ಮುಂಬಯಿ: ಮೊದಲೆಲ್ಲ ಕಳ್ಳರು ಅಂಗಡಿಗಳಿಗೆ ಕನ್ನ ಹಾಕಿದರೆ ಗಲ್ಲಾ ಪೆಟ್ಟಿಗೆಯಲ್ಲಿನ ಕ್ಯಾಶ್ ಬಿಟ್ಟು ಬೇರೇನನ್ನೂ ಮುಟ್ಟುತ್ತಿರಲಿಲ್ಲ. ಆದರೆ ಕೋವಿಡ್ ಲಾಕ್ ಡೌನ್ ಕಳ್ಳರ ಕದಿಯುವ ಆದ್ಯತೆಯನ್ನೇ ಬದಲಿಸಿದೆ.
ಅದಕ್ಕೆ ಉದಾಹರಣೆ ಇಲ್ಲಿದೆ; 2,400 ರೂ. ಮೌಲ್ಯದ ಅಮೂಲ್ ಬೆಣ್ಣೆ ಪ್ಯಾಕೇಟ್‌ಗಳು, 10,000 ರೂ. ಮೌಲ್ಯದ ಸಿಗರೇಟ್, 8,160 ರೂ. ಮೌಲ್ಯದ ರಾಯಲ್ ಸ್ಟಾಗ್ ಬೀರ್, 1,900 ರೂ. ಬೆಲೆಯ ಒಂದು ಬಾಕ್ಸ್ ಕಿಂಗ್‌ಫಿಷರ್ ಬೀರ್, 5,000 ರೂ. ಮೌಲ್ಯದ ತಂಬಾಕು ಪೊಟ್ಟಣ ಮತ್ತು 1,000 ರೂ. ಬೆಲೆಯ ಬೀಡಿ ಕಟ್ಟುಗಳು…
ಇವಿಷ್ಟೂ ಕಳೆದ 24 ಗಂಟೆಯಲ್ಲಿ ಮುಂಬಯಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವರದಿಯಾಗಿರುವ ಕಳವು ಪ್ರಕರಣಗಳು. ಅಚ್ಚರಿ ಏನೆಂದರೆ ನಗದು ಕಳುವಾಗಿರುವು ಒಂದೇ ಒಂದು ಕೇಸಿನಲ್ಲಿ.
ಸಾಮಾನ್ಯವಾಗಿ ಏಪ್ರಿಲ್, ಮೇ ಅವಧಿಯಲ್ಲಿ ರಜೆ ಇರುವುದರಿಂದ ಬಹುತೇಕರು ಕುಟುಂಬ ಸಮೇತ ಪ್ರವಾಸ ತೆರಳುತ್ತಾರೆ. ಹೀಗಾಗಿ ಈ ಅವಧಿಯಲ್ಲಿ ಮನೆಗಳವು ಪ್ರಕರಣಗಳು ಹೆಚ್ಚಿರುತ್ತಿದ್ದವು.
ಆದರೆ ಈ ಬಾರಿ ಎಲ್ಲರೂ ಮನೆಯಲ್ಲೇ ಲಾಕ್ ಡೌನ್ ಆಗಿರುವುದರಿಂದ ಒಂದೂ ಮನೆಗಳವು ಪ್ರಕರಣ ವರದಿಯಾಗಿಲ್ಲ. ಪೊಲೀಸರು ಬೀದಿ ಬೀದಿಯಲ್ಲೂ ಗಸ್ತು ತಿರುಗುತ್ತಿರುವುದೂ ಪ್ರಕರಣ ಕುಸಿಯಲು ಕಾರಣ ಎಂದು ಐಪಿಎಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.