ಕಟಪಾಡಿ: ಕುಂಜಾರುಗಿರಿ ಪಾಜಕ ಆನಂದತೀರ್ಥ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಅವಂತಿಕಾ ರಾವ್ ಅವರು ಟಾಟಾ ಬಿಲ್ಡಿಂಗ್ ಇಂಡಿಯಾ ವತಿಯಿಂದ “ಸ್ವತ್ಛ ಮತ್ತು ಆರೋಗ್ಯಕರ ಭಾರತ’ ಎಂಬ ವಿಷಯದಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ದಿಲ್ಲಿಯ ತಾಜ್‌ವಿವಾಂತದಲ್ಲಿ ನಡೆದ ಸಮಾರಂಭದಲ್ಲಿ ಟಾಟಾಗ್ರೂಪ್‌ನ ಎಡ್ರಿಯನ್ ಟೆರಾನ್‌ರಿಂದ ಪ್ರಶಸ್ತಿ ಸ್ವೀಕರಿಸಿದರು.
ಅನಂತರ ರಾಷ್ಟ್ರಪತಿ ಭವನದಲ್ಲಿ ನಡೆದ ವಿದ್ಯಾರ್ಥಿಗಳ ಅಭಿನಂದನ ಕಾರ್ಯಕ್ರಮದಲ್ಲಿ ತಾನು ಬರೆದ ಪ್ರಬಂಧದ ಬಗ್ಗೆ 3 ನಿಮಿಷಗಳ ಕಾಲ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಮಾತನಾಡುವ ಅವಕಾಶ ಪಡೆದ ಅವಂತಿಕಾ ನಿರರ್ಗಳವಾಗಿ ತನ್ನ ಪ್ರಬಂಧದ ಸಾರಾಂಶವನ್ನು ಪ್ರಸ್ತುತ ಪಡಿಸಿದರು. ಇಡೀ ದೇಶದಿಂದ ಆಯ್ಕೆಯಾದ 29 ವಿದ್ಯಾರ್ಥಿಗಳ ಪೈಕಿ ರಾಷ್ಟ್ರಪತಿಗಳ ಮುಂದೆ ಮಾತನಾಡುವ ಅವಕಾಶ ಪಡೆದ ಇಬ್ಬರು ವಿದ್ಯಾರ್ಥಿಗಳಲ್ಲಿ ಅವಂತಿಕಾ ಕೂಡ ಒಬ್ಬರು.
ಅವಂತಿಕಾ ಸಾಧನೆಗೆ ಹೆತ್ತವರಾದ ಆನಂದತೀರ್ಥ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿಜಯ್ ಪಿ. ರಾವ್ ಮತ್ತು ಕಾತ್ಯಾಯನಿ ದಂಪತಿ, ಶಾಲೆಯ ಪ್ರಾಂಶುಪಾಲೆ ಗೀತಾ ಎಸ್. ಕೋಟ್ಯಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.