ಹೊಸದಿಲ್ಲಿ: ”ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು (NEP) ದೇಶದ ಪ್ರತಿಯೊಂದು ಭಾಷೆಗೆ ಗೌರವ ಮತ್ತು ಮನ್ನಣೆ ನೀಡಲಿದೆ. ತಮ್ಮ ಸ್ವಾರ್ಥಕ್ಕಾಗಿ ಭಾಷೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುವವರು ತಮ್ಮ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
NEP ಪ್ರಾರಂಭದ ಮೂರನೇ ವಾರ್ಷಿಕೋತ್ಸವದ “ಅಖಿಲ ಭಾರತೀಯ ಶಿಕ್ಷಾ ಸಮಾಗಮ್” ನಲ್ಲಿ ಉದ್ಘಾಟನಾ ಭಾಷಣ ಮಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳನ್ನು ಅವರ ಸಾಮರ್ಥ್ಯದ ಬದಲಿಗೆ ಅವರ ಭಾಷೆಯ ಆಧಾರದ ಮೇಲೆ ನಿರ್ಣಯಿಸುವುದೇ ದೊಡ್ಡ ಅನ್ಯಾಯ ಎಂದರು.
“ಮಾತೃಭಾಷೆಯಲ್ಲಿ ಶಿಕ್ಷಣವು ಭಾರತದಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯದ ಹೊಸ ರೂಪವನ್ನು ಪ್ರಾರಂಭಿಸುತ್ತಿದೆ. ಇದು ಸಾಮಾಜಿಕ ನ್ಯಾಯದ ಕಡೆಗೆ ಬಹಳ ಮಹತ್ವದ ಹೆಜ್ಜೆಯಾಗಿದೆ ಎಂದರು.
ಯುರೋಪಿನ ಉದಾಹರಣೆಯನ್ನು ನೀಡುತ್ತಾ, ಹೆಚ್ಚಿನ ದೇಶಗಳು ತಮ್ಮದೇ ಆದ ಸ್ಥಳೀಯ ಭಾಷೆಗಳನ್ನು ಬಳಸುತ್ತವೆ ಎಂದರು. ”ಭಾರತವು ಸ್ಥಾಪಿತ ಭಾಷೆಗಳ ಶ್ರೇಣಿಯನ್ನು ಹೊಂದಿದ್ದರೂ, ಅವುಗಳನ್ನು ಹಿಂದುಳಿಸಿರುವ ಸಂಕೇತವಾಗಿ ಪ್ರಸ್ತುತಪಡಿಸಲಾಗುತ್ತದೆ. ಇಂಗ್ಲಿಷ್ ಮಾತನಾಡಲು ಸಾಧ್ಯವಾಗದವರನ್ನು ನಿರ್ಲಕ್ಷಿಸಲಾಗಿದೆ ಮತ್ತು ಅವರ ಪ್ರತಿಭೆಯನ್ನು ಗುರುತಿಸಲಾಗಿಲ್ಲ.ಇದರಿಂದಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚು ಬಾಧಿತರಾಗಿದ್ದಾರೆ” ಎಂದು ಎಂದು ಪ್ರಧಾನಿ ಮೋದಿ ವಿಷಾದ ವ್ಯಕ್ತ ಪಡಿಸಿದರು.
NEP ಯ ಆಗಮನದೊಂದಿಗೆ ದೇಶವು ಈಗ ಈ ನಂಬಿಕೆಯನ್ನು ದೂರವಿಡಲು ಪ್ರಾರಂಭಿಸಿದೆ. ವಿಶ್ವಸಂಸ್ಥೆಯಲ್ಲಿಯೂ ನಾನು ಭಾರತೀಯ ಭಾಷೆಯಲ್ಲಿ ಮಾತನಾಡಿದ್ದೇನೆ ಎಂದರು.