ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ನಿರುದ್ಯೋಗಿಳು ಪಕೋಡ ಮಾರಿಯೂ ಜೀವನ ನಿರ್ವಹಣೆ ಮಾಡಬಹುದು ಎಂಬ ಹೇಳಿಕೆ ವಿರೋಧಿಸಿ ನಿರುದ್ಯೋಗಿಗಳು ಶುಕ್ರವಾರ ನಗರದಲ್ಲಿ ಪಕೋಡ ಮಾಡಿ ಪ್ರತಿಭಟನೆ ನಡೆಸಿದರು.
ನಗರದ ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆಯಲ್ಲಿ ಉದ್ಯೋಗಕ್ಕಾಗಿ ಯುವಜನರು ಸಂಘಟನೆ ನೇತೃತ್ವದಲ್ಲಿ ನಿರುದ್ಯೋಗಿ ಯುವಕರು ಪಕೋಡ ಮಾಡಿ, ಉದ್ಯೋಗಕ್ಕಾಗಿ ಮತ, ಉದ್ಯೋಗ ಭದ್ರತೆಗಾಗಿ ಮತ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.
ಈ ವೇಳೆ ನಿರುದ್ಯೋಗಿ ಯುವಕರ ಸಂಘಟನೆ ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, ನಮ್ಮದು ತಮಾಷೆಯ ಪ್ರತಿಭಟನೆಯಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸುತ್ತಿರುವ ಸ್ವಾಭಿಮಾನಿ ಪಕೋಡಾ ಸ್ಟಾಲ್ ಕೇಂದ್ರ-ರಾಜ್ಯ ಸರ್ಕಾರಗಳಿಂದ ಇಎಸ್‌ಐ, ಪಿಎಫ್ ನಿರೀಕ್ಷೆಯಲ್ಲಿದ್ದೇವೆ. ನಿರ್ದಿಷ್ಟ ಉದ್ದೇಶವಿದೆ. ಫೆ. 4ರಂದು ಕರ್ನಾಟಕಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಕೋಡಾ ಮಾರುವವರೂ ಸೇರಿದಂತೆ ಸುಮಾರು 4,000 ಬಗೆಯ ಅಸಂಘಟಿತ ಕಸುಬುದಾರರ ಅನುಕೂಲಕ್ಕಾಗಿ ನಿರ್ದಿಷ್ಟ ಯೋಜನೆಯನ್ನು ಮುಂದಿಡಬೇಕೆಂದು ಆಗ್ರಹಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಈಗಾಗಲೇ ಸ್ವಯಂ ಉದ್ಯೋಗದಲ್ಲಿರುವ ಅರ್ಧದಷ್ಟು ಜನಸಂಖ್ಯೆಯ ದೇಶವಾಸಿಗಳ ಪರವಾಗಿ ಯೋಜನೆ ಘೋಷಿಸಲು ಇದಕ್ಕಿಂತ ಒಳ್ಳೆಯ ಕಾಲವಿಲ್ಲವೆಂದು ನಾವು ಭಾವಿಸುತ್ತೇವೆ. ಏಕೆಂದರೆ, ಕರ್ನಾಟಕ ವಿಧಾನಸಭಾ ಚುನಾವಣಾ ತಯಾರಿಯ ಭಾಗವಾಗಿ ನಡೆಯುತ್ತಿರುವ ಪರಿವರ್ತನಾ ರ್ಯಾಲಿ ಸಮಾರೋಪವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ತಾವೇ ಸೂಚಿಸಿದ ಸ್ವಯಂ ಉದ್ಯೋಗಗಳ ರಕ್ಷಣೆಗೆ ಸ್ವತಃ ಪ್ರಧಾನಿಯವರೇ ನಿಲ್ಲದಿದ್ದರೆ ಅವರಿಗೆ ಯುವಜನರು ಓಟು ಮಾಡುವುದಾದರೂ ಹೇಗೆ? ಇದು ಎಲ್ಲ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯ ಗಂಟೆಯಾಗಲಿ ಎಂದರು.
ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅವರು, ದೇಶದ ನಿರುದ್ಯೋಗಿ ಯುವಜನರ ಮನದಲ್ಲಿ ಉದ್ಯೋಗ ಭರವಸೆ ಕನಸು ಬಿತ್ತಿದ್ದರು. ಆ ಕನಸುಗಳು ನನಸಾಗುವುದಿರಲಿ, ಹಿಂದಿಗಿಂತಲೂ ಹೆಚ್ಚು ದುರ್ಭರ ಪರಿಸ್ಥಿತಿಗೆ ದೇಶದ ಉದ್ಯೋಗದ ಸ್ಥಿತಿ ತಲುಪಿದೆ.
ಹೀಗಿರುವಾಗ ದೇಶದ ಪ್ರಧಾನಿ ಮಾಡಬೇಕಾಗಿದ್ದು, ಟೀ ಮಾರುವುದು ಮತ್ತು ಪಕೋಡಾ ಮಾಡುವುದು ಉದ್ಯೋಗವಲ್ಲವೇ ಎಂಬ ಪ್ರಶ್ನಿಸುವ ಮೂಲಕ ನಿರುದ್ಯೋಗಿಗಳಿಗೆ ನೀಡಿದ ಭರವಸೆ ಕೈ ಬಿಟ್ಟಿದ್ದೀರಿ.
ದೇಶದಲ್ಲಿರುವ ಪಾರಂಪರಿಕ ಉದ್ಯೋಗಳು ಪ್ರಧಾನಿ ಮೋದಿ ಸೃಷ್ಟಿಸಿದ್ದಲ್ಲ. ಇಂಥ ಉದ್ಯೋಗದಲ್ಲಿ ತೊಡಗಿಕೊಳ್ಳಿ ಎಂಬ ಹೇಳಿಕೆ ಸೂಕ್ತವಲ್ಲ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ನಾಗೇಶ ಶಿವಶರಣ, ಸದಾನಂದ ಮೋದಿ, ಹರ್ಷವರ್ಧನ ಪೂಜಾರಿ ಇದ್ದರು.