ಹುಬ್ಬಳ್ಳಿ: ಸಮುದ್ರವನ್ನು ಸೇರುವುದಕ್ಕಾಗಿಯೇ ಹರಿಯುವ ನದಿಗೆ ಅಣೆಕಟ್ಟು ಕಟ್ಟಿ ನಿಲ್ಲಿಸುವುದು ಪ್ರಕೃತಿಯ ವೈಪರೀತ್ಯಕ್ಕೆ ಕಾರಣವಾಗಿದೆ ಎಂದು ಚಿಂತಕಿ ವೀಣಾ ಬನ್ನಂಜೆ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಸಾಹಿತ್ಯ ಪ್ರಕಾಶನ ಆಯೋಜಿಸಿದ “ನೀರಿದ್ದರೆ ನಾಳೆ’ ಕಾರ್ಯಕ್ರಮದಲ್ಲಿ ಶಿವಾನಂದ ಕಳವೆ ಬರೆದ “ಜೀವನದಿಗಳ ಸಾವಿನ ಕಥನ’ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ನದಿಗೆ ಸಮುದ್ರವನ್ನು ಮುಟ್ಟಲು ಬಿಡದಿರುವುದು ಮಹಾಪಾಪ. ಸಖನನ್ನು ಸೇರಲು ಹೋಗುವ ಹೆಣ್ಣನ್ನು ತಡೆದಷ್ಟೇ ಪಾಪ ಬರುತ್ತದೆ ಎಂದರು.
ಅಣೆಕಟ್ಟು ನಿರ್ಮಾಣ ಮಾಡಿ ನಾವು ದೊಡ್ಡ ಸಾಧನೆ ಮಾಡಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳುತ್ತೇವೆ. ಆದರೆ ಇದರಿಂದ ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ನಾವು ಯೋಚಿಸಬೇಕಿದೆ ಎಂದರು.
ನದಿಗೆ ಜೀವಚೈತನ್ಯ ಮಿಡಿಯುವ, ಕೊಳೆ ತೊಳೆಯುವ ತಾಕತ್ತಿದೆ. ನದಿಗಳಿಗೆ ಜೀವ ಇರುತ್ತದೆ. ಜೀವ ಇರುವ ಪ್ರತಿಯೊಂದು ಒಂದಿಲ್ಲೊಂದು ದಿನ ಸಾಯುವುದು ಅನಿವಾರ್ಯವಾಗಿದೆ. ಆದ್ದರಿಂದ ನದಿಗಳೂ ಸಾಯುವುದು ಕೂಡ ಸಹಜವಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ನೀರು ಚುನಾವಣಾ ವಿಷಯವಾಗಿದೆ: ಕೃಷಿ-ಪರಿಸರ ತಜ್ಞ ಹಾಗೂ ಅಂಕಣಕಾರ ಶಿವಾನಂದ ಕಳವೆ ಮಾತನಾಡಿ, ಹಲವೆಡೆ ನೀರು ವೋಟ್ ಬ್ಯಾಂಕ್ ವಿಷಯವಾಗಿದ್ದು, ಅಭ್ಯರ್ಥಿಗಳು ನೀರಿನ ಭರವಸೆ ನೀಡಿ ಮತಯಾಚನೆ ಮಾಡುತ್ತಿದ್ದಾರೆ ಎಂದರು.
ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ಜಲ ಸಂರಕ್ಷಣೆ ಬಗ್ಗೆ ಕೇವಲ ಚರ್ಚೆ ಮಾಡದೇ ಕಾರ್ಯೋನ್ಮುಖರಾಗಬೇಕು. ಮಳೆನೀರನ್ನು ಸಂಗ್ರಹಿಸಲು ಮುಂದಾಗಬೇಕು. ಮಳೆನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಮಳೆ ನೀರನ್ನು ಭೂಮಿಗೆ ಇಂಗಿಸಲು ಮುಂದಾಗಬೇಕು ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನಗೌಡರ ಅಧ್ಯಕ್ಷತೆ ವಹಿಸಿದ್ದರು. ವಿನಯ ಜವಳಿ, ಅಶೋಕ ಗಡಾದ, ರಮೇಶ ಪಾಟೀಲ ಇದ್ದರು. ಗಾಯತ್ರಿ ದೇಶಪಾಂಡೆ ಪ್ರಾರ್ಥಿಸಿದರು. ಎಂ.ಎ. ಸುಬ್ರಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲಕೃಷ್ಣ ಹೆಗಡೆ ನಿರೂಪಿಸಿದರು.
ಕೆರೆ ಕಟ್ಟಿದವರ ಕಥಾನಕ ಮರೆಯಾಗಿ ಕೆರೆ ನುಂಗಿದವರ ಕಥಾನಕವೇ ಹೆಚ್ಚಾಗಿದೆ. ಸಮುದಾಯದ ಕೆರೆಗಳು ಸರಕಾರಿ ಕೆರೆಗಳಾದ ನಂತರ ಅವುಗಳ ಅವನತಿ ಆರಂಭಗೊಂಡಿತು. ಪ್ರಸ್ತುತ ರಾಜ್ಯದಲ್ಲಿ 36,000 ಕೆರೆಗಳಿವೆ. ಅವುಗಳಲ್ಲಿ ಹೆಚ್ಚಿನ ಕೆರೆಗಳು ಅವನತಿ ಸ್ಥಿತಿಯಲ್ಲಿವೆ. ಕೆರೆಗಳು ನಮ್ಮೆಲ್ಲರ ಆಸ್ತಿ. ಅವುಗಳ ಹೂಳೆತ್ತಲು, ಅವುಗಳನ್ನು ರಕ್ಷಿಸಲು ನಾವೆಲ್ಲ ಮುಂದಾಗಬೇಕು. ಅವು ನಮ್ಮ ಆಸ್ತಿ ಎಂಬ ಮನಸ್ಥಿತಿ ಬಂದಾಗ ಜಲ ಸಂಪನ್ಮೂಲಗಳನ್ನು ಉಳಿಸಿಕೊಳ್ಳಲು ಸಾಧ್ಯ.
ಶಿವಾನಂದ ಕಳವೆ, ಕೃಷಿ-ಪರಿಸರ ತಜ್ಞ