Advertisement

ನರೇಂದ್ರ ಮೋದಿ ರಣತಂತ್ರ: ಸಮಾಜವಾದಿ ಮೇಲೆ “ಉಗ್ರ’ಸ್ತ್ರ

11:34 PM Feb 21, 2022 | Team Udayavani |

ಉತ್ತರ ಪ್ರದೇಶದಲ್ಲಿ ಎರಡು ಹಂತಗಳ ಚುನಾವಣೆ ಈಗಾಗಲೇ ಮುಗಿದಿದೆ. ರವಿವಾರ ನಡೆಯಬೇಕಿದ್ದ ಮೂರನೇ ಹಂತದ ಚುನಾವಣೆಗೆ ಬಿರುಸಿನ ಪ್ರಚಾರ ಶುಕ್ರವಾರ ಮುಕ್ತಾಯವಾಗಿತ್ತು. ಅದೇ ದಿನ ಅಹ್ಮದಾಬಾದ್‌ನಲ್ಲಿರುವ ವಿಶೇಷ ನ್ಯಾಯಾಲಯ, 2008ರಲ್ಲಿ ನಡೆದಿದ್ದ ಅಹ್ಮದಾಬಾದ್‌ ಬಾಂಬ್‌ ಸರಣಿ ಸ್ಫೋಟ ಪ್ರಕರಣದ 38 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

Advertisement

ಇದು, ನಾಲ್ಕನೇ ಹಂತದ ಮತದಾನದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದ ಬಿಜೆಪಿ ಚುನಾವಣ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಮಾಜವಾದಿ ಪಕ್ಷದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

“2008ರ ಅಹ್ಮದಾಬಾದ್‌ ಸ್ಫೋಟದ ರೂವಾರಿಗಳ ಪರವಾಗಿ ಸಮಾಜವಾದಿ ಪಕ್ಷಗಳ ನಾಯಕರು ಅನುಕಂಪ ವ್ಯಕ್ತಪಡಿಸುತ್ತಿರುವುದು ನೋಡಿದರೆ ಆ ಪಕ್ಷ ಉಗ್ರರ ಬೆಂಬಲಕ್ಕೆ ಸದಾ ನಿಂತಿರುವುದು ಕಂಡುಬರುತ್ತದೆ ಎಂದರು. ಅವರ ಟೀಕೆ ಅಷ್ಟಕ್ಕೆ ನಿಲ್ಲಲಿಲ್ಲ. 2007ರಲ್ಲಿ ಅಯೋಧ್ಯೆ ಹಾಗೂ ಲಕ್ನೋದಲ್ಲಿ ಸ್ಫೋಟಗಳಾದವು. ಈ ಪ್ರಕರಣ ಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ 14 ಉಗ್ರರ ವಿರುದ್ಧದ ಪ್ರಕರಣಗಳನ್ನು ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿದ್ದ ಸಮಾಜ ವಾದಿ ಪಕ್ಷದ ಸರಕಾರ ಹಿಂದಕ್ಕೆ ಪಡೆದಿತ್ತು ಎಂದರು. ಆ ಮೂಲಕ ಉಗ್ರರಿಗೆ ರಿಟರ್ನ್ ಗಿಫ್ಟ್ ನೀಡಿದೆ’ ಎಂದಿದ್ದಾರೆ.

ಮೋದಿಯವರ ಈ ವಾಗ್ಧಾಳಿ, ಉತ್ತರ ಪ್ರದೇಶದ ಮತದಾರರ ಮೇಲೆ ದೊಡ್ಡ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಈ ಹೇಳಿಕೆ ಬಂದಿರುವ ಟೈಮಿಂಗ್‌ ಅನ್ನು ನಾವು ಗಮನಿಸಬೇಕು. ಅವತ್ತು ರವಿವಾರ… ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆಯು ತ್ತಿರುವ ವೇಳೆ. ಇಡೀ ಉತ್ತರ ಪ್ರದೇಶದಲ್ಲಿ ಯಾದವ ಸಮು ದಾಯದವರ ಪ್ರಾಬಲ್ಯ ಹೆಚ್ಚಾಗಿರುವ ಪ್ರಾಂತ್ಯಗಳಲ್ಲಿ ಮತದಾನ ಜಾರಿಯಲ್ಲಿದ್ದ ಸಂದರ್ಭವದು. ಸರಿಯಾಗಿ ಅದೇ ಸಮಯಕ್ಕೆ ಮೋದಿಯವರಿಂದ ಬಂದಿರುವ ಈ ಹೇಳಿಕೆ ಯಾದವರ ಸಮುದಾಯದ ಮೇಲೆ ಪ್ರಭಾವ ಬೀರಲು ಬಳಸಿದ ಅಸ್ತ್ರವೇ ಹೊರತು, ಮತ್ತೇನಲ್ಲ ಎಂಬ ಅನಿಸಿಕೆಗಳು ಕೇಳಿಬರುತ್ತಿವೆ.

ಯಾದವರನ್ನು ಸೆಳೆಯಲು ತಂತ್ರಗಾರಿಕೆ?
ಯಾದವರು ಆರಂಭದಿಂದಲೂ ಸಮಾಜವಾದಿ ಪಕ್ಷದ ಮೇಲೆ ಭಾವನಾತ್ಮಕವಾಗಿ ಬೆಸುಗೆ ಹೊಂದಿರುವವರು. ಅದರಲ್ಲೂ ಮುಜಫ‌ರ್‌ ನಗರ ಜಿಲ್ಲೆಯಿಂದ ಬರೇಲಿ ಜಿಲ್ಲೆಯವರೆಗಿನ ಪ್ರಾಂತ್ಯದಲ್ಲಿ ಅವರದ್ದೇ ಪ್ರಾಬಲ್ಯ. ಆದರೆ ಇದೇ ಯಾದವರು 2017ರ ಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿದಿದ್ದರು. ಈ ಪ್ರಾಂತ್ಯದ 29 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 23ರಲ್ಲಿ ಜಯ ಸಾಧಿಸಿತ್ತು. ಸಮಾಜವಾದಿಗೆ ಕೇವಲ ಆರು ಸ್ಥಾನ ಮಾತ್ರ ಸಿಕ್ಕಿದ್ದವು. ಈಗ ಕಾಲ ಬದಲಾಗಿದೆ. ಯಾದವರು ಪುನಃ ಒಗ್ಗಟ್ಟಾಗಿ ಸಮಾಜವಾದಿ ಕೈ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

Advertisement

ದೇಶಭಕ್ತಿಯ ಜಪ
ಏನಾದರೊಂದು ಕಾರಣಕ್ಕೆ ನಿರ್ದಿಷ್ಟ ಸಮುದಾಯಗಳ ಮತಗಳು ಒಡೆದು ಹೋಗುವ ಭೀತಿ ಆವರಿಸಿದಾಗಲೆಲ್ಲ ಬಿಜೆಪಿ ದೇಶಭಕ್ತಿ, ರಾಷ್ಟ್ರೀಯತೆ, ಉಗ್ರವಾದ, ಹಿಂದುತ್ವ ಎಂಬ ನಾಲ್ಕು ಮಂತ್ರಗಳನ್ನು ಜಪಿಸುತ್ತದೆ. ಏಕೆಂದರೆ, ದೇಶ- ಧರ್ಮ ಎಂಬ ಎರಡು ಪದಗಳು ಜಾತಿ, ಪಂಗಡಗಳನ್ನು ಬದಿಗಿಟ್ಟು ಸಮುದಾಯಗಳನ್ನು ಒಗ್ಗೂಡಿಸುತ್ತವೆ ಎಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಅದು ಸತ್ಯವೂ ಹೌದು. ನಾವು, ನೀವೇ ಆಗಲಿ ದೇಶದ ವಿಚಾರ ಬಂದರೆ ಒಗ್ಗೂಡುವುದಿಲ್ಲವೇ? ಎಲ್ಲ ಕಡೆಯೂ ಹಾಗೇ ಆಗುತ್ತದೆ. ಅದಕ್ಕಾಗಿ ಮೂರನೇ ಹಂತದ ಮತದಾನದ ಹೊತ್ತಿಗೆ ಕಾಕತಾಳೀಯವೆಂಬಂತೆ ಅಹ್ಮದಾಬಾದ್‌ ಸ್ಫೋಟದ ತೀರ್ಪು ಬಂದಿದ್ದನ್ನು ಮೋದಿ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಇದರ ಪರಿಣಾಮ ಏನಾಗಿರಬಹುದು ಎಂಬುದಕ್ಕೆ ಮಾ. 10ರಂದು ಹೊರಬೀಳುವ ಫ‌ಲಿತಾಂಶ ಹೇಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next