Advertisement

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಅ.3-12: ನವರಾತ್ರಿ ಮಹೋತ್ಸವ

12:51 AM Oct 01, 2024 | Team Udayavani |

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗ ದರ್ಶನದಲ್ಲಿ ಅ. 3ರಿಂದ 12ರ ತನಕ ದಿನಂಪ್ರತಿ ಭಕ್ತರ ಸೇವಾರೂಪದ ಜೋಡಿ ಚಂಡಿಕಾಯಾಗ, ಸಹಸ್ರ ನಾಮಾರ್ಚನೆ, ಕಲ್ಫೋಕ್ತ ಪೂಜೆ, ರಂಗಪೂಜೆ, ದುರ್ಗಾನಮಸ್ಕಾರ ಪೂಜೆ, ದೀಪಾರಾಧನೆ ಹಾಗೂ ನಿರಂ ತರ ಅನ್ನಸಂತರ್ಪಣೆಯೊಂದಿಗೆ ಶರನ್ನವರಾತ್ರಿ ನಡೆಯಲಿದೆ.

Advertisement

ಅ. 2ರ ಸಂಜೆಯಿಂದ ವಾಸ್ತು ರಾಕ್ಷೋಘ್ನಾದಿ ಪ್ರಕ್ರಿಯೆಗಳು, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಮಂಟಪ ಸಂಸ್ಕಾರಾದಿ ಪ್ರಕ್ರಿಯೆಗಳು ನೆರವೇರಲಿವೆ. ಅ. 3ರ ಬೆಳಗ್ಗೆ 6.30ರಿಂದ ಕದಿರು ಕಟ್ಟುವಿಕೆ, ಆದ್ಯಗಣಪತಿ ಯಾಗದೊಂದಿಗೆ ನವರಾತ್ರಿ ಆರಂಭಗೊಳ್ಳಲಿದೆ.

ಅ. 5ರಂದು ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮೀ ಸಾನ್ನಿಧ್ಯದಲ್ಲಿ ಲಕ್ಷ್ಮೀ ಸಹಸ್ರನಾಮ ಪಾಯಸ ಹೋಮ, ಅ. 7ರ ಶ್ರೀ ಲಲಿತಾ ಪಂಚಮಿಯಂದು ಜೋಡಿ ಶ್ರೀ ಲಲಿತಾ ಸಹಸ್ರ ಕದಳೀ ಯಾಗ, 11ರಂದು ಶ್ರೀ ಗಾಯತ್ರಿ ಮಂತ್ರ ಮಹಾಯಾಗ, 12ರ ವಿಜಯ ದಶಮಿಯಂದು ಕ್ಷೇತ್ರದ ವತಿಯಿಂದ ಶ್ರೀ ದುರ್ಗಾ ಆದಿಶಕ್ತಿ ಸಂಪ್ರೀತಯೇ ತ್ರಿಲೋಕೇಶ್ವರಿ ಮಹಾಯಾಗ, ಆರಾಧನಾ ರಂಗಪೂಜೆ ಸಹಿತ ಬಲಿ ಉತ್ಸವ ಜರಗಲಿದೆ.

ಅ. 9ರಿಂದ 11ರ ವರೆಗೆ ಅಕ್ಷರಾಭ್ಯಾಸ, ತುಲಾಭಾರ ಸೇವೆ ನಡೆಯಲಿದೆ. ಕ್ಷೇತ್ರದ ನವಶಕ್ತಿ ವೇದಿಕೆ ಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ತಂಡ ಗಳಿಂದ ಭಜನೆ ಸಂಕೀರ್ತನೆ, ಕುಣಿತ ಭಜನೆ, ಲಲಿತಾ ಸಹಸ್ರನಾಮ ಪಠನೆ, ಲಕ್ಷ್ಮೀ ಶೋಭಾನೆ ನೆರವೇರಲಿದೆ. ಅಕ್ಷರಾಭ್ಯಾಸ, ತುಲಾಭಾರ ಸೇವೆ, ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ನೀಡಲಿಚ್ಛಿಸುವವರು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ಅವರನ್ನು ಸಂಪರ್ಕಿಸಲು ಕ್ಷೇತ್ರದ ಪ್ರಕಟನೆ ತಿಳಿಸಿದೆ.

ಅತ್ತಿರಸ ಮಹಾ ಪ್ರಸಾದ
ದೇಶ ವಿದೇಶಗಳ ಭಕ್ತರಿಂದ ವಿಶೇಷ ಪ್ರಸಾದಕ್ಕಾಗಿ ಬೇಡಿಕೆ ಬಂದ ನೆಲೆಯಲ್ಲಿ ಈ ಬಾರಿಯ ನವರಾತ್ರಿಯಿಂದ ಕ್ಷೇತ್ರದ ವಿಶೇಷ ಪ್ರಸಾದವಾಗಿ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ರಾಜರಾಜೇಶ್ವರಿಗೆ ಸಮರ್ಪಿಸುವ ವಿಶೇಷ ಸಿಹಿ ನೈವೇದ್ಯಗಳಲ್ಲಿ ಅತಿ ಶ್ರೇಷ್ಠವೆನಿಸಿದ “ಅತ್ತಿರಸ ಮಹಾ ಪ್ರಸಾದ’ ಭಕ್ತರಿಗೆ ಕ್ಷೇತ್ರದಲ್ಲಿ ನಿತ್ಯವೂ ಲಭ್ಯವಿರಲಿದೆ. ಇದಕ್ಕೆ ಪ್ರಥಮ ನವರಾತ್ರಿಯಂದು ಶ್ರೀ ರಮಾನಂದ ಗುರೂಜಿಯವರು ಚಾಲನೆ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next