ಮಂಜೇಶ್ವರದ ಮೀಯಪದವಿನ ಚೌಟರ ಚಾವಡಿ ಬಯಲು ರಂಗ ಮಂಟಪದಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ರಂಗ ಚೇತನ ಸಂಸ್ಕೃತಿ ಕೇಂದ್ರ ಬೆಂಗಳೂರು ಮತ್ತು ಚೌಟರ ಪ್ರತಿಷ್ಠಾನ ಮೀಯಪದವು ಜಂಟಿಯಾಗಿ ಆಯೋಜಿಸಿದ್ದ ನಾಲ್ಕು ದಿನಗಳ “ರಾಷ್ಟ್ರೀಯ ಯಕ್ಷ ರಂಗೋತ್ಸವ -2018′ ಇತ್ತೀಚೆಗೆ ಜರಗಿತು.
ಬಡಗುತಿಟ್ಟಿನ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ತಂಡದ “ಮಾರುತಿ ಪ್ರತಾಪ’, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಬಾಲಕಲಾವಿದರಿಂದ “ಸುದರ್ಶನ ವಿಜಯ’, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು ಮೇಳದ “ಗಿರಿಜಾ ಕಲ್ಯಾಣ’, ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಕಾಟಿಪಳ್ಳ ತಂಡದವರ “ದೇವಿ ಮಹಿಷ ಮರ್ದಿನಿ’ ಹೀಗೆ ತೆಂಕು ಹಾಗೂ ಬಡಗುತಿಟ್ಟಿನ ಎರಡು ಮೇಳಗಳ ಹಾಗೂ ಒಂದು ಮಹಿಳಾ ಹಾಗೂ ಒಂದು ಮಕ್ಕಳ ತಂಡಗಳ ಮೂಲಕ ನಾಲ್ಕು ಪ್ರಕಾರಗಳು ಅನಾವರಣಗೊಂಡದ್ದು ಗಮನಾರ್ಹ.
ಮಾರುತಿ ಪ್ರತಾಪ ಪ್ರಸಂಗ ಯಾವುದೇ ರೀತಿಯ ಅತಿರೇಕಗಳಿಲ್ಲದೆ ಅನಗತ್ಯ ವೇಗದ ನಡೆಗಳಿಲ್ಲದೆ, ಅಚ್ಚುಕಟ್ಟಿನ ರಂಗ ಹೊಂದಾಣಿಕೆಯೊಂದಿಗೆ ಕಥಾನಕ ಹಂತಹಂತವಾಗಿ ತೆರೆದುಕೊಳ್ಳುತ್ತಾ ಉತ್ತಮವಾಗಿ ಮೂಡಿಬಂತು. ನಿಧಾನ ಗತಿಯಲ್ಲೇ ಸಾಗಿದ ಪ್ರದರ್ಶನ ಕಥಾಪ್ರಪಂಚಕ್ಕೆ ತಮಗರಿವಿಲ್ಲದೇ ಸೆಳೆದುಕೊಳ್ಳುತ್ತದೆ. ಕೃಷ್ಣ ಬಲರಾಮರ ಸೊಗಸಾದ ನವಿರು ಹಾಸ್ಯದ ಸಂಭಾಷಣೆ, ಸತ್ಯಭಾಮೆಯ ಅಹಂನಿಂದ ಕೂಡಿದ ಪಾತ್ರೋಚಿತ ಮೊನಚು ಮಾತು, ಚೌಕಟ್ಟಿನೊಳಗೆ ರಂಜಿಸಿದ ಹಾಸ್ಯ, ಉತ್ತಮ ಮುಖವರ್ಣಿಕೆಯೊಂದಿಗೆ ಹಿತಮಿತಮಾತುಗಳಿಂದ ರಂಜಿಸಿದ ಹನುಮಂತ ಹೀಗೆ ಒಟ್ಟು ಪ್ರಯೋಗ ದೀರ್ಘಕಾಲ ಮೆಲುಕು ಹಾಕುವಂತಹುದು.
ಎರಡನೇ ದಿನದ ಸುದರ್ಶನ ವಿಜಯ ಪ್ರದರ್ಶನ ಎಲ್ಲಾ ರೀತಿಯಿಂದಲೂ ಸೈ ಎನಿಸಿಕೊಂಡಿತು. ರಾಮಕೃಷ್ಣ ಮಯ್ಯರ ಉತ್ತಮ ಭಾಗವತಿಕೆ, ಅನುಭವೀ ಹಿಮ್ಮೇಳದವರ ಸಾಥ್, ಚುರುಕು ನಡೆ, ನಾಟ್ಯ, ಅಭಿನಯ ಸಂಭಾಷಣೆಯಿಂದ ರಂಜಿಸಿದ ಸುದರ್ಶನ, ಮುದ್ದು ಮುದ್ದಾದ ಸ್ಪಷ್ಟ ಮಾತು ಹಾಗೂ ನಾಟ್ಯಾಭಿನಯಗಳಿಂದ ಮತ್ತೆ ಮತ್ತೆ ನೆನಪಾದ ವಿಷ್ಣು, ನವಿರಾದ ತುಂಟ ತುಂಟ ಸಂಭಾಷಣೆಯಿಂದ ಮನಸೆಳೆದ ದೂತ, ಹಿತಮಿತ ಮಾತುಗಳಿಂದ ಪಾತ್ರೋಚಿತವಾಗಿ ರಂಜಿಸಿದ ಶತ್ರುಪ್ರಸೂದನ, ದೇವೇಂದ್ರ ಹಾಗೂ ಇನ್ನಿತರ ಪಾತ್ರಗಳು ಹೀಗೆ ಒಟ್ಟು ಪ್ರದರ್ಶನ ಮಕ್ಕಳ ಪ್ರತಿಭೆ ಬಗ್ಗೆ ಹೆಮ್ಮೆಪಡುವಂತೆ ಮಾಡಿತು.
ಮೂರನೇ ದಿನದ ಗಿರಿಜಾ ಕಲ್ಯಾಣ ಪ್ರಸಂಗ ಮೇಳಕ್ಕೆ ಹೆಚ್ಚಿನ ಹೆಸರನ್ನು ತಂದುಕೊಟ್ಟ ಪ್ರಸಂಗಗಳಲ್ಲೊಂದು. ಹಿರಿಯ ಭಾಗವತರಾದ ದಿನೇಶ ಅಮ್ಮಣ್ಣಾಯರ ನಿರ್ದೇಶನದಲ್ಲಿ ಹಾಗೂ ಸುಶ್ರಾವ್ಯ ಭಾಗವತಿಕೆಯಲ್ಲಿ ಪ್ರಸಂಗ ಮೇಳೈಸಿತು. ಹಾಗೇ ಸಿದ್ಧಿ ಪ್ರಸಿದ್ಧಿಗಳನ್ನು ಪಡೆದ ಇನ್ನೋರ್ವ ಭಾಗವತ ರಮೇಶ ಭಟ್ ಪುತ್ತೂರು ಅವರ ಭಾಗವತಿಕೆ ಪಳಗಿದ ಕೈಯ ಹಿಮ್ಮೇಳದ ಸಾಥ್, ಮುಮ್ಮೇಳದಲ್ಲಿ ಪಾತ್ರೋಚಿತವಾಗಿ ಮಿಂಚಿದ ತಾರಕಾಸುರ, ರತಿ ಮನ್ಮಥ, ಮತ್ತೆ ಮತ್ತೆ ನೆನಪಾಗುವ ಉತ್ತಮ ಆಶ್ಲೀಲವಿಲ್ಲದ ಹಾಸ್ಯ, ಷಣ್ಮುಖ ಶಿವ ಎಲ್ಲೂ ಕಾಲದಗತಿಯನ್ನು ಉತ್ತರಿಸದ ಪ್ರಸಂಗದ ನಡೆ, ಯಕ್ಷಗಾನದಲ್ಲಿ ಹಳೆಯ ಪ್ರಸಂಗ ಪ್ರದರ್ಶನ ರೀತಿಯಿಂದ ಹೇಗೆ ನಿತ್ಯನೂತನವಾಗಿರುತ್ತದೆ ಎಂಬುದಕ್ಕೆ ನಿದರ್ಶನ.
ನಾಲ್ಕನೇ ದಿನದ ಪ್ರಸಂಗ ದೇವಿ ಮಹಿಷ ಮರ್ದಿನಿ ಪ್ರಸ್ತುತ ತಂಡ ಮಹಿಳಾ ಯಕ್ಷಗಾನ ತಂಡಗಳಲ್ಲೇ ಹೆಚ್ಚು ಪ್ರಸಿದ್ಧಿಯನ್ನು ಪಡೆದ ತಂಡಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂತುಲಿತ ತಂಡ. ಕಾವ್ಯಶ್ರೀ ಅಜೇರು ಅವರ ಸೊಗಸಾದ ಭಾಗವತಿಕೆ, ಹಿತಮಿತವಾದ ಸಂಭಾಷಣೆ, ಸಾಂಪ್ರದಾಯಿಕ ಕಿರೀಟ ವೇಷದಲ್ಲೇ ರಂಜಿಸಿದ ಮಧು – ಕೈಟಭರು, ಸೊಗಸಾದ ಮಾತು ಹಾಗೂ ರಂಗನಡೆಯಿಂದ ಗಮನಸೆಳೆದ ವಿಷ್ಣು, ಪಾತ್ರೋಚಿತವಾಗಿ ಮೇಳೈಸಿದ ದೇವೇಂದ್ರ ,ಬ್ರಹ್ಮ, ಗಂಭೀರ ನಡೆನುಡಿಗಳಿಂದ ಮಿಂಚಿದ ಶ್ರೀದೇವಿ . ಯಾವುದೇ ಪುರುಷ ವೇಷದಾರಿಗೂ ಕಡಿಮೆ ಇಲ್ಲ ಎನ್ನುವಂತೆ ಪ್ರವೇಶ ಹಾಗೂ ಪಾತ್ರದ ಕೊನೆಯವರೆಗೂ ಸಮತೂಕದ ರಂಗನಡೆಯನ್ನು ಪ್ರದರ್ಶಿಸಿದ ಮಹಿಷಾಸುರ ಪಾತ್ರದಾರಿ ಪೂರ್ಣಿಮಾ ಯತೀಶ ರೈಯವರ ಉತ್ಕೃಷ್ಟ ಪ್ರದರ್ಶನ ಉಲ್ಲೇಖಾರ್ಹ.
ಪ್ರತಿನಿತ್ಯ ಎರಡೂವರೆ ಗಂಟೆಗಳ ಕಾಲದ ಯಕ್ಷಗಾನ ಪ್ರದರ್ಶನ ಕಾಲಮಿತಿಯೊಳಗೆ ತಂಡಗಳು ಹೇಗೆ ಉತ್ತಮ ಪ್ರದರ್ಶನ ನೀಡಬಹುದು ಎಂಬುದಕ್ಕೆ ಹಿಡಿದ ಕೈಕನ್ನಡಿಯಂತಿತ್ತು.
ಯೋಗೀಶ ರಾವ್, ಚಿಗುರುಪಾದೆ