Advertisement

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

01:22 PM Oct 05, 2024 | Team Udayavani |

ಸಕಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು, ಹೊಸ ಚೈತನ್ಯದ ರಾತ್ರಿಗಳು. ದಿನದ ಸಮಯದಲ್ಲಿ ಅವರವರ ಮನೆಗಳಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡುವ ಮಂದಿ, ಸಂಜೆಯಾದಂತೆ ಒಗ್ಗೂಡಿ, ಆಯಾ ದಿನಕ್ಕೆ ಒಪ್ಪುವಂಥಾ ನವ ವಸ್ತ್ರಗಳನ್ನು ಧರಿಸಿ ನಲಿವ ರಾತ್ರಿಯೇ ನವರಾತ್ರಿ. ಒಂದು ಸಮುದಾಯವಾಗಿ ಕೂಡಿ ನಲಿವ, ನಾನಾ ವಿಧವಾದ ದೇವಿಸ್ತುತಿಗಳನ್ನು ಪಾಡಿಕೊಂಡು ಸಂಭ್ರಮಿಸುವ, ಗರ್ಬಾ – ರಾಸ್‌ ಮೊದಲಾದ ರೀತಿಯ ನೃತ್ಯಗಳಲ್ಲಿ ಗಂಡು-ಹೆಣ್ಣು-ಮಕ್ಕಳಾದಿಯಾಗಿ ಕೂಡಿ ಸಂಭ್ರಮಿಸುವ ಒಂಬತ್ತು ರಾತ್ರಿಗಳೇ ಈ ನವರಾತ್ರಿ. ಕೊಂಚ ವಿಸ್ತಾರವಾಗಿ ನೋಡುವ.

Advertisement

ಎಂಥಾ ಕಾಕತಾಳೀಯ ನೋಡಿ. ದೇಸಿಸ್ವರದ ಈ ಸಂಚಿಕೆಯ ಸಂಖ್ಯೆ 144. ಇಲ್ಲಿನ ಮೂರು ಸಂಖ್ಯೆಗಳನ್ನು ಕೂಡಿಸಿದರೆ 9 ಎಂದೇ ಆಗುತ್ತದೆ. ನವರಾತ್ರಿಯ ವಿಶೇಷ ಬರಹಗಳಿಗೆ ಇದಕ್ಕಿಂತಾ ಸೌಭಾಗ್ಯ ಉಂಟೆ? 2024 ಸಾಲಿನ ನವರಾತ್ರಿ ಹಬ್ಬಗಳ ಸಂಭ್ರಮವು ಅಕ್ಟೋಬರ್‌ ಮೂರರಿಂದ ಆರಂಭವಾಗಿ ಅಕ್ಟೊಬರ್‌ ಹನ್ನೊಂದರವರೆಗೆ ನಡೆಯಲಿದೆ. ನವರಾತ್ರಿಗಳಲ್ಲೇ ಎರಡು ಬಗೆ.

ಮೊದಲನೆಯದ್ದು ಚೈತ್ರ ನವರಾತ್ರಿ ಎನಿಸಿಕೊಂಡರೆ, ವರ್ಷದ ಎರಡನೆಯ ಭಾಗದಲ್ಲಿ ಬರುವುದೇ ಶರನ್ನವರಾತ್ರಿ ಅಥವಾ ಶರದ್‌ ನವರಾತ್ರಿ. ಕೆಲವೊಮ್ಮೆ ದೇಶದ ಇತರ ಭಾಗದಿಂದ ಬೇರೆ ಮಾಸಗಳಲ್ಲೂ ನವರಾತ್ರಿ ಹಬ್ಬ ಎಂದು ಕೇಳಿಬರುತ್ತದೆ. ಈ ನವರಾತ್ರಿ ಹಬ್ಬವೂ ಹೊಸ ವರ್ಷದಂತೆ ವರ್ಷದುದ್ದಕ್ಕೂ ಬೇರೆಬೇರೆ ಕಾಲದಲ್ಲಿ ನಡೆಯುತ್ತದೆ. ಆಷಾಢ ನವರಾತ್ರಿ, ಪುಷ್ಯ ನವರಾತ್ರಿ ಮತ್ತು ಮಾಘ ನವರಾತ್ರಿಗಳೂ ಚಾಲ್ತಿಯಲ್ಲಿದೆ.

ಭಾದ್ರಪದ ಮಾಸದ ಅಮಾವಾಸ್ಯೆ ಕಳೆದಂತೆ ನವಮಾಸದ ಚಂದ್ರ ಹೇಗೆ ವೃದ್ಧಿಸುತ್ತಾ ಬೆಳೆಯುತ್ತಾ ಸಾಗುವನೋ ಹಾಗೆಯೇ ಪಾಡ್ಯದಿಂದ ಆರಂಭವಾದ ಹಬ್ಬಗಳು ಕ್ರಮೇಣ ಉಜ್ವಲಿಸುತ್ತಾ ಸಾಗುತ್ತದೆ. ನವರಾತ್ರಿಗಳ ಪ್ರತೀ ದಿನವೂ ಒಂದೊಂದು ದೇವಿಯ ಸ್ವರೂಪಕ್ಕೆ ಮೀಸಲಿಟ್ಟು, ಆಯಾ ದೇವಿಯರ ಕುರಿತು ಪೂಜೆ ಪುನಸ್ಕಾರಗಳನ್ನು, ಆ ದಿನಕ್ಕೇ ಮೀಸಲಾದ ಬಣ್ಣದ ವಸ್ತ್ರವನ್ನು ತೊಡುವುದು ಮತ್ತು ನೈವೇದ್ಯಗಳನ್ನು ಮಾಡಲಾಗುತ್ತದೆ.

Advertisement

ನವರಾತ್ರಿಯ ಮೊದಲ ದಿನವಾದ ಪಾಡ್ಯವು “ಶೈಲಪುತ್ರಿ” ಮತ್ತು ಹಳದಿ ಬಣ್ಣ. ಮೊದಲಿಗೆ ದಕ್ಷರಾಜನ ಪುತ್ರಿಯಾಗಿ ಜನಿಸಿದ ಈ ದೇವಿಯು, ದಕ್ಷರಾಜನು ಮಾಡುವ ಯಜ್ಞದಲ್ಲಿ, ಶಿವನಿಗೆ ಆಹ್ವಾನ ಇಲ್ಲದ ಯಜ್ಞದಲ್ಲಿ, ಪಾಲ್ಗೊಂಡು ಅವಮಾನಿತಳಾಗಿ ಅಗ್ನಿಗೆ ಧುಮುಕಿ ಪ್ರಾಣ ಕಳೆದುಕೊಳ್ಳುತ್ತಾಳೆ. ಆನಂತರ ಪರ್ವತರಾಜನ ಪುತ್ರಿ ಪಾರ್ವತಿ ಆಗಿ ಜನಿಸಿಸುತ್ತಾಳೆ. ಈ ದಿನದ ನೈವೇದ್ಯ ವಿಶೇಷವು “ತುಪ್ಪ’. ಈಗಾಗಲೇ ಕೈಲಾಸದ ಒಡನಾಟ ಇದ್ದುದರಿಂದಲೇ ಇರಬೇಕು, ಶೈಲೇಶನ ಪುತ್ರಿಯಾಗಿ ಹುಟ್ಟಿದವಳು, ಚಿಕ್ಕಂದಿನ ಅವಸ್ಥೆಯಲ್ಲಿ, ನಂದಿಯನ್ನೇ ವಾಹನವಾಗಿ ಹೊಂದಿದ್ದಳು. ಬಾಲ್ಯದಲ್ಲಿನ ಊಟದಲ್ಲಿ ಉಪ್ಪು-ತುಪ್ಪದ ತಿನ್ನುವ ಸಂಭ್ರಮವನ್ನು ಸೂಚಿಸುವ “ತುಪ್ಪ’ ನೈವೇದ್ಯವಾಗಿದೆ.

ಎರಡನೆಯ ದಿನವಾದ ಬಿದಿಗೆಯಂದು “ಬ್ರಹ್ಮಚಾರಿಣಿ’ ಸ್ವರೂಪವನ್ನು ಆರಾಧಿಸಲಾಗುತ್ತದೆ. ಅಂದು “ಹಸುರು’ ಬಣ್ಣ ಶ್ರೇಷ್ಠ. ಯುವತಿ ಸ್ವರೂಪದ “ಬ್ರಹ್ಮಚಾರಿಣಿ’ ಅವತಾರದ ನೈವೇದ್ಯವು “ಹಣ್ಣುಗಳು ಮತ್ತು ಸಕ್ಕರೆ’ ಎನ್ನಲಾಗಿದೆ. ಶಿವನನ್ನು ಒಲಿಸಿಕೊಳ್ಳುವ ಹಂತದಲ್ಲಿ, ತಾನೂ ಅವನಂತೆಯೇ ಯಾವ ರಾಜಭೋಗಗಳನ್ನೂ ಹೊಂದದೇ ಇದ್ದಳು ಎಂಬುದನ್ನು ಸೂಚಿಸುತ್ತದೆ. ಎರಡೇ ಕೈಗಳನ್ನು ಹೊತ್ತು, ರುದ್ರಾಕ್ಷಿಮಾಲೆ ಧರಿಸಿದ, ಯಾವುದೇ ವಾಹನವನ್ನೂ ಹೊಂದದ “ಬ್ರಹ್ಮಚಾರಿಣಿ’ ಅವತಾರ. ತಪಸ್ವಿನಿಯ ಜೀವನ ಸೂಚಿಸುವ ಹಣ್ಣು-ಹಂಪಲು ನೈವೇದ್ಯವಾಗಿದೆ.

ಮೂರನೆಯ ದಿನವಾದ ತೃತೀಯದ ಅವತಾರವು “ಚಂದ್ರಘಂಟಾ ದೇವಿ’. ಬಣ್ಣದ ವಿಶೇಷ ಬೂದು. ಈಕೆಯ ತಲೆಯ ಮೇಲೆ ಗಂಟೆಯಾಕಾರದ ಅರ್ಧಚಂದ್ರಾಕಾರವನ್ನು ಇಟ್ಟುಕೊಂಡಿರುವುದರಿಂದ ಈ ಹೆಸರು ಬಂದಿದೆ. ಇಂದಿನ ನೈವೇದ್ಯ ವಿಶೇಷವು “ಪಾಯಸ’. ಈಶನ ಭಾಗವಾದ ಮೇಲೆ ಶಕ್ತಿಸ್ವರೂಪಿಣಿಯೇ ಆದವಳು, ಶಿವನ ಚಂದ್ರನನ್ನೂ ಅಲಂಕರಿಸಿಕೊಂಡಳು ಎಂಬುದೇ “ಚಂದ್ರಘಂಟಾ’ ದೇವಿಯ ಸ್ವರೂಪ. ಹತ್ತರಲ್ಲಿ ಒಂಬತ್ತು ಕೈಗಳಲ್ಲಿ ಆಯುಧಗಳನ್ನು ಹೊತ್ತ ಶಕ್ತಿಸ್ವರೂಪಿಣಿಗೆ “ಹುಲಿ’ಯು ವಾಹನವಾಗಿದೆ.

ನಾಲ್ಕನೆಯ ದಿನವಾದ ಚತುರ್ಥಿಯ ದೇವಿ “ಕೂಷ್ಮಂಡ ದೇವಿ’. ಬಣ್ಣದ ವಿಶೇಷ ಕಿತ್ತಳೆ. ಒಂದರ್ಥದ ಪ್ರಕಾರ ದೇವಿಯು ತನ್ನ ಮಸುಕಾದ ನಗುವಿನಿಂದ ಈ ವಿಶ್ವವನ್ನ ಆಕೆ ಸೃಷ್ಟಿ ಮಾಡಿದ್ದು ಎನ್ನಲಾಗುತ್ತದೆ. ನೈವೇದ್ಯದ ವಿಶೇಷವು “ಕಜ್ಜಾಯ’. ಸಿಂಹಸ ಮೇಲೆ ಆರೂಢಳಾದ ದೇವಿಯು ಸೃಷ್ಟಿಯ ಒಳಿತುಗಳನ್ನು ಪೊರೆದು, ಕೆಡುಕುಗಳನ್ನು ತೊಡೆದು ಹಾಕಲು ಸನ್ನದ್ಧಳಾಗಿದ್ದಾಳೆ. ಅಷ್ಟ ದಿಕ್ಸೂಚಕವಾಗಿ ಎಂಟು ಕೈಗಳನ್ನು ಹೊಂದಿದ್ದಳು ಎನ್ನಬಹುದು. ಪೊರೆವ ದೃಷ್ಟಿಯಲ್ಲಿ ಜೇನು ಮತ್ತು ನೀರನ್ನು ಹೊಂದಿದ್ದಳು ಎನ್ನಬಹುದೇ? ನೈವೇದ್ಯವಾದ ಕಜ್ಜಾಯವು ಗಟ್ಟಿಯೂ ಹೌದು, ಸಿಹಿಯೂ ಹೌದು.

ಪಂಚಮಿಯ ದೇವತೆಯು “ಸ್ಕಂದ ಮಾತೆ’. ಬಾಲಕನಾದ ಸ್ಕಂದನನ್ನು ಹೊತ್ತು ಕೂತಿರುವ ದೇವಿಯ ಆರಾಧನೆಯ ಬಣ್ಣದ ವಿಶೇಷ “ಬಿಳಿ’ಯಾಗಿದ್ದು, ನೈವೇದ್ಯದ ಸ್ವರೂಪವು “ಬಾಳೆಹಣ್ಣು. ಪರಮೇಶ್ವರನನ್ನು ಮದುವೆಯಾಗುವ ಹಿನ್ನೆಲೆಯ ಒಂದು ಕಾರಣವೇ “ಕುಮಾರ ಸಂಭವ’ ಮತ್ತು ಅದರಿಂದಾಗಿ ತಾರಕನವಧೆ. ಅಂಥಾ ಸ್ಕಂದನನ್ನು ತಾಯಿಯಾದ ದೇವಿಯು ತೊಡೆಯ ಮೇಲೆ ಕೂರಿಸಿಕೊಂಡ ಅವತಾರವೇ “ಸ್ಕಂದಮಾತ’. ಪುತ್ರನನ್ನೇ ಹೊತ್ತ ಮೇಲೆ ಬೇರಾವ ಅಲಂಕಾರ ಹೊರಬೇಕಿದೆ ಒಬ್ಬ ತಾಯಿಗೆ? ಈ ಅವತಾರದಲ್ಲೂ ಸಿಂಹವೇ ವಾಹನ.

ಬಾಳೆಹಣ್ಣು ಎಂಬುದು ಸುಲಭವಾಗಿ ತಿನ್ನಬಲ್ಲ ಹಣ್ಣು, ಮಕ್ಕಳಿಗೂ ಪ್ರಿಯ ಅಲ್ಲವೇ? ಷಷ್ಠಿಯ ದೇವಿಯು “ಕಾತ್ಯಾಯಿನಿ ದೇವಿ’. ದುಷ್ಟ ಶಿಕ್ಷಣಕ್ಕೆ ತಳೆದ ಅವತಾರದ ಬಣ್ಣವು ಇಂಗಿತಕ್ಕೆ ತಕ್ಕಂತೆ “ಕೆಂಪು’. ನೈವೇದ್ಯದ ವಿಶೇಷವು “ಜೇನುತುಪ್ಪ’. ಕಾತ್ಯಾಯಿನಿ ದೇವಿಯು ಶಕ್ತಿಯ ಸಂಕೇತ. ನಾಲ್ಕೂ ಕೈಗಳಲ್ಲಿ ಆಯುಧಗಳನ್ನೇ ಹೊಂದಿರುವ ಈ ಶಕ್ತಿದೇವತೆ ರೋಷಯುಕ್ತವಾದ ಸಿಂಹದ ಮೇಲೆ ಕೂತಿದ್ದಾಳೆ. ನೈವೇದ್ಯರೂಪದ ಅತ್ಯಂತ ಶ್ರೇಷ್ಠವಾದ ಪದಾರ್ಥವೆಂದರೆ ಜೇನುತುಪ್ಪ. ಶಕ್ತಿದೇವತೆಗೆ ಶಕ್ತಿ ವರ್ಧಕ ಆಹಾರವಾದ ಜೇನುತುಪ್ಪವನ್ನು ನೈವೇದ್ಯವನ್ನಾಗಿ ಅರ್ಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಪ್ತಮಿಯ ದೇವಿಯು ಉಗ್ರರೂಪಿಯಾದ ಕಪ್ಪು ಬಣ್ಣದ ದೇವಿಯು “ಕಾಳರಾತ್ರಿ’ ಅಥವಾ “ಕಾಲರಾತ್ರಿ’. ಸಪ್ತಮಿಯಿಂದ ಹಿಡಿದು ಮೂರು ದಿನಗಳ ಕಾಲ ತ್ರಿದೇವಿ ದುರ್ಗಾಪೂಜೆ ಮಾಡುವ ಪದ್ಧತಿ ಹಲವೆಡೆ ಇದೆ. ಆ ಮೂರು ದೇವಿಯರು “ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ’. ನೈವೇದ್ಯ ವಿಶೇಷವು “ಬೆಲ್ಲ’, ಬಣ್ಣದ ವಿಶೇಷವು “ನೀಲಿ’.. ರಕ್ತ ಕೆಂಪಿನ ಮೂರು ಕಣ್ಣುಗಳನ್ನು ಉಳ್ಳ ದೇವತೆಯು, ರುಂಡಮಾಲಿನಿಯೇ ಆಗಿದ್ದಾಳೆ. ಒಂದೊಮ್ಮೆ ಶಾಂತರೂಪಿಯಾಗಿ ಹುಲಿಯ ಮೇಲೆ ಕೂತವಳು, ಈಗ ರುದ್ರಸ್ವರೂಪದಲ್ಲಿ ಕತ್ತೆಯನ್ನು ವಾಹನವನ್ನಾಗಿ ಇರಿಸಿಕೊಂಡಿದ್ದಾಳೆ ಎಂಬುದೇ ಅಚ್ಚರಿ.

ಯುದ್ಧಕ್ಕೆ ಸನ್ನದ್ಧಳಾದ ದೇವಿಗೆ ಎಂತಹ ಆಹಾರವನ್ನಾದರೂ ತಿಂದು, ಹೆಚ್ಚುಕಾಲ ನೀರು ಕುಡಿಯದೇ ಇರಬಲ್ಲ ಕತ್ತೆಯನ್ನು ವಾಹನವಾಗಿ ಹೊಂದಿರುವ ದೇವಿಯ ಆಲೋಚನಾಶಕ್ತಿಯನ್ನು ಒಪ್ಪಲೇಬೇಕಲ್ಲವೇ? ಬಿಸಿಲಿನ ಅಥವಾ ಬಿಸಿಯ ತಾಪ ತಡೆಯಬಲ್ಲ, ಇಂತಹ ಕಡಿದಾದ ಪ್ರದೇಶದಲ್ಲೋ ಅಂಚರಿಸಬಲ್ಲ ಪ್ರಾಣಿ ಎಂದರೆ ಕತ್ತೆ. ಇಂಥಾ ಪ್ರಾಣಿಯನ್ನು ಕ್ಷುಲ್ಲಕವಾಗಿ ಕಾಣಬಾರದು. ದುರ್ಗಾಷ್ಟಮಿಯ ವಿಶೇಷವೇ “ಮಹಾಗೌರಿ’. ಶಿವನನ್ನು ಕುರಿತು ತಪವನ್ನಾಚರಿಸಿದ ದೇವಿಯ ದಿನ ಎಂದು ಕೆಲವೆಡೆ ಹೇಳಲಾಗಿದೆ.

ತೆಂಗಿನಕಾಯಿಯು ನೈವೇದ್ಯ ವಿಶೇಷವಾಗಿದ್ದು, ಬಣ್ಣದ ವಿಶೇಷವು ಗುಲಾಬಿ ಬಣ್ಣವಾಗಿದೆ. ಗುಲಾಬಿ ಬಣ್ಣ ಎಂಬುದು ಹೆಣ್ಣಿನ ಸಂಕೇತ. ಸ್ತ್ರೀವರ್ಗದ ಪ್ರಿಯದೇವತೆಯಾಗಿ, ಹೆಂಗಳ ರಕ್ಷಣೆಗಾಗಿ ಅವತರಿಸಿದ ದೇವಿಯು, ಭಕ್ತೆಯರಿಗಾಗಿ ಅಭಯಹಸ್ತವನ್ನೇ ತೋರಿದ್ದಾಳೆ. ತೆಂಗಿನಕಾಯಿಯ ಪ್ರಮುಖ ವಿಶೇಷತೆ ಎಂದರೆ ಹೊರಗೆ ಕಠಿನವಾಗಿ ಕಂಡರೂ ಒಳಗೆ ಕೊಬ್ಬರಿಯಂತೆ ಮೃದು, ಎಳನೀರಿನಂತೆ ಸಿಹಿ. ನವರಾತ್ರಿಯ ಕೊನೆಯ ದಿನವಾದ ನವಮಿಯು “ಸಿದ್ಧಿಧಾತ್ರಿ’ ಆರಾಧನೆಗೆ ಮೀಸಲು. “ನೇರಳೆ’ಯ ಬಣ್ಣವು ವಿಶೇಷವಾಗಿದ್ದು, ನೈವೇದ್ಯ ವಿಶೇಷವೂ “ಎಳ್ಳು’ ಎನ್ನಲಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ದೇವಿಯೇ ಸಿದ್ಧಿಧಾತ್ರಿ.

ದುರ್ಗಾದೇವಿಯ ಉತ್ಕೃಷ್ಟ ಶಕ್ತಿ ರೂಪವೇ ಈ ಸಿದ್ಧಿಧಾತ್ರಿ. ಕಮಲದ ಮೇಲೆ ಆರೂಢಳಾದ ಈ ಧಾತ್ರಿ ಏನನ್ನೇ ಬೇಡಿದರೂ ಸಿದ್ಧಿಸುತ್ತಾಳೆ. ನವರಾತ್ರಿ ಹಬ್ಬದ ವೈಭವವು ಹೆಂಗೆಳೆಯರಿಗೆ ಮಾತ್ರವೇ? ಎಂಬ ಪ್ರಶ್ನೆ ಏಳ್ಳೋದು ಸಹಜ. ಇಲ್ಲಾ ಬಿಡಿ, ನವರಾತ್ರಿ ಹಬ್ಬದ ವಿಶೇಷವೇ ಭಿನ್ನ. ಒಂಬತ್ತು ಪ್ಲಸ್‌ ಒಂದು ದಿನವು ಎಲ್ಲ ವರ್ಗದವರಿಗೂ ಸಲ್ಲುವ ಹಬ್ಬಗಳ ಸಾಲು. ಗ್ರಂಥಪೂಜೆಯ ಹಬ್ಬವು ಧಾರ್ಮಿಕ ಮನೋಭಾವದವರ ಸಂಭ್ರಮ. ವ್ಯಾಸಪೀಠದ ಮೇಲೆ ಗ್ರಂಥಗಳನ್ನು ಇತ್ತು ಸರಸ್ವತಿಯನ್ನು ಪೂಜಿಸುತ್ತಾರೆ. ಮರುದಿನ ಮಕ್ಕಳು ತಮ್ಮ ಪುಸ್ತಕಗಳನ್ನು ಇರಿಸಿ ಪೂಜಿಸುತ್ತಾರೆ. ಸರಸ್ವತಿಯ ಮುಂದೆ ಪುಸ್ತಕ ಇರಿಸಿರುವುದರಿಂದ ಆ ದಿನ ಓದುವ ಹಾಗಿಲ್ಲ ಎಂದು ಓದುವುದರಿಂದ ತಪ್ಪಿಸಿಕೊಳ್ಳುವುದನ್ನು ಮಾಡುತ್ತಿದ್ದೆವು.

ಇನ್ನು ನವಮಿಯ ವಿಶೇಷ ಎಂದರೆ ಆಯುಧಪೂಜೆ. ಗಂಡುಮಕ್ಕಳ ಸಂಭ್ರಮ ಹೇಳತೀರದು. ತಮ್ಮ ವಾಹನಗಳನ್ನು ತೊಳೆದು, ಅಲಂಕರಿಸಿ, ಪೂಜೆ ಮಾಡುವ ಸಂಭ್ರಮ ಹೇಳತೀರದು. ಅಂದು ಒಂದು ಸಣ್ಣ ಸೂð ಡ್ರೆ„ವರ್‌ನಿಂದ ಹಿಡಿದು ದೊಡ್ಡದೊಡ್ಡ ಉಪಕರಣಗಳ ಪೂಜೆಯೂ ನಡೆಯುತ್ತದೆ. ಬಸ್‌, ಲಾರಿಯಂತಾ ಹಿರಿದಾದ ವಾಹನಗಳೂ ನೀರಿನ ಭಾಗ್ಯ ಕಂಡು ಆಲಂಕೃತಗೊಂಡು ನಿಲ್ಲುತ್ತದೆ.

ಇಡೀ ವರ್ಷದಲ್ಲಿ ಆ ದಿನದಂದು ಆಗುವಷ್ಟು ಸಿಹಿತಿಂಡಿಗಳ ವ್ಯಾಪಾರ ಮತ್ತು ಹಂಚುವಿಕೆಯ ಭರಾಟೆ ಮತ್ತೆಂದೂ ಆಗಲಾರದು. ಇನ್ನು ವಿಜಯದಶಮಿ ಎಂದರೆ ದಸರಾ ಹಬ್ಬದ ಮುಕುಟಪ್ರಾಯವಾಗಿದೆ. ಮೈಸೂರು ವೈಭವ ಕೇವಲ ನಾಡಿನ ಜನತೆಗೆ ಹಬ್ಬವಾಗಿರದೇ ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಸಡಗರದಿಂದ ಆಚರಿಸಿ, ಸಂಭ್ರಮದಿಂದ ಆಚರಿಸಿ, ನಮ್ಮ ನಾಡ ಹಬ್ಬ ಎಂಬ ಹೆಮ್ಮೆಯಿಂದ ಆಚರಿಸಿ.

*ಶ್ರೀನಾಥ್‌ ಭಲ್ಲೇ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next