ರತಿವರ್ಷ ನಮ್ಮ ಕುಟುಂಬ ನವಚಂಡಿ ಮಹಾಯಾಗ ನೆರವೇರಿಸಿಕೊಂಡು ಬರುತ್ತಿದೆ ಎಂದರು.
ವಿಶೇಷ ಪೂಜೆ: ಪ್ರಧಾನ ಅರ್ಚಕ ಮಂಡಿಗೆರೆ ಜಯರಾಮ್ ಶಾಸ್ತ್ರೀ ಮಾತನಾಡಿ, ಮಹಾಯಗ ಅಪರಿಮಿತವಾದದ್ದು. 9 ಪಾರಾಯಣ 700 ಶ್ಲೋಕ ಪಠಣ ಮಾಡುವ ಮೂಲಕ ಮಹಾಚಂಡಿಯನ್ನು ಸಂಪನ್ನಗೊಳಿಸಲಾಗಿದೆ. ಲೋಕದ ಒಳಿಗಾಗಿ 3 ದಿನ ವಿಶೇಷ ಪೂಜೆ ಆಯೋಜಿಸಲಾಗಿತ್ತು ಎಂದರು.
ಅನ್ನಸಂತರ್ಪಣೆ: ಕಾರ್ಯಕ್ರಮದ ಅಂಗವಾಗಿ ಶ್ರೀಗೂಬೆಕಲ್ಲಮ್ಮ ದೇವಿಗೆ ಶ್ರೀಚಾಮುಂಡೇಶ್ವರಿ ಸ್ವರೂಪದ ಅಲಂಕಾರ ಮಾಡಲಾಗಿದ್ದು ವಿವಿಧ ಬಗೆಯ ಪುಷ್ಪ, ದೇವಿಯ ವಾಹನ ಸಿಂಹದ ರೂಪ ಭಕ್ತರನ್ನು ಆಕರ್ಷಿಸಿತ್ತು. ಈ ವೇಳೆ ಭಕ್ತಾದಿಗಳು ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದು ವಿಶೇಷವಾಗಿತ್ತು, ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಉಮಾದೇವಿ ರಾಮಣ್ಣ ಕುಟುಂಬದಿಂದ ಅನ್ನಸಂತರ್ಪಣೆ ನಡೆಯಿತು.