Advertisement

ನಾಳೆ ಜೇಮ್ಸ್‌ ವೆಬ್‌ ದೂರದರ್ಶಕ ಉಡಾವಣೆ; ನಾಸಾದ ಮಹತ್ವಾಕಾಂಕ್ಷಿ ಯೋಜನೆ

07:27 PM Dec 20, 2021 | Team Udayavani |

ನ್ಯೂಯಾರ್ಕ್‌: ಕ್ರಿಸ್‌ಮಸ್‌ ಹಬ್ಬಕ್ಕೂ ಮುನ್ನ ಅಂದರೆ ಡಿ.22ರಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಮಹತ್ವಾಕಾಂಕ್ಷೆಯ “ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌'(ಜೆಡಬ್ಲ್ಯುಎಸ್‌ಟಿ) ಉಡಾವಣೆ ಮಾಡಲಿದೆ. ಅರಿಯಾನೆ 5 ರಾಕೆಟ್‌ ಮೂಲಕ ದೂರದರ್ಶಕವನ್ನು ಉಡಾಯಿಸಲು ನಿರ್ಧರಿಸಲಾಗಿದೆ.

Advertisement

ಉಡಾವಣೆಯಾದ 30 ನಿಮಿಷಗಳಲ್ಲಿ ಜೇಮ್ಸ್‌ ವೆಬ್‌ ದೂರದರ್ಶಕವು ರಾಕೆಟ್‌ನಿಂದ ಪ್ರತ್ಯೇಕಗೊಳ್ಳಲಿದೆ. ನಂತರ ಸೌರ ಫ‌ಲಕದ ಸಹಾಯದಿಂದ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. 30 ದಿನಗಳ ಬಳಿಕ ದೂರದರ್ಶಕವು ಸೆಕೆಂಡ್‌ ಲ್ಯಾಗ್‌ರೇಂಜ್‌ ಪಾಯಿಂಟ್‌(ಎಲ್‌2)ಗೆ ತಲುಪಲಿದೆ.

1990ರಲ್ಲಿ ಉಡಾವಣೆಯಾದ ಹಬಲ್‌ ದೂರದರ್ಶಕವು ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿದ್ದರೆ, ಜೇಮ್ಸ್‌ ವೆಬ್‌ ದೂರದರ್ಶಕವು ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ. ಹೀಗಾಗಿಯೇ ಈ ದೂರದರ್ಶಕದ ಉಡಾವಣೆ ಮತ್ತು ನಿಯೋಜನೆಯು ಅತ್ಯಂತ ಸವಾಲಿನ ಕೆಲಸ ಎನ್ನುತ್ತಾರೆ ವಿಜ್ಞಾನಿಗಳು.

ನಾಸಾ, ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಮತ್ತು ಕೆನಡಾ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ಈ ದೂರದರ್ಶಕವನ್ನು ಅಭಿವೃದ್ಧಿಪಡಿಸಿವೆ.

ಇದನ್ನೂ ಓದಿ:ಒಮಿಕ್ರಾನ್ ಭೀತಿ : ಗುಜರಾತ್ ನ ಎಂಟು ನಗರಗಳಲ್ಲಿ ಡಿ.31 ರ ವರೆಗೆ ನೈಟ್ ಕರ್ಫ್ಯೂ ಮುಂದುವರಿಕೆ

Advertisement

ಹಬಲ್‌ ದೂರದರ್ಶಕವು ಈ ಬ್ರಹ್ಮಾಂಡದ ಕುರಿತು ನಮಗೆ ಅಗಾಧ ಮಾಹಿತಿಯನ್ನು ಒದಗಿಸಿದೆ. ಈಗ ಉಡಾವಣೆಯಾಗಲಿರುವ ಜೇಮ್ಸ್‌ ವೆಬ್‌ ದೂರದರ್ಶಕವು ಬ್ರಹ್ಮಾಂಡದಲ್ಲಿ ಆರಂಭದಲ್ಲಿ ಸೃಷ್ಟಿಯಾದ ಕೆಲವು ನಕ್ಷತ್ರಪುಂಜಗಳನ್ನು ಪತ್ತೆಹಚ್ಚಲು ಹಾಗೂ ನಮ್ಮ ಕ್ಷೀರಪಥ ಸೇರಿದಂತೆ ವಿವಿಧ ತಾರಾಪುಂಜಗಳು ಸೃಷ್ಟಿಯಾಗಿದ್ದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲೂ ಖಗೋಳವಿಜ್ಞಾನಿಗಳಿಗೆ ನೆರವಾಗಲಿದೆ.

ಚಿನ್ನ ಲೇಪಿತ ದರ್ಪಣ
ಜೇಮ್ಸ್‌ ವೆಬ್‌ನ ಮೂಲ ದರ್ಪಣವು ಚಿನ್ನಲೇಪಿತವಾಗಿದ್ದು, 6.5 ಮೀಟರ್‌ ವ್ಯಾಸವನ್ನು ಹೊಂದಿದೆ. ಹಬಲ್‌ ದೂರದರ್ಶಕದಲ್ಲಿ ಇದು 2.4 ಮೀ. ಆಗಿದೆ. ಜೇಮ್ಸ್‌ ವೆಬ್‌ ದೂರದರ್ಶಕದ ಅವರೋಹಿತ ಪರಿವೀಕ್ಷಣಾ ಸಾಮರ್ಥ್ಯದಿಂದಾಗಿ, ದೂರದ ತಾರಾಪುಂಜಗಳಲ್ಲಿರುವ ನಕ್ಷತ್ರಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಲು ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next