Advertisement

ಉದ್ಯೋಗ ಖಾತ್ರಿ: 54 ಲಕ್ಷ ಮಾನವ ದಿನ ಸೃಜನೆ

01:21 PM Apr 16, 2020 | mahesh |

ತುಮಕೂರು: ಸರ್ಕಾರಿ ಆದೇಶದಂತೆ ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ಮತ್ತು ಕೂಲಿಕಾರರಿಗೆ ತಮ್ಮ ಮನೆಯಲ್ಲಿಯೇ ಉಳಿದು ಸ್ವಯಂ ಸಂರಕ್ಷಣೆ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೂಲಿ ಕೆಲಸ ಸಿಗದೇ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದ್ದು, ಈ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ತಕ್ಷಣ ಉದ್ಯೋಗ ಒದಗಿಸುವ ಉದ್ದೇಶದಿಂದ ಗ್ರಾಪಂಗಳ ಕ್ರಿಯಾಯೋಜನೆಯಲ್ಲಿ ಸೇರ್ಪಡೆಗೊಳ್ಳದಿದ್ದರೂ ಕೂಡ ಅಗತ್ಯ ಕಾಮಗಾರಿಗಳಿಗೆ ಚಾಲನೆ ನೀಡಿ ಘಟನೋತ್ತ ವಾಗಿ ಅನುಮೋದನೆ ಪಡೆಯಬಹುದಾಗಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 54 ಲಕ್ಷ ಮಾನವ ದಿನಗಳ ಸೃಜನೆ ಮಾಡಬೇಕಾಗಿದೆ.

Advertisement

ಜಿಲ್ಲಾ ಪಂಚಾಯತ್‌ ವತಿಯಿಂದ 2019- 20ನೇಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ 3.87 ಲಕ್ಷ ಕುಟುಂಬಗಳು ಉದ್ಯೋಗ ಖಾತ್ರಿ ಚೀಟಿಗಳನ್ನು ಹೊಂದಿದ್ದು, ಇವರ ಮೂಲಕ 54 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿ 24673 ಸಂಖ್ಯೆಯ ಆಸ್ತಿಗಳನ್ನು ಸೃಜಿಸಲಾಗಿದೆ. ಕೂಲಿ ಹಣ ಬಾಬ್ತು 14610.53 ಲಕ್ಷ ಹಾಗೂ ಸಾಮಗ್ರಿ ಮೊತ್ತ 13990.07 ಲಕ್ಷ ಸೇರಿ ಒಟ್ಟು 28600.60 ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಗ್ರಾಮೀಣ ಭಾಗದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ, ಗ್ರಾಮೀಣ ಮೂಲ ಸೌಕರ್ಯ ಕಾಮಗಾರಿಗಳು, ಕೃಷಿಹೊಂಡ, ರೈತರ ಹೊಲ ದಲ್ಲಿ ಬದು ನಿರ್ಮಾಣ, ಮನೆ ನಿರ್ಮಾಣ, ರೈತರ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿ, ಅಂಗನವಾಡಿ ಕಟ್ಟಡ, ಗ್ರಾಪಂ ಕಟ್ಟಡ, ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯ ರಿಗೆ  ವರ್ಕ್‌ಷೆಡ್‌ ಮುಂತಾದ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. 2020-21ನೇ ಸಾಲಿನಲ್ಲಿ 86 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಹೆಣ್ಣು ಮತ್ತು ಗಂಡಿಗೆ ಸಮಾನ ಕೂಲಿ 275 ರೂ.ಗಳನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಕೋವಿಡ್‌-19ರ ಹಿನ್ನೆಲೆಯಲ್ಲಿ ಯೋಜನೆಗೆ ಕುಂದು ಬರದಂತೆ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗಿದೆ.

ಕೃಷಿ, ರೇಷ್ಮೆ ಕೃಷಿ, ಅರಣ್ಯ, ತೋಟಗಾರಿಕೆ ಹೀಗೆ ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆ ಯಿಂದ ಹಾಗೂ ಗ್ರಾಪಂ ಮುಖಾಂತರ ಕಾಮಗಾರಿಗಳನ್ನು ಅನುಷ್ಠಾನ  ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ಅಂಗನವಾಡಿ ಕಟ್ಟಡ, ಗ್ರಾಪಂ ಕಟ್ಟಡ, ಶೈತ್ಯಾಗಾರ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವುದರ ಜೊತೆಗೆ ಶೇ.65 ರಷ್ಟು ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕಾಮಗಾರಿಗಳಾದ ರೈತರ ಬದು, ಕೃಷಿ ಹೊಂಡ, ಇಂಗು ಗುಂಡಿ, ಬದು ನಿರ್ಮಾಣ, ಮಳೆ ನೀರು ಕೊಯ್ಲು, ಗೋಕಟ್ಟೆ ಕಾಮಗಾರಿ ಗಳನ್ನು ಹಾಗೂ ಅರಣ್ಯ ಸಸಿ ನೆಡುವ ಕಾರ್ಯವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಉದ್ಯೋಗ ಚೀಟಿ ಇಲ್ಲದೇ ಇರುವ ಕೂಲಿ ಕಾರರಿಗೆ ತಕ್ಷಣವೇ ಉದ್ಯೋಗ ಚೀಟಿಗಳನ್ನು ವಿತರಿಸಲು ಗ್ರಾಪಂಗಳಿಗೆ ಸೂಚಿಸಲಾಗಿದೆ. ಕೃಷಿ ಮತ್ತು ಜಲಾನಯನ ಇಲಾಖೆಯಲ್ಲಿ ಕಂದಕ ಬದುಗಳು, ಕೃಷಿ ಹೊಂಡ ನಿರ್ಮಾಣ, ಬದುಗಳನ್ನು ಸ್ಥಿರೀಕರಿಸುವುದು, ಅರಣ್ಯ ಇಲಾಖೆ ಯರಸ್ತೆ ಬದಿ ಗಿಡ ನೆಡಲು, ನೆಡು ತೋಪು ನಿರ್ಮಾಣ ಮಾಡಲು, ಸರ್ಕಾರಿ ಜಮೀನುಗಳಲ್ಲಿ ಗಿಡ ನೆಡಲು ಗುಂಡಿ ತೋಡುವುದು ಹಾಗೂ ಅರಣ್ಯ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕಾಮಗಾರಿ ಕೈಗೊಳ್ಳುವುದು. ಸೇರಿದಂತೆ ತೋಟಗಾರಿಕೆ ಇಲಾಖೆ,ಪಶುಸಂಗೋಪನೆ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು ಸೇರಿದೆ.

Advertisement

ಗ್ರಾಪಂಗಳು ಎಲ್ಲಾ ಕಾಮಗಾರಿಗಳನ್ನು ಒಗ್ಗೂಡಿಸುವಿಕೆ ಮೂಲಕ ಮತ್ತು ಗ್ರಾಪಂ ಯಿಂದಲೂ ಸಹ ಅನುಷ್ಠಾನ ಮಾಡುವುದರ ಜೊತೆಗೆ ಇನ್ನಿತರೆ ಕಾಮಗಾರಿಗಳಾದ ಗ್ರಾಮೀಣ ನೈರ್ಮಲ್ಯ, ಸೋಕ್‌ಪಿಟ್‌ ತೆಗೆಯುವುದು, ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಸಂಬಂಧಿಸಿದ ಮಣ್ಣಿನ ಕೆಲಸಗಳನ್ನು ತಮ್ಮ ನಿಗದಿತ ಕೆಲಸದೊಂದಿಗೆ ನಿರ್ವಹಿಸುವುದು.

ಕೋವಿಡ್‌-19ರ ಅಪಾಯ ಇರುವುದರಿಂದ 5 ಜನರಿಗಿಂತ ಹೆಚ್ಚು ಜನ ಒಂದು ಕಡೆ ಸೇರದಂತೆ ಹಾಗೂ ಕೆಲಸ ಮಾಡುವ ಸಂದರ್ಭದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಕನಿಷ್ಠ ಮೂರು ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಲು ಹಾಗೂ ಕಾಮಗಾರಿ ಸ್ಥಳಕ್ಕೆ ಹೋಗುವಾಗ ಮತ್ತು ಬರುವಾಗ ಒಟ್ಟಾಗಿ ಒಂದೇ ವಾಹನದಲ್ಲಿ ಪ್ರಯಾಣ ಮಾಡದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲುಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.
●ಶುಭ ಕಲ್ಯಾಣ್‌, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next