ನರಗುಂದ: 2012ರಲ್ಲಿ ಉಕ್ಕಿ ಹರಿದ ಬೆಣ್ಣೆ ಹಳ್ಳದ ಪ್ರವಾಹ ಸಂದರ್ಭದಲ್ಲಿ ಹಳ್ಳದ ದಡದಲ್ಲಿರುವ ತಾಲೂಕಿನ ಕುಲಗೇರಿ ಮತ್ತು
ಸುರಕೋಡ ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದ್ದು, ಹೊಸ ಜಮೀನು ಖರೀದಿಸಿ ಆಶ್ರಯ ಯೋಜನೆಯಡಿ ಮನೆಗಳನ್ನು
ನಿರ್ಮಾಣ ಮಾಡಲಾಗಿದೆ. ಮನೆಗಳ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂಬ ಆರೋಪ ಇದ್ದು, ಇದಕ್ಕೊಂದು ಸಮಿತಿ ರಚನೆ ಮಾಡಿ ಮನೆಗಳ ಹಂಚಿಕೆ ತಾರತಮ್ಯವಾಗಿದ್ದರೆ ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಭರವಸೆ ನೀಡಿದರು.
ಸ್ಥಳೀಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅರ್ಜಿ
ಸ್ವೀಕರಿಸಿ ಮಾತನಾಡಿದರು.
ಕುರ್ಲಗೇರಿ, ಸುರಕೋಡ ಗ್ರಾಮಗಳಲ್ಲಿ ಮನೆಗಳ ಹಂಚಿಕೆಯಲ್ಲಿ ಆದ ತಾರತಮ್ಯ ಕುರಿತು ತಹಶೀಲ್ದಾರ್ ನೇತೃತ್ವದಲ್ಲಿ ತಾಪಂ ಇಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಿ ಒಂದು ವಾರದಲ್ಲಿ ವರದಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ವಿವಿಧ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು, ಕಾನೂನು ನಿಯಮಗಳಡಿ ಪರಿಶೀಲನೆ ನಡೆಸಿ, ಅರ್ಜಿದಾರರಿಗೆ 7 ಅಥವಾ 14 ಮತ್ತು 21 ದಿನಗಳಲ್ಲಿ ಅರ್ಜಿಗೆ ಉತ್ತರಿಸುವ ಅವಕಾಶವಿದೆ. ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ನಡೆಸಿ, ಆ ಕುರಿತು ನಿಯಮಾವಳಿಯಲ್ಲಿರುವ ಅಂಶಗಳನ್ನು ಗಮನಿಸಿ ನಂತರ ಅವುಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಅಪ್ಲೋಡ್ ಮಾಡಬೇಕು. ಕೆಲವೊಂದು ಕಾನೂನು ವ್ಯಾಪ್ತಿಯಲ್ಲಿ ಇಲ್ಲದಿರಬಹುದು. ಅಂತಹವುಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕೂಲಂಕಶ ಚರ್ಚೆ ಮಾಡಿ ಅಪ್ಲೋಡ್ ಮಾಡಬೇಕೆಂದು ಗ್ರಾಪಂ ಪಿಡಿಒಗಳಿಗೆ ಡಿಸಿ ಸೂಚನೆ ನೀಡಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ನರಗುಂದ ಪುರಸಭೆಗೆ 6 ಅರ್ಜಿ, ಕಂದಾಯ ಇಲಾಖೆಗೆ 5 ಅರ್ಜಿ, ಭೂಮಾಪನಾ ಇಲಾಖೆಗೆ
ಸಂಬಂಧಿಸಿದ 5 ಅರ್ಜಿ, ಸಿಡಿಪಿಒ ಇಲಾಖೆಯ 2 ಅರ್ಜಿ, ಕೃಷಿ ಇಲಾಖೆ 2 ಅರ್ಜಿ, ತಾಪಂಗೆ ಸಂಬಂಧಿಸಿದ 11 ಅರ್ಜಿ, ಲೋಕೋಪಯೋಗಿ ಇಲಾಖೆಗೆ 1 ಅರ್ಜಿ, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 1 ಅರ್ಜಿ ಸಲ್ಲಿಕೆಯಾಗಿವೆ. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಎಸ್.ಕೆ.ಇನಾಮದಾರ ಇತರರು ಉಪಸ್ಥಿತರಿದ್ದರು.