Advertisement

ದೇಶದಲ್ಲಿ ನರೇಂದ್ರ ಮೋದಿ ವಿರುದ್ಧ ಅಲೆ

09:39 PM Apr 02, 2019 | Lakshmi GovindaRaju |

ದೇವನಹಳ್ಳಿ: ದೇಶದಲ್ಲಿ ನರೇಂದ್ರ ಮೋದಿ ವಿರುದ್ಧದ ಅಲೆ ಇರುವುದರಿಂದ ಪ್ರಧಾನಿ ಆತಂಕಗೊಂಡಿದ್ದಾರೆ. ಅವರಿಗೆ ಪ್ರಚಾರ ಮಾಡಿಕೊಳ್ಳುವುದಕ್ಕೆ ವಿಷಯ ವಿಲ್ಲದ ಕಾರಣ ಸೈನಿಕರ ಹೆಸರು ಹಾಗೂ ವಿಜ್ಞಾನಿಗಳ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಆರೋಪಿಸಿದರು.

Advertisement

ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿ ಬುದ್ಧ ವಿಹಾರದ ಆವರಣದಲ್ಲಿ ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಹಿಂದುಳಿದ ವರ್ಗದ ನೂತನ ಅಧ್ಯಕ್ಷ ಪುರುಷೋತ್ತಮ್‌ಕುಮಾರ್‌ ಅವರಿಗೆ ಆದೇಶ ಪತ್ರ ನೀಡಿ ಮಾತನಾಡಿದರು.

ಕ್ಷೇತ್ರದ ಜನರಿಗೆ ನೀರು ಕೊಡುತ್ತೇನೆ: ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲಾಗುತ್ತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯತ್ತಲೇ ಇವೆ. ಈ ಬಾರಿ ನನಗೆ ಮತ್ತೂಮ್ಮೆ ಮತ ನೀಡಿದರೆ ಕ್ಷೇತ್ರದ ಜನರಿಗೆ ನೀರು ನೀಡಿ ತೆರಳುತ್ತೇನೆ ಎಂದರು.

ಕಾಂಗ್ರೆಸ್‌ ಪಕ್ಷ ಬಲಪಡಿಸಿ: ಹಿಂದುಳಿದ ವರ್ಗಗಳ ಬ್ಲಾಕ್‌ ಕಾಂಗ್ರೆಸ್‌ ನೂತನ ಅಧ್ಯಕ್ಷ ಪುರುಷೋತ್ತಮ್‌ ಕುಮಾರ್‌ ತಾಲೂಕಿನಲ್ಲಿ ಪಕ್ಷವನ್ನು ಹೆಚ್ಚು ಸಂಘಟಿಸಬೇಕು. ತಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಪ್ರತಿ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕೆಂದು ಹೇಳಿದರು.

ಸಿದ್ಧರಾಮಯ್ಯರಿಂದ ಜನಪರ ಯೋಜನೆ: ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗದ‌ ಅಧ್ಯಕ್ಷ ಅಪ್ಪಣ್ಣ ಮಾತನಾಡಿ, ಬ್ಲಾಕ್‌ ಕಾಂಗ್ರೆಸ್‌ ಹಿಂದುಳಿದ ವರ್ಗದ ನೂತನ ಅಧ್ಯಕ್ಷರನ್ನಾಗಿ ಪುರುಷೋತ್ತಮ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ. ನೋಟು ರದ್ಧತಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕಪ್ಪು ಹಣ ವಾಪಸ್‌ ತರುತ್ತೇನೆಂದು ಹೇಳಿ ಅಧಿಕಾರಕ್ಕೆ ಬಂದರು.

Advertisement

ಭಾರತದಲ್ಲಿದ್ದ ಸಾಲದ ಪ್ರಮಾಣ ಇಂದು ಶೇಕಡವಾರು 30 ರಷ್ಟು ಹೆಚ್ಚಾಗಿದೆ. ಅವರು ಜಾರಿಗೆ ತಂದಿರುವ ಯಾವುದೇ ಯೋಜನೆಗಳು ಬಡವರಿಗೆ, ಮಧ್ಯಮ ವರ್ಗದವರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗಿಲ್ಲ. ಕಾಂಗ್ರೆಸ್‌ ನೇತೃತ್ವದ ಸಿದ್ಧರಾಮಯ್ಯ ಸರ್ಕಾರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಇಂದಿಗೂ ಉಳಿಯುವಂತಾಗಿವೆ.

ಮೈತ್ರಿ ಸರ್ಕಾರದಲ್ಲಿ ಅವರ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು. ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಹಿಂದುಳಿದ ವರ್ಗದ ನೂತನ ಅಧ್ಯಕ್ಷ ಪುರುಷೋತ್ತಮ್‌ ಕುಮಾರ್‌ ಮಾತನಾಡಿ, ತಮಗೆ ನೀಡಿರುವ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಮಾಣಿಕವಾಗಿ ನಿರ್ವಹಿಸುತ್ತೇನೆ. ಸಂಸದ ವೀರಪ್ಪ ಮೊಯ್ಲಿ ಅವರ ಗೆಲುವಿಗೆ ಶ್ರಮಿಸುತ್ತೇನೆಂದ‌ು ಹೇಳಿದರು.

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌, ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮುನಿರಾಜು, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ವಿಭಾಗದ ಅಧ್ಯಕ್ಷ ಲೋಕೇಶ್‌, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮುನಿರಾಜು, ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಕಿಸಾನ್‌ ಖೇತ್‌ ಮಜ್ದೂರ್‌ ಅಧ್ಯಕ್ಷ ಬೈರೇಗೌಡ, ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಎಸ್‌ಸಿ ವಿಭಾಗದ ಅಧ್ಯಕ್ಷ ಬೌಚಾಪುರ ರಾಜಣ್ಣ, ಖಾದಿ ಬೋರ್ಡ್‌ ಅಧ್ಯಕ್ಷ ಲಕ್ಷ್ಮಣ್‌ ಮೂರ್ತಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next