ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅಸಂಖ್ಯ ಅಭಿಮಾನಿಗಳಿಗೆ ಇದೊಂದು ಸಿಹಿ ಸುದ್ದಿ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ವಿಶ್ವದ ಮೂರನೇ ಅತ್ಯಂತ ವಿಶ್ವಸನೀಯ ಸರಕಾರವಾಗಿದ್ದು ಅದರ ಮೇಲೆ ಶೇ.73 ಭಾರತೀಯರು ವಿಶ್ವಾಸ ಹೊಂದಿದ್ದಾರೆ.
ವಿಶ್ವದ ಅತೀ ಹಚ್ಚು ವಿಶ್ವಸನೀಯ ಸರಕಾರಗಳ ಚಾರ್ಟ್‌ನಲ್ಲಿ ಭಾರತಕ್ಕೆ ಮೂರನೇ ಸ್ಥಾನ ಲಭಿಸಿದೆ. ಶೇ.79 ಜನರ ವಿಶ್ವಾಸಕ್ಕೆ ಪಾತ್ರವಗಿರುವ ಇಂಡೋನೇಶ್ಯ ಸರಕಾರ ಎರಡನೇ ಸ್ಥಾನದಲ್ಲಿದೆಯಾದರೆ, ಶೇ.80 ಜನರ ವಿಶ್ವಾಸ ಹೊಂದಿರುವ ಸ್ವಿಟ್ಸರ್ಲಂಡ್ ಸರಕಾರ ಮೊದಲ ಸ್ಥಾನದಲ್ಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅತ್ಯಂತ ನಿರಾಶಾದಾಯಕವಾಗಿರುವ ಈ ವರದಿಯ ಪ್ರಕಾರ ಟ್ರಂಪ್ ಸರಕಾರ ಅಮೆರಿಕದ ಕೇವಲ ಶೇ.30 ಜನರ ವಿಶ್ವಾಸವನ್ನು ಗಳಿಸಿದೆ. ಟ್ರಂಪ್ ಅವರನ್ನು ಕೊಂಚ ಹಿಂದಿಕ್ಕಿರುವ ಬ್ರಿಟನ್‌ನ ತೆರೇಸಾ ಮೇ ಅವರ ಸರಕಾರದ ಮೇಲೆ ಶೇ.41 ಜನರಿಗೆ ವಿಶ್ವಾಸವಿದೆ.
ದಕ್ಷಿಣ ಕೊರಿಯ ಸರಕಾರದ ಮೇಲೆ ಕೇವಲ ಶೇ.25ರಷ್ಟು ಜನರು ಮಾತ್ರವೇ ವಿಶ್ವಾಸ ಹೊಂದಿದ್ದಾರೆ. ಆರ್ಥಿಕತೆಯಲ್ಲಿ ಸೋತಿರುವ ಗ್ರೀಸ್ ಸರಕಾರ ಮೇಲೆ ಕೇವಲ ಶೇ.13ರಷ್ಟು ಜನರು ಮಾತ್ರವೇ ವಿಶ್ವಾಸ ಹೊಂದಿದ್ದಾರೆ.
ವರದಿಗಳ ಪ್ರಕಾರ ಜಾಗತಿಕ ವಿಶ್ವಾಸಾರ್ಹತೆಯ ಪರಿಕಲ್ಪನೆಯು ಜನರು ತಮ್ಮ ಸರಕಾರದ ಬಗ್ಗೆ ಹೊಂದಿರುವ ಧನಾತ್ಮಕ ಅಭಿಪ್ರಾಯ ಹಾಗೂ ಸರಕಾರದ ನೊಗ ಹಿಡಿದಿರುವವರು ಕೈಗೊಳ್ಳುವ ನೀತಿ ನಿರ್ಧಾರಗಳ ಮೇಲೆ ಅವರಿಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ.