Advertisement

ನೈಸರ್ಗಿಕ ಖುಷಿ

12:30 AM Jan 14, 2019 | |

ನಿರಂಜನ,  ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತೋಟವನ್ನು ನೈಸರ್ಗಿಕವಾಗಿ ನಿರ್ಮಿಸಿದ್ದಾರೆ. ಅಂದರೆ ಸಸಿಗಳನ್ನು ನಾಟಿ ಮಾಡಿದ ನಂತರ ಇಲ್ಲಿಯವರೆಗೆ ಉಳುಮೆಯನ್ನೇ ಮಾಡಿಲ್ಲ. ಕೇವಲ ಸಸಿಗಳಿಗೆ ಕೊಟ್ಟಿಗೆ ಗೊಬ್ಬರ, ನೀರು ಪೂರೈಸಿದ್ದು, ಕೃಷಿ ತ್ಯಾಜ್ಯದಿಂದಲೇ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿದ್ದಾರೆ.

Advertisement

ಅರಣ್ಯ ಕೃಷಿ ಹೇಗಿರುತ್ತದೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ಲಾಭ ಹೇಗೆ ತೆಗೆಯುತ್ತಾರೆ ಅನ್ನೋದನ್ನು ನೀವು ನೋಡಬೇಕಾದರೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮಕ್ಕೆ ಬರಬೇಕು. ಇಲ್ಲಿನ ರೈತ ಜಿ.ಆರ್‌. ನಿರಂಜನ ಕುಮಾರ್‌,  ಎರಡು ದಶಕಗಳಿಂದ ಅರಣ್ಯ ಕೃಷಿ ಮಾಡುತ್ತಿದ್ದಾರೆ. ಆ ಮೂಲಕ, ಕೈತುಂಬ ಹಣ, ನೆಮ್ಮದಿಯ ಬದುಕನ್ನು ಕಂಡು ಕೊಂಡಿದ್ದಾರೆ. 

ನಿರಂಜನ್‌ ಅವರದು ಏಳು ಎಕರೆ ಜಮೀನಿದೆ. ಇದರಲ್ಲಿ ನಾಲ್ಕು ಎಕರೆಯನ್ನು ನೈಸರ್ಗಿಕ ಕೃಷಿಗೆ ಮುಡುಪಿಟ್ಟಿದ್ದಾರೆ. ಸಾವಯವ ಕೃಷಿ ಪದ್ಧತಿಯಿಂದಾಗಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುತ್ತಿರುವ ಇವರು, ಹೊಲವನ್ನು ನಂದನವನ ಆಗಿಸಿದ್ದು, ಪ್ರಾಣಿ-ಪಕ್ಷಿಗಳ ತಾಣವನ್ನಾಗಿಸಿದ್ದು ವಿಶೇಷ.

1996ರಲ್ಲಿ ಸಪೋಟ ಬೆಳೆಯುವ ಮೂಲಕ ನಿರಂಜನಕುಮಾರ  ಅರಣ್ಯ ಕೃಷಿಗೆ ಮುನ್ನುಡಿ ಬರೆದರು. 2006ರಲ್ಲಿ ತೋಟಗಾರಿಕೆ ಇಲಾಖೆಯಿಂದ ಪಡೆದ ವಿವಿಧ ಜಾತಿಯ ಸಸಿಗಳನ್ನು ನಾಟಿ ಮಾಡಿದರು. ಬಗೆ ಬಗೆಯ ಹಣ್ಣಿನ ಬೀಜಗಳನ್ನು ಹಾಕಿದರು. ನಂತರ 6*6 ಅಡಿ ಅಂತರದಲ್ಲಿ 1,500 ಸಾಗುವಾನಿ, 100 ತೆಂಗು, 100 ಸಪೋಟ, 300 ಸಿಲವರ್‌ ಸಸಿಗಳನ್ನು ಮಿಶ್ರಬೆಳೆಗಳನ್ನಾಗಿ (ಒಂದೊಂದು ಸಾಲು) ನಾಟಿ ಮಾಡಿದರು. ಅಲ್ಲಲ್ಲಿ 40 ನಿಂಬೆ, 60 ಶ್ರೀಗಂಧ, 50 ಮಲ್ಲಿಗೆ ಹೂವು, 60 ಮಾವು, 60 ಕರಿಬೇವು, 15 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಮೊದಮೊದಲು ಸಸಿಗಳ ರಕ್ಷಣೆಯೇ ಒಂದು ಸವಾಲಾಯಿತು. ಧೃತಿಗೆಡದೆ, ಅವುಗಳನ್ನು ಮಗುವಿನಂತೆ ಪೋಷಿಸಿದರು. ಬೋರ್‌ವೆಲ್‌ ನೀರು, ಕೊಟ್ಟಿಗೆ ಗೊಬ್ಬರ ಹಾಕಿದ್ದರ ಫಲವಾಗಿ ತೋಟ ಈಗ ವನಸಿರಿ ಆಗಿದೆ. 

ಕೈಹಿಡಿದ ಸಪೋಟ
ನಿರಂಜನ ಅವರು,  100 ಸಪೋಟ ಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ. ಇವು ನಾಲ್ಕೈದು ವರ್ಷದಿಂದ ಫಲ ನೀಡುತ್ತಿದ್ದು, ಒಂದು ವರ್ಷಕ್ಕೆ ಲಕ್ಷ ರೂ. ಆದಾಯ ಬರುತ್ತಿದೆ. ದಿನ ನಿತ್ಯದ ಆದಾಯಕ್ಕೆ ಮಲ್ಲಿಗೆ ಹಾಗೂ ಕರಿಬೇವು ನೆರವಾಗಿವೆ. ಪ್ರತಿ 6 ತಿಂಗಳಿಗೆ ಒಮ್ಮೆ ತೆಂಗಿನ ಕಾಯಿ ಇಳಿಸುತ್ತಾರೆ. ತೋಟದಲ್ಲಿ ಹೆಮ್ಮರವಾಗಿ ಬೆಳೆದಿರುವ 1,500 ಸಾಗುವಾನಿ ಮರಗಳು (ಒಂದು ಗಿಡ 20 ಸಾವಿರ ರೂ. ಬೆಲೆಯ ಕಟ್ಟಿಗೆ ನೀಡಿದೆ) ಮುಂದಿನ 4 ವರ್ಷಗಳಲ್ಲಿ ಕೋಟ್ಯಂತರ ರೂ. ಆದಾಯ ತಂದು ಕೊಡಲಿವೆ. ಮಾವು, ಶ್ರೀಗಂಧ, ಸಿಲವರ್‌ ಮರಗಳಿಂದಲೂ ಲಾಭ ಉಂಟು.

Advertisement

ಉಳುಮೆಯೇ ಮಾಡಿಲ್ಲ
ನಿರಂಜನ,  ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತೋಟವನ್ನು ನೈಸರ್ಗಿಕವಾಗಿ ನಿರ್ಮಿಸಿದ್ದಾರೆ. ಅಂದರೆ ಸಸಿಗಳನ್ನು ನಾಟಿ ಮಾಡಿದ ನಂತರ ಇಲ್ಲಿಯವರೆಗೆ ಉಳುಮೆಯನ್ನೇ ಮಾಡಿಲ್ಲ. ಕೇವಲ ಸಸಿಗಳಿಗೆ ಕೊಟ್ಟಿಗೆ ಗೊಬ್ಬರ, ನೀರು ಪೂರೈಸಿದ್ದು, ಕೃಷಿ ತ್ಯಾಜ್ಯದಿಂದಲೇ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿದ್ದಾರೆ.

ಬೋರ್‌ವೆಲ್‌ ರಿಚಾರ್ಜ್‌ಗೆ ಮಳೆನೀರಿನ ಇಂಗು ಗುಂಡಿ ನಿರ್ಮಿಸಿದ್ದಾರೆ. ತಾವೇ ಕೃಷಿ ಚಟುವಟಿಕೆ ಮಾಡುವುದರಿಂದ ಕೂಲಿ ಆಳುಗಳ ಸಮಸ್ಯೆ ಇಲ್ಲ. ಬೆಳೆ ನಾಶವಾಗಿ ನಷ್ಟ ಅನುಭವಿಸುವ ಸಂಕಷ್ಟವಿಲ್ಲ.

ಸಾವಯವ ಕೃಷಿಯಿಂದ ಪ್ರಕೃತಿ ಮಡಿಲಲ್ಲಿ ತೋಟಗಾರಿಕೆ ಬೆಳೆ ಬೆಳೆದು ತಂದೆಯ ಆಸೆ ಈಡೇರಿಸಿದ್ದೇನೆಂಬ ಸಂತಸವಿದೆ. ಉತ್ತಮ ಪರಿಸರ ನಿರ್ಮಿಸುವುದರ ಜೊತೆಗೆ ನಮ್ಮ ಕುಟುಂಬದ ಆರೋಗ್ಯವೂ ವೃದ್ಧಿಯಾಗಿ ನೆಮ್ಮದಿ ಜೀವನ ಕಂಡುಕೊಂಡಿದ್ದೇನೆಂದು ಎನ್ನುತ್ತಾರೆ ನಿರಂಜನಕುಮಾರ್‌.

ಪ್ರಾಣಿ-ಪಕ್ಷಿಗೆ ಅನ್ನದಾತ
ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದರಿಂದ ನಿರಂಜನಕುಮಾರ ಅವರ ತೋಟ ಕಾಡಾಗಿ (ಅರಣ್ಯ)ದೆ. ಹೀಗಾಗಿ ಪ್ರಾಣಿ-ಪಕ್ಷಿಗಳು ಇವರ ತೋಟಕ್ಕೆ ಮೇಲಿಂದ ಮೇಲೆ ಲಗ್ಗೆ ಇಡುತ್ತವೆ. ಅವುಗಳ ನಾದ, ಕೀಟಲೆಗಳಲ್ಲೂ ಸಂತೋಷ ಪಡುವ ಇವರು ಕಾಗೆಯಂತೆ ಧ್ವನಿ ಮಾಡುವುದನ್ನು ಕಲಿತಿದ್ದಾರೆ. ತಮ್ಮ ಧ್ವನಿ ಮೂಲಕವೇ 50-100 ಕಾಗೆಗಳನ್ನು ಸೇರಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಕೆಲ ಕುರಿ, ಮಂಗ, ಆಕಳುಗಳಿಗೆ ಇವರ ತೋಟವೇ ಅಡುಗೆ ಮನೆ.

– ಎಂ.ಪಿ.ಎಂ. ವಿಜಯಾನಂದಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next