Advertisement
ಹೊಸ ಶಿಕ್ಷಣ ನೀತಿಯ ಪ್ರಮುಖ ಕೊಡುಗೆಗಳ ಲ್ಲೊಂದು ಅದು ಶಿಕ್ಷಣ ಸಂಸ್ಥೆಗಳಿಗೆ ಬೆಳೆಯಲು ನೀಡಿರುವ ಅಪಾರ ಸ್ವಾತಂತ್ರ್ಯ. ಈ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಂಡರೆ ಹತ್ತು ವರ್ಷಗಳಲ್ಲಿ ದೇಶದ ಶಿಕ್ಷಣ ಸಂಸ್ಥೆಗಳು ಜಾಗತಿಕವಾಗಿ ಬೆಳೆದು ಬಿಡಬಲ್ಲವು. ಶಿಕ್ಷಣದ ಎರಡು ಉದ್ದೇಶಗಳಾದ ದೇಶದ ಅಭಿವೃದ್ಧಿ ಹಾಗೂ ವ್ಯಕ್ತಿಯ ಮನೋರಥಗಳ ಪೂರೈಕೆ ಎರಡೂ ಉದ್ದೇಶಗಳಲ್ಲಿಯೂ ಸಾಫಲ್ಯ ಸಾಧಿಸಬಲ್ಲವು. ತಮ್ಮ ಬೆಳವಣಿಗೆಗೆ ಸಾಕಷ್ಟು ಸಂಪನ್ಮೂಲಗಳನ್ನು ಕ್ರೋಡಿಕರಿಸಬಲ್ಲವು. ಏಕೆಂದರೆ ನಮಗೆ ಗೊತ್ತಿದೆ. ಸಂಪನ್ಮೂಲಗಳ ಲಭ್ಯತೆಗೆ ಮತ್ತು ಗುಣಮಟ್ಟದ ಶ್ರೇಷ್ಠತೆಗೆ ಸಂಬಂಧವಿದೆ. ಯಾವ ಸಂಸ್ಥೆ ಗುಣಮಟ್ಟ ಹೊಂದುತ್ತದೆಯೋ ಆ ಕಡೆ ಹಣಕಾಸು ಹರಿವು ಇರುತ್ತದೆ.
Related Articles
Advertisement
ಈ ಮಾತುಗಳನ್ನು ಒಂದು ಯುಗವನ್ನೇ ಗೇಲಿ ಮಾಡಲು ಹೇಳುತ್ತಿಲ್ಲ. ಅಂತಹ ಶಿಕ್ಷಣ ಆಗ ಅನಿವಾರ್ಯವೇ. ಏಕೆಂದರೆ ಅದು ಒಂದು ಇತಿಹಾಸದ ಭಾಗ. ಬ್ರಿಟಿಷ್ ವಸಾಹತುಶಾಹಿ ಶಿಕ್ಷಣ ಮೈಂಡ್‌ಸೆಟ್‌ನಿಂದ ಪ್ರೇರಿತವಾದುದು.
ಅಂತಹ ವ್ಯವಸ್ಥೆಯಿಂದ ಈಗ ಶಿಕ್ಷಣ ಸಂಸ್ಥೆಗಳಿಗೆ ಮುಕ್ತಿ ಸಿಕ್ಕಿದೆ. ಹಾಗೆಂದು ಹೇಳಿಕೊಳ್ಳಬೇಕು. ಇಂತಹ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಂದ. 1986ರಲ್ಲಿ. ಅದು ದೇಶದಲ್ಲಿ ಮೆಲೆ ಹೇಳಿದ ಹಳೆಯ ಮನಸ್ಥಿತಿಯನ್ನು ತೆಗೆದು ಹಾಕಲು ಬಹಳ ಪ್ರಯತ್ನಿಸಿತು. ಹಲವು ಬದಲಾವಣೆಗಳನ್ನು ಕೂಡ ತಂದಿಟ್ಟಿತು. ಆದರೆ ಈ ನೀತಿ ಕ್ರಾಂತಿಕಾರಿ ಸಂಪೂರ್ಣವಾಗಿ ಹಳೆಯದನ್ನು ಕಿತ್ತೆಸೆದಿದೆ. ವ್ಯವಸ್ಥೆಯನ್ನು ಡೀ-ರೆಗ್ಯುಲೇಟ್ ಮಾಡಿದೆ. ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿದೆ. ಇದನ್ನು ಈಗ ಸಂಸ್ಥೆಗಳು ಬಳಸಿಕೊಳ್ಳಬೇಕು ಅಷ್ಟೇ.
ಎಂತಹ ಸ್ವಾತಂತ್ರ್ಯ? ಮುಖ್ಯವಾದದ್ದು ತಮಗೆ ತಾವೇ ಒಂದು ವಿಸ್ತಾರವಾದ ಪ್ರಾದೇಶಿಕ ಹಾಗೂ ಜಾಗತಿಕ ವಿಶನ್ ಅನ್ನು ಕಟ್ಟಿಕೊಳ್ಳುವ ಅವಕಾಶ. ಸಾಮಾಜಿಕ ಒಳಗೊಳ್ಳುವಿಕೆ ಹೊಂದಿರುವ, ಪ್ರಾದೇಶಿಕ ಆವಶ್ಯಕತೆಗಳಿಗೆ ಸ್ಪಂದಿಸುವ, ಗುಣ ಮಟ್ಟದ ಪರಿಕಲ್ಪನೆಗಳನ್ನು ತಮಗೆ ತಾವೇ ಬೆಳೆಸಿಕೊಳ್ಳಬಲ್ಲ ಶಿಕ್ಷಣ ಕಟ್ಟುವ ಅವಕಾಶ. ಹೋಗಲಿರುವ ಅಫಿಲಿಯೇಶನ್ ವ್ಯವಸ್ಥೆ ಸಂಸ್ಥೆಗಳಿಗೆ ಇಂತಹ ಅಪರಿಮಿತ ಅವಕಾಶ ಕಲ್ಪಿಸುತ್ತದೆ. ಶಿಕ್ಷಣ ಸಂಸ್ಥೆಗಳಿಗೆ ಹೊರಗಿನ ನಿಯಂತ್ರಕರಿಂದ ಮುಕ್ತಿ ದೊರಕಲಿದೆ. ಪ್ರದೇಶಕ್ಕೆ ಬೇಕಿರುವ ಕೌಶಲ ಆಧರಿತ, ಮೌಲ್ಯ ಆಧರಿತ, ಮಾರುಕಟ್ಟೆ ಅಧರಿತ ಇತ್ಯಾದಿ ಯಾವುದು ಬೇಕೋ ಆ ರೀತಿಯ ಪಠ್ಯಕ್ರಮವನ್ನು ನಿರ್ಧರಿಸುವ ಸ್ವಾತಂತ್ರ್ಯ ಇನ್ನು ಸಂಸ್ಥೆಗಳಿಗೇ ಸಿಗಲಿದೆ. ಶುಲ್ಕ ನಿರ್ಧರಿಸುವ ಶಕ್ತಿ ಕೂಡ ಅಕ್ರಿಡಿಟೇಶನ್ ಗ್ರೇಡ್ ಅವಲಂಬಿಸಿ ಸಿಗಲಿದೆ. ಶೈಕ್ಷಣಿಕ ಕ್ಯಾಲೆಂಡರ್‌ಗಳನ್ನು ಸಿದ್ಧಪಡಿಸುವ ಮತ್ತು ನಿರ್ವಹಿಸುವ ಅವಕಾಶ ಸಿಗಲಿದೆ. ಹೇಗೆ ಕಲಿಸಬೇಕೆನ್ನುವುದನ್ನು ಅವು ಸಂಪೂರ್ಣವಾಗಿ ನಿರ್ಧರಿಸಲಿವೆ. ಹಾಗೆಯೇ ಹೊಸ ಶಿಕ್ಷಣ ನೀತಿ ಕಲೆ, ವಿಜ್ಞಾನ, ಕಾಮರ್ಸ್ ಎನ್ನುವ ವಿಭಾಗಗಳನ್ನು ಒಡೆದು ಹಾಕಿರುವುದು ಮತ್ತು ಎರಡು ರೀತಿಯ ಪದವಿಗಳನ್ನು ಪ್ರಸ್ತಾವಿಸಿರುವುದೂ ದೊಡ್ಡ ವಿಷಯ. ಪದವಿ ನೀಡುವ ಅಧಿಕಾರವೂ ಸಂಸ್ಥೆಗಳಿಗೆ ಬಂದಿದೆ.
ಇದರಿಂದಾಗಿ ಸಂಸ್ಥೆಗಳಿಗೆ ಲಾಭವಿದೆ. ಸುತ್ತಲಿನ ಸಮಾಜದ ಅಗತ್ಯಗಳಿಗನುಸಾರವಾಗಿ, ಬೇಡಿಕೆ ನೋಡಿಕೊಂಡು, ತಮ್ಮ ಮಿತಿಗಳನ್ನು, ಬಜೆಟ್‌ಗಳನ್ನು ನೋಡಿಕೊಂಡು ಪ್ರಾದೇಶಿಕವಾಗಿ ಹೆಚ್ಚು ಜನಪ್ರಿಯವಾಗಿರುವ ಕಾಂಬಿನೇಷನ್‌ಗಳನ್ನು, ಪದವಿಗಳನ್ನು ವಿದ್ಯಾರ್ಥಿಗಳ ಮುಂದೆ ಇಡಲು ಅವಕ್ಕೆ ಸಾಧ್ಯವಿದೆ. ನಮಗೆ ಗೊತ್ತಿದೆ. ಸಂಸ್ಥೆಯ ಕೋರ್ಸುಗಳು ಜನಪ್ರಿಯವಾದಂತೆ ಅವು ಅದಕ್ಕೆ ಬೇಡಿಕೆಯನ್ನು ತರುತ್ತವೆ.
ಈ ಹಿನ್ನೆಲೆಯಲ್ಲಿ ಈಗ ಉನ್ನತ ಸಂಸ್ಥೆಗಳು ಮಾಡಬೇಕಿರುವುದು ತಮ್ಮ, ತಮ್ಮ ವಿಶನ್‌ಗಳನ್ನು ಹೊಸದಾಗಿ ಸೃಷ್ಟಿಸಿಕೊಳ್ಳುವುದು. ತಮ್ಮದೇ ಯೋಜನಾ ಮಂಡಳಿಗಳನ್ನು ಅಥವಾ ಅಕಾಡೆಮಿಕ್ ಕೌನ್ಸಿಲ್‌ಗಳನ್ನು ಅವು ಈಗ ಸೃಷ್ಟಿಸಿಕೊಂಡು, ಸುತ್ತಲಿನ ಕೌಶಲವಂತರ ಅಭಿಪ್ರಾಯಗಳನ್ನು ಪಡೆದು ಹೊಸ ಕೋರ್ಸುಗಳನ್ನು ನಿರೂಪಿಸಿಕೊಳ್ಳಬಹುದಾಗಿದೆ.
ಉದಾಹರಣೆಗೆ ನಮ್ಮ ಶಿಕ್ಷಣ ಸಂಸ್ಥೆಗಳು ಪರ್ಫಾಮಿಂìಗ್ ಆರ್ಟ್ಸ್ಗಳು, ಕ್ರೀಡೆಗಳು, ಪ್ರಾದೇಶಿಕ ತಿಂಡಿ ತಿನಿಸುಗಳು, ಸೌಂದರ್ಯ ವರ್ಧಕಗಳು ಇಂಥವುಗಳ ಜಾಗತಿಕ ಮಾರುಕಟ್ಟೆಯ ಮೌಲ್ಯಗಳನ್ನು ಅರಿತಂತಿಲ್ಲ. ಇವೆಲ್ಲ ಇಂದು ಭಾರೀ ಬೆಳೆಯುತ್ತಿರುವ ಜಾಗತಿಕ ಮನರಂಜನಾ ಉದ್ಯಮದ ಭಾಗಗಳು. ಇವುಗಳಿಗೆಲ್ಲ ಶಿಕ್ಷಣದಲ್ಲಿ ಸೂಕ್ತ ಸ್ಥಾನ ಒದಗಿಸಬೇಕಿದೆ. ಜತೆಯೇ ಕಲಿಕೆಯನ್ನು ಹೆಚ್ಚು ಹೆಚ್ಚು ಪ್ರಾಯೋಗಿಕ ಅಂಶ ತುಂಬಿದ, ಸಂತೋಷ ತುಂಬಿದ, ವ್ಯಕ್ತಿ ಹಾಗೂ ಸಮಾಜಗಳನ್ನು ಕೇಂದ್ರೀಕೃತವಾಗಿಸಬಲ್ಲ ವಿಧಾನಗಳನ್ನೂ ಮರು ಶೋಧಿಸಬೇಕಿದೆ. ಗುರುಕುಲ ಮಾದರಿಗಳನ್ನು, ಮೆಂಟರಿಂಗ್ ಮಾದರಿಗಳನ್ನು, ಕಿರು ಸಂಶೋಧನಾ ಮಾದರಿಗಳನ್ನು ಯೋಚಿಸಬೇಕಿದೆ.
ನಮ್ಮ ದೇಶದಲ್ಲಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಂತಹ ಶಕ್ತಿ ಇದೆ. ಇಷ್ಟು ದಿನ ಅವು ಕಾನೂನು ಚೌಕಟ್ಟಿನಲ್ಲಿ ಬಿದ್ದು ಸ್ವಾತಂತ್ರ್ಯ ಕಳೆದುಕೊಂಡಿದ್ದವು. ಈಗ ಕಾನೂನಾತ್ಮಕ ಸ್ವಾತಂತ್ರ್ಯ ಅವುಗಳಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆ ಗಳು ತಮ್ಮ ಹಳೆಯ ಮನಸ್ಥಿತಿಯಿಂದ ಸಂಪೂರ್ಣವಾಗಿ ಹೊರಬಂದು ಯೋಚಿಸಬೇಕಿದೆ. ಹತ್ತೂವರೆಯಿಂದ ಐದೂವರೆಯ ಶಿಕ್ಷಣ ಸಂಸ್ಥೆಗಳು ಇತ್ಯಾದಿ ಪರಿಕಲ್ಪನೆ ಗಳನ್ನು ದೂರ ಇಡಬೇಕಿದೆ. ಬಯಸುವ ವಿದ್ಯಾರ್ಥಿ ಗಳಿಗೆ ಇಡೀ ದಿನ ವಿವಿಧ ರೀತಿಯ ಕಲಿಕೆ ಒದಗಿಸ ಬೇಕಿದೆ. ನಮಗೆ ಗೊತ್ತಿದೆ. ವಿದ್ಯಾರ್ಥಿಗಳನ್ನು ವಿವಿಧ ರೀತಿಗಳಲ್ಲಿ ಶ್ರೀಮಂತಗೊಳಿಸಬಲ್ಲ ಸಂಸ್ಥೆಗಳು ತಾವೂ ಶ್ರೀಮಂತವಾಗುತ್ತವೆ. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಒಂದು ಉದ್ಯಮವನ್ನಾಗಿ ಅಥವಾ ಒಂದು ಊರಿನ ಎಲ್ಲ ಕೌಶಲಗಳು ಪ್ರದರ್ಶನ ಗೊಳ್ಳುವ ಜಾತ್ರಾಸ್ಥಳಗಳನ್ನಾಗಿ ನಾವು ಪರಿವರ್ತಿಸ ಬೇಕಿದೆ. ಹೊಸ ಶಿಕ್ಷಣ ನೀತಿಯನ್ನು ಸಂಸ್ಥೆಗಳು ಬಳಸಿಕೊಳ್ಳಬಹುದಾಗಿದ್ದು ಹೀಗೆ. ಇದು ಸಾಧ್ಯವಾದರೆ ನಮ್ಮ ಸಂಸ್ಥೆಗಳು ನಮ್ಮವೇ ಆಗಿ ಕೂಡ ದೊಡ್ಡದಾಗಿ ಬೆಳೆದು ನಿಲ್ಲುತ್ತವೆ.