Advertisement

30ರಿಂದ ಮೋದಿ 2.0 ಸಾಧನಾ ಅಭಿಯಾನ ; ಕೇಂದ್ರದಲ್ಲಿ 2ನೇ ಸರಕಾರದ ಮೊದಲ ವಾರ್ಷಿಕೋತ್ಸವ ಸಂಭ್ರಮ

02:20 AM May 29, 2020 | Hari Prasad |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದು ಮೇ 30ಕ್ಕೆ ಒಂದು ವರ್ಷ ಪೂರೈಸಲಿದೆ.

Advertisement

ಹೀಗಾಗಿ  ಸರಕಾರದ ಸಾಧನೆಗಳನ್ನು ಜನರತ್ತ ಕೊಂಡೊಯ್ಯುವ ವಿವಿಧ ರೀತಿಯ ವಿಶೇಷ ಅಭಿಯಾನಗಳನ್ನು ಆರಂಭಿಸಲು ಬಿಜೆಪಿ ನಿರ್ಧರಿಸಿದೆ.

ಮೇ 30ರಂದು ಈ ಅಭಿಯಾನಗಳಿಗೆ ಚಾಲನೆ ದೊರೆಯಲಿದೆ. 2019ರ ಮೇ 30 ರಂದು ಮೋದಿ ಸರ್ಕಾರ ಸತತ ಎರಡನೇ ಬಾರಿಗೆ ಅಸ್ತಿತ್ವಕ್ಕೆ ಬಂದಿತ್ತು.

ಮೋದಿಯವರ ಸರಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಸಲುವಾಗಿ, ದೇಶಾದ್ಯಂತ 750 ವಿಶೇಷ ಜಾಥಾಗಳನ್ನು ನಡೆಸಲು ನಿರ್ಧರಿಸಲಾಗಿದೆ. ಲಾಕ್‌ಡೌನ್‌ ನಿಬಂಧನೆಗಳನ್ನು ಮೀರದಂತೆ ಈ ಜಾಥಾಗಳನ್ನು ನಡೆಸಲಾಗುತ್ತದೆ.

ಅವುಗಳ ಜೊತೆಗೆ 1,000 ವರ್ಚ್ಯುವಲ್‌ ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅದರಲ್ಲಿ ರಾಷ್ಟ್ರಮಟ್ಟದ ಹಾಗೂ ವಿವಿಧ ರಾಜ್ಯಗಳ ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ, ಮೋದಿಯವರ 2ನೇ ಅವಧಿಯ ಸರಕಾರದ ಸಾಧನೆಗಳ ಬಗ್ಗೆ ವಿಡಿಯೋ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುತ್ತದೆ.

Advertisement

ಮನೆಮನೆಗೆ ಪತ್ರ: ದೇಶದ 10 ಕೋಟಿ ಮನೆಗಳಿಗೆ ಮೋದಿಯವರ ಹಸ್ತಾಕ್ಷರದಲ್ಲಿ ಬರೆಯಲಾಗಿರುವ ಪತ್ರಗಳನ್ನು ರವಾನಿಸಲು ತೀರ್ಮಾನಿಸಲಾಗಿದೆ. ಅದರಲ್ಲಿ, ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವಲ್ಲಿ ಕೈಗೊಳ್ಳಲಾಗಿರುವ ಕ್ರಮಗಳು, ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಅದೇ ಪತ್ರದಲ್ಲಿ, ಕೋವಿಡ್ ವೈರಸನ್ನು ತಡೆಗಟ್ಟಲು ಕೇಂದ್ರ ಕೈಗೊಂಡ ಕ್ರಮಗಳ ಬಗ್ಗೆಯೂ ವಿವರಿಸಲಾಗುತ್ತದೆ.

ಸುವರ್ಣಾಕ್ಷರದ ಸಾಧನೆ
ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಕಾರಣವಾಗಿದ್ದ ಸಂವಿಧಾನದ 370ನೇ ಕಲಂ ತಿದ್ದುಪಡಿ ಮಾಡಿ ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ್ದು, ತ್ರಿವಳಿ ತಲಾಖ್‌ ಅನ್ನು ಕಾನೂನು ಬಾಹಿರವೆಂದು ಘೋಷಿಸಿದ್ದು, ರಾಮಜನ್ಮಭೂಮಿ ವಿವಾದ ಸುಖಾಂತ್ಯಗೊಳಿಸಿ ಅಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದು ಮೋದಿಯವರ ಎರಡನೇ ಅವಧಿಯ ಸರ್ಕಾರದ ಅತಿ ಮಹತ್ವದ ಸಾಧನೆಗಳಾಗಿವೆ.

ಈ ಸಾಧನೆಗಳನ್ನು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುತ್ತದೆ ಎಂದು ಬಿಜೆಪಿ ಹೇಳಿದೆ. ಇದೇ ಅವಧಿಯಲ್ಲಿ ವಿಶ್ವದ ಅತಿ ವಿಖ್ಯಾತ ಜನನಾಯಕ ಎಂಬ ಹೆಗ್ಗಳಿಕೆಯನ್ನು ಮೋದಿಯವರು ಪಡೆದಿದ್ದು, ಈ ದೇಶದ ಜನತೆಯ ಆಶೋತ್ತರಗಳಿಗೆ ಅನುಗುಣವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಪಕ್ಷ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next