Advertisement
ನಮ್ಮ ಪರಿಸರ ಸಂರಕ್ಷಣೆ ವೈಖರಿ ಹೇಗಿದೆಯೆಂದರೆ ಒಂದು ಮರವನ್ನು ಕುಡಿದು ತಯಾರಿಸಲಾದ ಕಾಗದವನ್ನು ಬಳಸಿ, ಅದರ ಮೇಲೆ ದಪ್ಪಕ್ಷರಗಳಲ್ಲಿ ಮರಬೆಳೆಸಿ-ಕಾಡು ಉಳಿಸಿ, ಕಾಡು ಬೆಳೆಸಿ-ನಾಡು ಉಳಿಸಿ ಎಂಬ ಘೋಷವಾಕ್ಯಗಳೊಂದಿಗೆ ಬೀದಿ ಗಳಲ್ಲಿ ಸಂಚರಿಸುತ್ತೇವೆ. ಪರಿಸರದಲ್ಲಿ ಉಂಟಾಗುವ ಬದಲಾವಣೆಗಳೇ ವಿಕೋಪಗಳು. ಇದನ್ನು ನಾವು ಎರಡು ರೀತಿಯಲ್ಲಿ ನೋಡಬೇಕಾಗುತ್ತದೆ. ಒಂದು ನೈಸರ್ಗಿಕ ಬದಲಾ ವಣೆ. ಇನ್ನೊಂದು ಮಾನವನ ಚಟುವಟಿಕೆಗಳಿಂದ ಪರಿಸರದಲ್ಲಿ ಉಂಟಾಗುವ ಏರುಪೇರುಗಳಿಂದ ಉಂಟಾಗುವುದು. ಈ ಬದಲಾವಣೆಯಿಂದ
ನೈಸರ್ಗಿಕ ಸಂಪನ್ಮೂಲಗಳಾದ ವಾಯು, ನೀರು, ಮಣ್ಣಿನಲ್ಲಿರುವ ವಿವಿಧ ಘಟಕಗಳ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಇದನ್ನೇ ನಾವು ಮಾಲಿನ್ಯವೆಂದು ಹೇಳುತ್ತೇವೆ. ಇದರ ಗಂಭೀರ ಪರಿಣಾಮವೇ ವಿಕೋಪ. ನೈಸರ್ಗಿಕ ಮಾಲಿನ್ಯ (ಜ್ವಾಲಾಮುಖೀ, ಸುನಾಮಿ, ಬಿರುಗಾಳಿ)ಕ್ಕಿಂತ ಮಾನವನ ಚಟುವಟಿಕೆ ಯಿಂದ ಉಂಟಾಗುವ ಮಾಲಿನ್ಯ ಭಯಂಕರವಾ ದದ್ದು. ನೈಸರ್ಗಿಕ ಮಾಲಿನ್ಯದ ಪರಿಣಾಮ ಹಲವು ಶತಮಾನಗಳ ಹಿಂದೆ ಒಂದು ಬಲವಾದ ಬಿರುಗಾಳಿ ಯಿಂದ ಮರಳು ಮೇಲೆದ್ದು ಆ ವಾತಾವರಣದಲ್ಲಿ ಜೀವಿಸುತ್ತಿದ್ದ ಪ್ರಾಣಿಗಳು (ಡೈನೋಸರ್‌ಗಳು) ಉಸಿರಾಡದಷ್ಟು ಮಾಲಿನ್ಯವಾಗಿ ಅವುಗಳ ಸಂತತಿಯೇ ನಾಶವಾಗಿ ಹೋಯಿತು. ಇದು ನೈಸರ್ಗಿಕ ಮಾಲಿನ್ಯದಿಂದ ಉಂಟಾದ ದುರಂತ. ಆದರೆ ಮಾನವನ ಚಟುವಟಿಕೆಗಳಿಂದ ಉಂಟಾಗುತ್ತಿ ರುವ ಮಾಲಿನ್ಯದಿಂದ ಪ್ರತಿವರ್ಷ ಒಂದಲ್ಲ ಒಂದು ಪ್ರದೇಶದಲ್ಲಿ ಒಂದಲ್ಲ ಒಂದು ರೀತಿಯ ವಿಕೋಪಗಳು ಘಟಿಸುತ್ತಲೇ ಬಂದಿವೆ. ಆದರೆ ಇದನ್ನು ಮಾತ್ರ ನಾವು ನೈಸರ್ಗಿಕ ಅಥವಾ ಪ್ರಕೃತಿ ವಿಕೋಪವೆಂದು ಹಣೆಪಟ್ಟಿ ಹಚ್ಚಿ ನಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿದ್ದೇವೆ.
ಸುಮಾರು ಒಂದು ಸಾವಿರ ತಳಿಗಳಿವೆ. ನಾವು ಬೆಳೆಯುವುದು ಅತಿಮುಖ್ಯವಾಗಿ ಐದಾರು ಮಾತ್ರ. ಉಳಿದವೆಲ್ಲಾ ಕಾಡಿನಲ್ಲಿ ತಾವಾಗಿಯೇ ಬೆಳೆದು, ಪುನರುತ್ಪಾದನೆಯಾಗುತ್ತಿವೆ. ಈಗಾಗಲೇ ಕಾಲುಭಾಗ ಕ್ಕಿಂತ ಹೆಚ್ಚಿನ ಅರಣ್ಯವನ್ನು ನಾವು ನಾಶ ಮಾಡಿದ್ದೇವೆ. ಅಂದರೆ ಸುಮಾರು ಒಂದು ಲಕ್ಷ ಕಿಲೋಮೀಟರ್ ಕಾಡು ನಾಶ ಮಾಡಿದ್ದೇವೆ. ಒಂದು ಗಂಟೆಗೆ ಒಂದು ಸಸ್ಯ ಸಂಪೂರ್ಣವಾಗಿ ನಶಿಸಿ ಹೋಗುತ್ತಿದೆ. ಅರಣ್ಯ ನಾಶಕ್ಕೆ ಕೇವಲ ನಗರೀಕರಣವನ್ನು ಮಾತ್ರ ಕಾರಣವಾಗಿ ತೋರಿಸುತ್ತಾರೆ ಹೆಚ್ಚಿನ ಮಂದಿ. ಆದರೆ ಹಣ ನೀಡುವ ಬೆಳೆಗಳು (ಕಾಫಿ, ಟೀ, ಸಾಂಬಾರು ಪದಾರ್ಥಗಳು ಇತ್ಯಾದಿ) ಫಲಪುಷ್ಪ³ಗಳು, ತೋಟಗಾರಿಕೆಗೆ ಹೆಚ್ಚಿನ ಒತ್ತುಕೊಟ್ಟು ವಾಸನೆ, ರುಚಿಗೆ ಹೆಚ್ಚಿನ ಆದ್ಯತೆ ನೀಡಿರುವುದಲ್ಲದೇ ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳುವುದರ ಕಡೆಗೆ ಒತ್ತು ನೀಡಲಾಗುತ್ತಿದೆ. ಹೌದು, ಜನಸಂಖ್ಯಾ ಸ್ಫೋಟದ ಪರಿಣಾಮ ಆಹಾರಕ್ಕೆ ಒತ್ತು ನೀಡುವ ಅನಿವಾರ್ಯತೆ ಯಿಂದಾಗಿ ಸಹಜವಾಗಿಯೇ ನಮ್ಮ ಆದ್ಯತೆ ಹೊಸ ಬಗೆಯ ತಳಿಗಳನ್ನು ತಂದು ಹೆಚ್ಚಿನ ಇಳುವರಿ ತೆಗೆಯುವುದರ ಕಡೆಗೆ ನೆಟ್ಟಿದೆ. ಹೆಚ್ಚಿನ ರಾಸಾಯನಿಕ ಗಳ ಬಳಕೆ ಒಂದು ಕಡೆ ಇಳುವರಿಯನ್ನು ಕೊಡುತ್ತಿದೆ. ಆದರೆ ನೀರಿನ, ಪರಿಸರ ಮಾಲಿನ್ಯಕ್ಕೆ ಕಾರಣ ವಾಗುತ್ತಿದೆ. ಹೀಗಾಗಿ ಪ್ರಕೃತಿ ಗ್ರಾಹಕೀಕರಣವಾಗಿದೆ. ಇದರಿಂದ ಏನಾಗಿದೆ? ದೇವರ ಕಾಡುಗಳಲ್ಲಿ ಕೂಡ ನಾವು ಕೃತಕ ವಸ್ತುಗಳನ್ನು, ಪ್ಲಾಸ್ಟಿಕ್ ಚೀಲಗಳು (ಮೊನ್ನೆಯ ಪ್ರವಾಹದ ನಂತರದ ದೃಶ್ಯಗಳನ್ನು ನೆನಸಿ ಕೊಂಡರೆ ಅರ್ಥವಾಗಬಹುದು) ಕಾಣುತ್ತಿದ್ದೇವೆ.
Related Articles
Advertisement
ತಿರುವಾಂಕೂರಿನ ಮಹಾರಾಜರು ಕಾಫಿ ಮತ್ತು ಟೀ ಎಸ್ಟೇಟ್‌ಗಳಾಗಿ ಪರಿವರ್ತಿಸಲು ಎಕರೆಗೆ ಒಂದು ರೂಪಾಯಿಯಂತೆ ದಟ್ಟ ಅರಣ್ಯವನ್ನು ವಿದೇಶಿಯರಿಗೆ ಕೊಟ್ಟು ಔದ್ಯಮೀಕರಣಕ್ಕೆ ಒತ್ತುಕೊಟ್ಟರು. ಹತ್ತು ವರ್ಷಗಳ ನಂತರ ಅದೇ ಮಹಾರಾಜರು ಎಕರೆಗೆ ಹತ್ತು ರೂಪಾಯಿಯಂತೆ ಅರಣ್ಯವನ್ನು ಮಾರಾಟ ಮಾಡಿದರು. 1830ರಲ್ಲಿ ಕಾಫಿ ಮತ್ತು ಟೀ ದೊಡ್ಡ ಉದ್ಯಮವಾಗಿ ಹೊರಹೊಮ್ಮಿತು. ದೊಡ್ಡ ಮರಗಳನ್ನು ಕಡಿದು ಸಣ್ಣ ಮರಗಳನ್ನು ಮಾತ್ರ ಬೆಳೆಸಿ ವೈವಿಧ್ಯತೆ ಯನ್ನು ನಾಶ ಮಾಡಲಾಯಿತು. 1874ರಲ್ಲಿ 17,900 ಹೆಕ್ಟೇರ್ ದಟ್ಟ ಅರಣ್ಯವನ್ನು ಕಡಿದು ನೀಲಗಿರಿ ಬೆಳೆಸಲಾಯಿತು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸರ್ಕಾರವೇ ಇಂಡಿಯನ್ ಪ್ಲೆçವುಡ್ ಕಂಪನಿಯನ್ನು 1946ರಲ್ಲಿ ಸ್ಥಾಪಿಸಿತು. ಅಲ್ಲಿ 36 ಬಗೆಯ ವಿವಿಧ ಮರಮಟ್ಟು ನೀಡುವ ದಟ್ಟ ಅರಣ್ಯವಿತ್ತು. 1946ರಿಂದ 84ರವರೆಗೆ ಸುಮಾರು 1,05,000 ಹೆಕ್ಟೆರ್ ಅರಣ್ಯವನ್ನು (ಶೇ 13%ರಷ್ಟು) ಅರಣ್ಯೇತರ ಚಟುವಟಿಕೆಗಳಿಗೆ ನೀಡಲಾಯಿತು. ಪರಿಸರದಲ್ಲಿನ ವೈವಿಧ್ಯತೆಯನ್ನು ಹೇಗೆಲ್ಲಾ ನಾಶ ಮಾಡಲಾಯಿತು ಅಂತ ಇದರಿಂದ ತಿಳಿಯಬಹುದು.
ನಗರೀಕರಣದಿಂದ ಉಂಟಾಗುತ್ತಿರುವ ಅಡ್ಡ ಪರಿಣಾಮಗಳನ್ನು ಸ್ವಲ್ಪ ಗಮನಿಸಿ. ಈ ದಿನ ಕೇರಳ, ಕೊಡಗು ಮಾತ್ರವಲ್ಲ ಮಲೆನಾಡಿನಲ್ಲೂ ಕೂಡ ಸಹಜ ಸೌಂದರ್ಯವಾದ ಪರಿಸರವನ್ನು ನಾಶ ಮಾಡಿ ಅಲ್ಲಿ ಹೋಮ್‌ಸ್ಟೇಗಳು, ರೇಸಾರ್ಟ್‌ಗಳನ್ನು ಕಟ್ಟಿ ಪ್ರಕೃತಿಯ ಮಧ್ಯೆ ಕಾಲಕಳೆಯುತ್ತಿದ್ದೇವೆ. ನೈಸರ್ಗಿಕ ಸಂಪತ್ತನ್ನು ನಾಶ ಮಾಡಿ ಮಾನವ ನಿರ್ಮಿತ ಕೃತಕ ಅರಣ್ಯ, ಮರಗಿಡಗಳು, ಜಲಪಾತಗಳೇ ಪ್ರವಾಸ್ಯೋದಮ ವಾಗಿವೆ. ಇದನ್ನೆ ನೋಡಿ ಆನಂದಿಸುವ ಕಾಲಘಟ್ಟದಲ್ಲಿ ದಟ್ಟ ಅರಣ್ಯಗಳು, ದೇವರ ಕಾಡಗಳು, ಪಶ್ಚಿಮ ಘಟ್ಟಗಳು, ಕರಾವಳಿ ತೀರಗಳು ತಮ್ಮ ಇರುವಿಕೆಯನ್ನು ಕಳೆದುಕೊಳ್ಳುವ ಅಪಾಯಕ್ಕೆ ತುತ್ತಾಗಿವೆ.
ಅರಣ್ಯ ಮಾತ್ರವಲ್ಲ ಕರಾವಳಿಯ ಜೀವವೈವಿಧ್ಯತೆ, ಸಮುದ್ರ ತೀರ ಬಯಲು ಸೀಮೆಯ ಕೆರೆಕಟ್ಟೆಗಳು, ಬೆಟ್ಟಗುಡ್ಡಗಳು, ಕುರುಚಲುಕಾಡುಗಳು ಹೀಗೆ ಪ್ರಾಕೃತಿಕವಾಗಿ ನಮ್ಮ ಸಂಪತ್ತನ್ನೆಲ್ಲಾ ನಮ್ಮ ದುರಾಸೆಗೆ ಬಲಿಕೊಟ್ಟು ಮನೆಯ ಮುಂದೆ ಎರಡು ಸಣ್ಣಗಿಡಗಳು, ಬಡಾವಣೆಯ ಮಧ್ಯೆಯೊಂದು, ವಾಯು ವಿಹಾರಕ್ಕೊಂದು ಪಾರ್ಕ್ ಮಾಡಿ ಪಾಲಿಷ್ ಮಾಡಿದ ಅಕ್ಕಿಯಂತೆ ಗಿಡಗಳನ್ನು ಕಟ್ಟು ಮಾಡಿ ಕೃತಕ ಪರಿಸರವನ್ನು ಸೃಷ್ಟಿಕೊಂಡು ಸಂಭ್ರಮಿಸುತ್ತಿದ್ದೇವೆ. ಪ್ರಕೃತಿ ಮೌನವಾಗಿ ಎಲ್ಲವನ್ನೂ ನೋಡುತ್ತಿದ್ದೆ. ಕಾಲದ ಜೊತೆ ಅದು ಕೂಡ ಆಗಾಗ ತನ್ನ ಆಟವನ್ನು ಆಡುತ್ತಿದೆ.
ರವೀಂದ್ರ ಕೊಟಕಿ