Advertisement

ಬಾಳು -ಬೆಳಕು : ಕೋವಿಡ್ ಕಾಣಿಸಿದ ಹೊಸಾ ಜಗತ್ತು…

08:03 PM Sep 16, 2020 | Suhan S |

ಪ್ರಕೃತಿಯಕೆಲವು ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ, ಹಲವು ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ, ನಮ್ಮ ತಿಳಿವಳಿಕೆಯೂ ಹೆಚ್ಚುತ್ತದೆ.

Advertisement

ಕೋವಿಡ್ ಹಾವಳಿಯಿಂದ ತತ್ತರಿಸಿದ ಬದುಕು ಇನ್ನೂ ಹಳಿಗೆ ಬಂದಿಲ್ಲ. ಅದು ತಂದೊಡ್ಡಿರುವ ಹೊಸ ಸಮಸ್ಯೆಗಳ ಜೊತೆ ಬದುಕು ಸಾಗಿಸಲು ಮನುಷ್ಯ ಹೆಣಗುತ್ತಿದ್ದಾನೆ. ಎಲ್ಲರ ಬದುಕಿನಲ್ಲೂ ಬೇರೆ ಬೇರೆ ರೀತಿಯ ತಲ್ಲಣಗಳು, ಗೊಂದಲಗಳು ಜೊತೆಯಾಗಿವೆ. ದಿಢೀರ್‌ ಜೊತೆಯಾದಕಷ್ಟಗಳು ಹಲವು ಪಾಠಕಲಿಸಿವೆ. ಈ ಮಧ್ಯೆಯೇ,ಕೆಲವೊಂದು ಅಚ್ಚರಿಗಳೂ ನಮ್ಮನ್ನು ತಾಕಿವೆ. ಲಾಕ್‌ ಡೌನ್‌ಕಾರಣಕ್ಕೆ ಐದಾರುತಿಂಗಳುಗಳಕಾಲ ಹುಟ್ಟಿದೂರಲ್ಲಿ,ಹಳ್ಳಿಯೊಂದರಲ್ಲಿ ಇದ್ದ ನಾನುಹತ್ತಿರದಿಂದ ಗಮನಿಸಿದ ಪ್ರಕೃತಿಯ ಅಚ್ಚರಿಗಳನ್ನು, ನಿಸರ್ಗದವಿದ್ಯಮಾನಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಮರವನ್ನು ನೋಡುವ ಧ್ಯಾನ :  ದಿನಾ ಬೆಳಿಗ್ಗೆ ನಡೆದುಕೊಂಡೋ, ಸೈಕಲ್‌ ಹೊಡೆದುಕೊಂಡೋ ಸುತ್ತಮುತ್ತಲಿನಪ್ರದೇಶದಲ್ಲಿ ಸುಮ್ಮನೆ ಸುತ್ತುವ ಅಲೆದಾಟ ಖುಷಿಯನ್ನು ಮಾತ್ರವಲ್ಲ, ಅರಿವನ್ನೂ ನೀಡಿತು. ಒಂದು ವಾಕಿಂಗ್‌ ವೇಳೆಯಲ್ಲಿ, ಪಕ್ಕದ ಊರಿನ ಕೆರೆಯ ಬಳಿ ಇದ್ದ ದೈತ್ಯ ಅತ್ತಿಯ ಮರವನ್ನು ನೋಡಿದಾಗ, ಎಲ್ಲಾ ಮರಗಳಂತೆ ಅದು ಎಲೆಯುದುರಿಸಿ ಬೋಳು ಬೋಳಾಗಿರಲಿಲ್ಲ, ಅದರಲ್ಲಿ ಬಲಿತ ಎಲೆಗಳಿದ್ದವು.ಕೆಲವು ದಿನಗಳ ನಂತರ ಮತ್ತದೇ ಜಾಗಕ್ಕೆ ಹೋಗಿದ್ದಾಗಲೂ ಅಂಥಾ ಗಮನಾರ್ಹ ವ್ಯತ್ಯಾಸವೇನೂ ಗೋಚರಿಸಲಿಲ್ಲ. ಸುಮಾರು ದಿನಗಳ ನಂತರ ಮತ್ತೆ ನೋಡಿದಾಗ ಮಾತ್ರ, ದೈತ್ಯ ಮರದ ಒಡಲ ತುಂಬೆಲ್ಲಾ ಹಳದಿ-ಕಪ್ಪು- ಕೆಂಪು ಬಣ್ಣದ ಅತ್ತಿಯ ಹಣ್ಣುಗಳು ತೂರಾಡುತ್ತಿದ್ದವು. ಸಮೀಪ ಹೋದಾಗ, ತಲೆ ಮೇಲೂ ತಪ ತಪ ಬೀಳುತ್ತಾ ಮರದಕೆಳಗೆಕಾಲಿಡಲೂ ಸಾಧ್ಯವಿಲ್ಲದಷ್ಟು ಹಣ್ಣುಗಳು ಉದುರಿ,ಕೊಳೆತು, ವಿಚಿತ್ರಪರಿಮಳ. ಹಣ್ಣುಗಳನ್ನು ಹೊತ್ತ ಮರದ ಗೆಲ್ಲುಗಳಲ್ಲಿ ಏಕಕಾಲಕ್ಕೇ ಆಗಲೇ ನುಣುಪಾದ

ವೆಲ್ವೆಟ್ಟಿನಂಥ ಚಿಗುರುಗಳೂ ಹೊರಟಿದ್ದುಕೌತುಕವೆನಿಸಿತು. ಮೊದಲು ಚಿಗುರಿ ಹೂ ಬಿಟ್ಟು, ಅದುಕಾಯಾಗಿ ನಂತರ ಹಣ್ಣಾಗುವುದು ಸಾಮಾನ್ಯ ನಿಯಮ. ಆದರೆ, ಈ ಮರದ ಜೀವನ ಚಕ್ರ ಸ್ವಲ್ಪ ವಿಶೇಷವೆನಿಸಿ ಅಚ್ಚರಿಯಾಯಿತು. ಮನುಷ್ಯನ ಆಯಸ್ಸಿಗಿಂತ ಮರಗಳ ಜೀವಿತಾವಧಿ ತುಂಬಾ ಜಾಸ್ತಿ. ಈಗಾಗಲೇ ಅದು ಎಷ್ಟು ವರ್ಷಗಳಿಂದ ಅಲ್ಲಿ ಅಚಲವಾಗಿ ನಿಂತಿದೆಯೋ!?ಇನ್ನೆಷ್ಟು ತಲೆಮಾರುಗಳು ಹಾಗೇ ಹೂ ಹಣ್ಣುಕಾಯಿ ಬಿಡುತ್ತಾ, ಸ್ವತ್ಛ ಗಾಳಿಗೆ ಆಕರವಾಗಿ ಹಕ್ಕಿಗಳಿಗೆ ಆಸರೆಯಾಗಿ ಜೀವಂತವಾಗಿರುತ್ತದೆಯೋ ಎಂಬುದನ್ನುಕಲ್ಪಿಸಿಕೊಂಡಾಗ ಒಂಥರಾ ಪುಳಕ!.

ಮರದೊಂದಿಗಿನ ಒಡನಾಟ : ದಿನಾ ಸಂಜೆ ವಾಕಿಂಗ್‌ ಹೋಗುವ ಜಾಗದಲ್ಲಿದ್ದ ಗುಡ್ಡೆ ಗೇರುಹಣ್ಣಿನ ಮರವೊಂದು, ಯುಗಾದಿ ಹಬ್ಬದ ಸಂದರ್ಭದಲ್ಲಿ ಪೂರ್ತಿ ಬೋಳಾಗಿ ಕಾಷ್ಠ ಶಿಲ್ಪದಂತೆ ಸೆಳೆಯುತ್ತಿತ್ತು.ನೋಡನೋಡುತ್ತಿದ್ದಂತೆ, ಒಣಗಿದಕೊಂಬೆಗಳಲ್ಲಿ ಗಿಳಿಹಸಿರು ಚಿಗುರು, ಕೊನರಿ ಆಗಲೂ ಮತ್ತೂಂದು ಥರದ ಸೌಂದರ್ಯ!

Advertisement

ದಿನಕಳೆದಂತೆ ಇಲ್ಲೊಂದು ಬೋಳುಮರವಿತ್ತು ಎಂಬುದನ್ನೇ ಮರೆಸುವಂತೆ ಚಿಗುರೆಲೆಗಳು ಬೆಳೆದು, ಇಡೀ ಮರವನ್ನಾವರಿಸಿಕೊಂಡಿದ್ದವು. ಸ್ವಲ್ಪ ದಿನಗಳ ನಂತರ, ಚಿಕ್ಕ ಚಿಕ್ಕ ಹೆಣಿಕೆಗಳ ತುದಿಯಲ್ಲಿ ತಿಳಿಹಳದಿ ಬಣ್ಣದ ಹೂಗಳ ಗೊಂಚಲು! ಈಗ ಅವುಗಳಲ್ಲಿ ಹಲವು ಉದುರಿ,ಕೆಲವಷ್ಟೇ ದೊಡ್ಡವಾಗಿ, ಮತ್ತೆಕೆಲವಷ್ಟೇ ಹಣ್ಣುಗಳಾಗಿ ಹಕ್ಕಿಗಳಿಗೆ ಆಹಾರವಾಗುತ್ತಿವೆ. ಏಪ್ರಿಲ್‌ನಿಂದ ಆಗಸ್ಟ್‌ಕೊನೆಯವರೆಗೆ ಐದು ತಿಂಗಳುಗಳ ಕಾಲ ಸತತವಾಗಿ ಒಂದು ಮರದ ಜೀವನಚಕ್ರವನ್ನು ತುಂಬಾ ಹತ್ತಿರದಿಂದ ಗಮನಿಸಿದ, ಆ ಮರದೊಂದಿಗೆ ಒಡನಾಡಿದ ಆನಂದ ನನ್ನದು. ನಾಲ್ಕು ತಿಂಗಳ ಹಿಂದೆ ಒಣಗಿದ್ದ ಮರ, ಸುತ್ತಮುತ್ತಲಿನ ಜಾಗ ಈಗ ಗುರುತೇ ಸಿಗದಷ್ಟು ಹಸಿರಿನಿಂದ ನಳನಳಿಸುತ್ತಿದೆ!

ಪ್ರಕೃತಿಯ ಇಂಥಾ ರೂಪಾಂತರದಲ್ಲಿ ಬದಲಾವಣೆ ನಿರಂತರ, ಹಿಗ್ಗದೆಕುಗ್ಗದೆ ಸ್ಥಿತಪ್ರಜ್ಞನಾಗಿರು, ಇರುವುದನ್ನು ಅನುಭವಿಸು, ಆನಂದಿಸು, ಎಲ್ಲದಕ್ಕೂಕಾಲ ಬರುತ್ತದೆ ಎಂಬ ಸಂದೇಶವಿದ್ದಂತೆ ಅನಿಸಿತು. ಈ ಐದಾರು ತಿಂಗಳ ಅವಧಿಯಲ್ಲಿ ಪ್ರಕೃತಿಯಒಡನಾಟದಿಂದಕಲಿತಿದ್ದು ಬಹಳ; ನೋಡಿದ್ದು ವಿಶಿಷ್ಟ ಹಾಗೂ ವಿರಳ. ನಿಸರ್ಗಕ್ಕೆ ಹತ್ತಿರವಾದರೆ, ಈ ಪ್ರಕೃತಿಯಕೆಲವು ಸೂಕ್ಷ್ಮಗಳನ್ನುಅರ್ಥಮಾಡಿಕೊಂಡರೆ,ಕೊನೆಗೆ ಏನಾಗದಿದ್ದರೂ ನಮ್ಮ ಪ್ರಜ್ಞೆ ವಿಶಾಲವಾಗುವುದಂತೂ ಖಚಿತ.

 

ಶ್ವೇತಾ ಹೊಸಬಾಳೆ

Advertisement

Udayavani is now on Telegram. Click here to join our channel and stay updated with the latest news.

Next