Advertisement
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಸರ್ವಾಧಿಕಾರಿ ಧೋರಣೆ ಮರುಕಳಿಸಿದೆ. ದೇಶದಲ್ಲಿ ಜನರ ವಾಕ್ ಸ್ವಾತಂತ್ರ್ಯವನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಕಿತ್ತುಕೊಂಡ ಉದಾಹರಣೆ ಇದೆ. ಇದೀಗ ಅವರ ಮೊಮ್ಮಗ ರಾಹುಲ್ ಗಾಂಧಿ ಕೂಡ ಅದೇ ಹಾದಿಯಲ್ಲಿ ಸಾಗಿರುವುದು ನಾಚಿಕೆಗೇಡಿನ ಸಂಗತಿ.
Related Articles
Advertisement
ಇಷ್ಟಾದರೂ ಪೊಲೀಸರು ಅವರನ್ನು ಬಂಧಿಸಲಿಲ್ಲ. ಆದರೆ ಮೋದಿ ಪರ ಘೋಷಣೆ ಕೂಗಿದವರನ್ನು ಬಂಧಿಸಿದ್ದಾರೆ. ಮೋದಿಯವರ ಬಗ್ಗೆ ಕೆಟ್ಟ ಭಾಷೆ ಬಳಸುವವರಿಗೆ ರಾಜಾತಿಥ್ಯ. ಮೋದಿಯವರಿಗೆ ಜೈಕಾರ ಹಾಕಿದವರಿಗೆ ಕಿರುಕುಳ ನೀಡುವ ಧೋರಣೆ ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ ಎಂದು ಕಿಡಿ ಕಾರಿದರು.
ರಾಹುಲ್ ಯೋಗ್ಯರಲ್ಲ: ದೇಶದ 120 ಕೋಟಿ ಜನರಿಗೆ ರಾಹುಲ್ ಗಾಂಧಿ ಬಗ್ಗೆ ಬೇಸರವಿದೆ. ಪ್ರಧಾನಿಯನ್ನು ಚೋರ್ ಎನ್ನುವ ರಾಹುಲ್ ಗಾಂಧಿ, ಭಯೋತ್ಪಾದಕನಿಗೆ “ಜೀ’ ಎಂದು ಗೌರವ ನೀಡುತ್ತಾರೆ. ಈ ರೀತಿಯ ವರ್ತನೆಯಿಂದಲೇ ಅವರು ತಮ್ಮ ಘನತೆ ಹಾಳು ಮಾಡಿಕೊಳ್ಳುತ್ತಿದ್ದಾರೆ.
ನಾಯಕನಾದವನು ಹೊಗಳಿಕೆ, ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಬೇಕು. ಆದರೆ ರಾಹುಲ್ ಗಾಂಧಿ, ಸುಳ್ಳು ಪ್ರಚಾರ, ನಿಂದನೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಪ್ರಧಾನಿಯಾಗಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದಿಂದ ಕಾನೂನು ನೆರವು: ಅಷ್ಟಕ್ಕೂ ರಾಹುಲ್ ಸಂವಾದ ಕಾರ್ಯಕ್ರಮ ಸ್ಥಳದಲ್ಲಿ ಮೋದಿ ಪರ ಘೋಷಣೆ ಕೂಗಿದವರು ಬಿಜೆಪಿ ಕಾರ್ಯಕರ್ತರಲ್ಲ. ಅವರೆಲ್ಲಾ ಐಟಿ ಉದ್ಯೋಗಿಗಳು. ಈ ಹಿಂದೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಬಿಜೆಪಿ ತನ್ನನ್ನು ನಂಬಿದವರ ಕೈಬಿಡುವುದಿಲ್ಲ.
ಘೋಷಣೆ ಕೂಗಿದವರು ಸಮಸ್ಯೆಗೆ ಸಿಲುಕಿದ್ದರೆ ಅವರಿಗೆ ಪಕ್ಷದಿಂದ ಕಾನೂನು ನೆರವು ಒದಗಿಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಭ್ರಷ್ಟ ಕೂಪವಾಗಿದೆ. ಹಿಂದೆ ಸಚಿವ ಪುಟ್ಟರಂಗ ಶೆಟ್ಟಿ ಸಹಾಯಕರ ಬಳಿ 25 ಲಕ್ಷ ರೂ. ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟ ಎಸಿಬಿ ತನಿಖೆಯನ್ನು ತಡೆಹಿಡಿಯಲಾಗಿದೆ.
ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಲೆಕ್ಕಾಧಿಕಾರಿ ಬಳಿ 2 ಕೋಟಿ ರೂ. ಪತ್ತೆಯಾಗಿತ್ತು. ಹಣ ವಸೂಲಿಗೆ ಹೆಸರುವಾಸಿ ಎನ್ನಲಾದ ಆ ಲೆಕ್ಕಾಧಿಕಾರಿ ಪರಾರಿಯಾಗಲು ಅವಕಾಶ ನೀಡಲಾಗಿದೆ ಎಂದರೆ ಪ್ರಭಾವ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಾಗುತ್ತದೆ. ನ್ಯಾಯದೇಗುಲದಂತಿರುವ ವಿಧಾನಸೌಧವನ್ನು ಲಂಚಕೋರರು, ಲೂಟಿಕೋರರ ಸ್ಥಳವನ್ನಾಗಿ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿ ಬಳಿ ಹಣ ಪತ್ತೆ ಪ್ರಕರಣದ ಹೊಣೆಯನ್ನು ಸಚಿವರೇ ಹೊರಬೇಕು ಎಂದು ಹೇಳಿದರು. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾತನಾಡಿ, ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ ಐಟಿ ಉದ್ಯೋಗಿಗಳನ್ನು ಬಂಧಿಸುವ ಮೂಲಕ ಕಾಂಗ್ರೆಸ್‌ನ ನಿಜ ಬಣ್ಣ ಬಯಲಾಗಿದೆ.
ತಾಳ್ಮೆ ಇಲ್ಲದವರು ರಾಜಕೀಯದಲ್ಲಿ ಇರಬಾರದು. ಯುವ ಜನ ಇಂದು ನರೇಂದ್ರ ಮೋದಿ ಪರ ಇದ್ದಾರೆ. ಪೊಲೀಸ್ ಕ್ರಮದಿಂದ ಯುವಕರನ್ನು ಸುಮ್ಮನಿರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ರಾಜ್ಯ ಬಿಜೆಪಿ ವಕ್ತಾರ ಪ್ರಮೋದ್ ಹೆಗಡೆ, ಸಹ ವಕ್ತಾರರಾದ ಎಸ್.ಪ್ರಕಾಶ್, ಎ.ಎಚ್.ಆನಂದ್, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಉಪಸ್ಥಿತರಿದ್ದರು.
ಕಳಪೆ ಆಹಾರ ಕುರಿತು ತನಿಖೆಯಾಗಲಿ: ಬಡವರ ಹಸಿವು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್‌ಗಳು ರೋಗ ಸೃಷ್ಟಿಸುವ ಕೇಂದ್ರಗಳಾಗಿವೆ. ಬಡವರು, ಕೂಲಿ ಕಾರ್ಮಿಕರಿಗೆ ಉಪಯೋಗವಾಗಬೇಕಿದ್ದ ಯೋಜನೆ ಭ್ರಷ್ಟರ ಹೊಟ್ಟೆ ತುಂಬಿಸುತ್ತಿದೆ. 200 ಮಂದಿ ಊಟ ಸೇವಿಸಿದರೆ 2000 ಮಂದಿ ಊಟ ಸೇವಿಸಿದ್ದಾರೆ ಎಂದು ಸುಳ್ಳು ಲೆಕ್ಕ ನೀಡಿ ಹಣ ದೋಚಲಾಗುತ್ತಿದೆ.
ಇಂದಿರಾ ಕ್ಯಾಂಟೀನ್‌ಗೆ ನೀಡುತ್ತಿರುವ 400-500 ಕೋಟಿ ರೂ. ಅನುದಾನದಲ್ಲಿ ಬಹುತೇಕ ಹಣ ನಾನಾ ಹಂತದಲ್ಲಿ ಭ್ರಷ್ಟರ ಜೇಬು ಸೇರುತ್ತಿದೆ. ಈ ಹಣ ಚುನಾವಣೆ ವೆಚ್ಚಗಳಿಗೆ ಬಳಕೆಯಾಗುತ್ತಿದೆ. ಕಳಪೆ ಆಹಾರ ಪೂರೈಕೆ ಬಗ್ಗೆ ತನಿಖೆಯಾಗಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.
ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದ್ದ 10 ಪರ್ಸೆಂಟ್ ಕಮಿಷನ್ ವ್ಯವಸ್ಥೆ, ಇದೀಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 20 ಪರ್ಸೆಂಟ್ ಕಮಿಷನ್‌ಗೆ ಏರಿಕೆಯಾಗಿದೆ. ಹಾಗಾಗಿ ಭ್ರಷ್ಟ ಸರ್ಕಾರವನ್ನು ಕೆಳಗಿಸಬೇಕಿದೆ. ತಾವೂ ಭ್ರಷ್ಟಾಚಾರ ಮಾಡುವುದಿಲ್ಲ. ಮತ್ತೂಬ್ಬರು ಭ್ರಷ್ಟಾಚಾರ ಮಾಡಲೂ ಬಿಡುವುದಿಲ್ಲ ಎಂಬ ಧ್ಯೇಯದೊಂದಿಗೆ ದೇಶದ ಕಾವಲುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಮೋದಿ ಅವರಿಗೆ ಜನಬೆಂಬಲ ಹೆಚ್ಚುತ್ತಿದೆ ಎಂದು ಹೇಳಿದರು.
ಪೊಲೀಸರ ಅಮಾನತು – ಆಯುಕ್ತರಿಗೆ ಬಿಜೆಪಿ ದೂರು: ರಾಹುಲ್‌ಗಾಂಧಿ ಸಂವಾದ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಪರ ಘೋಷಣೆ ಕೂಗಿದವರನ್ನು ಬಂಧಿಸುವ ಮೂಲಕ ವಾಕ್ ಸ್ವಾತಂತ್ರ್ಯ ಹತ್ತಿಕ್ಕಲು ಯತ್ನಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಪಡಿಸಬೇಕು ಹಾಗೂ ಘಟನೆ ಸಂಬಂಧ ತನಿಖೆ ನಡೆಸಬೇಕು ಎಂದು ಬಿಜೆಪಿ ನಿಯೋಗ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ.
ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್.ಅಶೋಕ್ ನೇತೃತ್ವದಲ್ಲಿ ಸಹ ವಕ್ತಾರರಾದ ಎ.ಎಚ್.ಆನಂದ್, ಎಸ್.ಪ್ರಕಾಶ್, ಮಾಜಿ ಉಪಮೇಯರ್ ಎಸ್.ಹರೀಶ್, ಮುಖಂಡರಾದ ಅನ್ವರ್ ಮಾಣಿಪ್ಪಾಡಿ, ಗಣೇಶ್, ಬಾಲಾಜಿ ಇತರರ ನಿಯೋಗ ಮಂಗಳವಾರ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಸಾಮಾನ್ಯರು, ಮುಗ್ಧರನ್ನು ಈ ರೀತಿ ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆಯೇ? ಶಾಂತಿಯುತವಾಗಿ ಮೋದಿಯವರ ಪರ ಘೋಷಣೆ ಕೂಗಿದ್ದು ಅಪರಾಧವೇ? ಪೊಲೀಸ್ ಅಧಿಕಾರಿಗಳು ರಾಹುಲ್‌ಗಾಂಧಿ ಪರವಾಗಿ ಹೇಗೆ ನಿಲುವು ಕೈಗೊಳ್ಳುತ್ತಾರೆ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ. ರಾಹುಲ್ ಗಾಂಧಿಯವರು ಸಮಾಜದ ಎಲ್ಲ ವರ್ಗ, ಹಂತದ ಜನರ ಅಭಿಪ್ರಾಯಗಳನ್ನು ಆಲಿಸಬೇಕಾಗುತ್ತದೆ. ಅದು ಪರವಾಗಿರಲಿ, ವಿರುದ್ಧವಾಗಿರಲಿ ಆಲಿಸಬೇಕು.
ಅದನ್ನು ಬಿಟ್ಟು ಬಂಧಿಸುವುದು ಸರಿಯಲ್ಲ. ರಾಹುಲ್‌ಗಾಂಧಿಯವರು ಪ್ರಧಾನಿ ಮೋದಿಯವರ ಜನಪ್ರಿಯತೆಯಿಂದ ಕಂಗಾಲಾಗಿದ್ದಾರೆ. ಹಾಗಾಗಿ ಪೊಲೀಸ್ ವ್ಯವಸ್ಥೆ ಬಳಸಿಕೊಂಡು ಎಚ್ಚರಿಕೆ ನೀಡಿದಂತಿದೆ. ಈ ಘಟನೆ “ಮೋದಿ ಬೆಂಬಲಿಸಿದವರಿಗೆ ಆಗುವ ಸ್ಥಿತಿ’ ಎಂಬ ಬೆದರಿಕೆಯಂತಿದೆ. ಪೊಲೀಸರು ಕಾಂಗ್ರೆಸ್ ಬೆಂಬಲಿಗರಂತೆ ವರ್ತಿಸುತ್ತಿದ್ದಾರೆ. ಇದು ಸ್ವತಂತ್ರ ಮತ್ತು ಮುಕ್ತ ಚುನಾವಣೆ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಬಿಜೆಪಿ ತಿಳಿಸಿದೆ.