Advertisement

ಚಕ್ಕಂದ ಆಡೋಕೆ ಮೋದಿ ಹತ್ರ ಹೋಗಿರ್ಲಿಲ್ಲ…

08:28 AM Aug 17, 2017 | Team Udayavani |

ಒಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮೂರು ದಿನ ಪ್ರವಾಸ ಮಾಡಿ ಬಿಜೆಪಿ ರಾಜ್ಯ ನಾಯಕರಿಗೆ ಚಾಟಿ ಬೀಸಿ ಹೋದರೆ, ಮತ್ತೂಂದೆಡೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ರಾಯಚೂರು, ಬೆಂಗಳೂರಲ್ಲಿ ಸಮಾವೇಶ ನಡೆಸಿ ಕಾಂಗ್ರೆಸ್ಸಿಗರಲ್ಲಿ ಹುರುಪು ತುಂಬಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಹೈದರಾಬಾದ್‌-ಕರ್ನಾಟಕ ಭಾಗದತ್ತ ಹೊರಟು ನಿಂತು “ನಾನು ಯುದ್ಧಕ್ಕೆ ಇಳಿಯೋ ಕಾಲ ಬಂದಿದೆ’ ಎಂದು ಗುಟುರು ಹಾಕಿದ್ದಾರೆ. ಇದರ ನಡುವೆ ದೇವೇಗೌಡರು ಆಗಾಗ್ಗೆ ಪ್ರಧಾನಿ ಮೋದಿ ಭೇಟಿಯಾಗುತ್ತಿರುವ ಬಗ್ಗೆ ನಾನಾ ಗುಸು ಗುಸು ಕೇಳಿಬರುತ್ತಿವೆ. ಈ ಬಗ್ಗೆ ಅವರ‌ ಜತೆ ನೇರಾ-ನೇರ ಮಾತುಕತೆಗೆ ಇಳಿದಾಗ.

Advertisement

ಅಮಿತ್‌ ಶಾ, ರಾಹುಲ್‌ ಗಾಂಧಿ ರಾಜ್ಯಕ್ಕೆ ಬಂದು ಹೋಗ್ತಿದ್ದಾರೆ…
ಅಯ್ಯೋ ರಾಮಾ, ಬಂದು ಹೋಗ್ಲಿ ಬಿಡಿ. ಅವರವರ ಪಕ್ಷ ಕಟ್ಟೋ ಕಾಯಕ, ನಾವ್ಯಾಕೆ ಬೇಡ ಅನ್ನೋಣ? ಅಮಿತ್‌ ಶಾ, ರಾಹುಲ್‌ಗಾಂಧಿ ಬಂದ್ರು ಅಂತ ನಾವು ಓಡೋಗೋಕೆ ಆಗುತ್ತಾ?

ಹಾಗಲ್ಲ, ಕಾಂಗ್ರೆಸ್‌-ಬಿಜೆಪಿ ಎದುರು ಜೆಡಿಎಸ್‌ ಸ್ವಲ್ಪ ಮಂಕಾಗ್ತಿದೆ ಅನ್ನೋ ಮಾತಿದೆಯಲ್ಲಾ?
ನಾವ್ಯಾಕೆ ಮಂಕಾಗ್ತೀವೆ? ನಾವೂ ನಮ್ಮದೇ ಆದ ರೀತಿಯಲ್ಲಿ ಜನರ ಬಳಿ ಹೋಗ್ತೀವೆ. ರಾಜಕಾರಣ ನನಗೇನು ಹೊಸದೇ? ನೆಹರೂ ಕಾಲದಿಂದ ರಾಜಕಾರಣ ನೋಡಿದವನು ನಾನು. ಈ ರಾಜ್ಯದ ಹಿತಾಸಕ್ತಿ ಬಯಸುವ ಏಕೈಕ ಪಕ್ಷ ಜೆಡಿಎಸ್‌.

ಶಾ ಬಗ್ಗೆ ಕಾಂಗ್ರೆಸ್‌ ನಾಯಕರು ವಾಗ್ಧಾಳಿ ನಡೆಸಿದ್ರು, ಜೆಡಿಎಸ್‌ನವ್ರು ಏನೂ ಪ್ರತಿಕ್ರಿಯೆ ನೀಡಲಿಲ್ಲ?
ಸುಮ್‌ ಸುಮ್ನೆ ಯಾಕೆ ಮಾತಾಡ್ಬೇಕು? ಅಮಿತ್‌ ಶಾ ಜೆಡಿಎಸ್‌ ಬಗ್ಗೆ ಮಾತನಾಡಿದ್ದಾರಾ? ಅವರು ನಮ್ಮ ಬಗ್ಗೆ ಮಾತನಾಡಿಲ್ಲ ಅಂದ್ಮೇಲೆ ನಾವ್ಯಾಕೆ ವಿನಾಕಾರಣ ಪ್ರತಿಕ್ರಿಯೆ ಕೊಡ್ಬೇಕು. 

ಅಮಿತ್‌ ಶಾ ಜೆಡಿಎಸ್‌ ಶಾಸಕರ ಮೇಲೂ ಕಣ್ಣಿಟ್ಟಿದ್ದರಂತೆ?
ಇಟ್ಟಿರಬಹುದು, ಅದರಲ್ಲಿ ಆಶ್ಚರ್ಯ ಬೀಳುವಂತದ್ದೇನಿದೆ. ಆದರೆ, ನಮ್ಮ ಶಾಸಕರು ಬಿಕರಿಗೆ ಇಲ್ಲ, ಹೋಗೋರೆಲ್ಲಾ ಹೋಗಿ ಆಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವುದರಿಂದ ಬೇರೆ ಬೇರೆ ರೀತಿ ಭಯ ಹುಟ್ಟಿಸಿ ಸೆಳೆಯಬಹುದು. ಅಮಿತ್‌ ಶಾ ಬಂದು ಹೋದ ಮೇಲೆ ಬಿಜೆಪಿಯವರು ಡಿ.ಕೆ.ಶಿವಕುಮಾರ್‌, ರಮೇಶ್‌ ಜಾರಕಿಹೊಳಿ, ಲಕ್ಷ್ಮಿ ಹೆಬ್ಟಾಳ್ಕರ್‌ ಐಟಿ ದಾಳಿ ವಿರುದ್ಧ ಹೋರಾಟ ಮಾಡ್ತಾರೆ ಅಂದರೆ ಏನರ್ಥ? ಅಷ್ಟೇಕೆ ಕಾಂಗ್ರೆಸ್‌ನವರೇ ನಮ್ಮ ಶಾಸಕರನ್ನು ದೆಹಲಿಗೆ ಕರೆಸಿಕೊಂಡಿದ್ದಾರಲ್ಲಾ? ನಾನು ಯಾವುದಕ್ಕೂ ಹೆದರಿ ಕುಳಿತುಕೊಳ್ಳುವ ಪ್ರಶ್ನೆಯೂ ಇಲ್ಲ. 

Advertisement

ಬಿಜೆಪಿದು 150 ಟಾರ್ಗೆಟ್‌, ಕಾಂಗ್ರೆಸ್‌ನದು 125 ಗುರಿ, ಜೆಡಿಎಸ್‌ನದು?
ನಮುª ಸ್ವಂತ ಶಕ್ತಿ ಮೇಲೆ ಅಧಿಕಾರ ಹಿಡಿಯೋ ಮಿಷನ್‌. ಈ ದೇವೇಗೌಡ ನೀರಾವರಿ ಸಚಿವನಾಗಿ, ಮುಖ್ಯಮಂತ್ರಿ ಯಾಗಿ, ಪ್ರಧಾನಿಯಾಗಿ ರಾಜ್ಯಕ್ಕೆ ಮಾಡಿರೋ ಕಿಂಚಿತ್‌ ಕೆಲಸ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿರೋ ಸಾಧನೆ ನೋಡಿ ಮತ ಹಾಕಿ ಅಂತ ಕೇಳೆ¤àವೆ. ಉಳಿದದ್ದು ಮತದಾರರ ಮನಸಾಕ್ಷಿಗೆ ಬಿಡ್ತೇವೆ.

ನಿಜ ಹೇಳಿ, ಜೆಡಿಎಸ್‌ಗೆ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡೋ ಸಾಮರ್ಥ್ಯ ಇದೆಯಾ?
ವಾಸ್ತವಾಂಶ ಮಾತಾಡೋಣ. ರಾಷ್ಟ್ರಮಟ್ಟದಲ್ಲಿ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸೇರಿ ಘಟಾನುಘಟಿ ನಾಯಕರು ಇರೋ ಕಾಂಗ್ರೆಸ್‌ 224 ಕ್ಷೇತ್ರಗಳಲ್ಲಿ ಗೆಲ್ಲುತ್ತೇ ಅಂತ ಕಾಂಗ್ರೆಸ್‌ನವರು ಎದೆಮುಟ್ಟಿ ಹೇಳ್ತಾರೇನ್ರಿ? ನರೇಂದ್ರ ಮೋದಿ, ಅಮಿತ್‌ ಶಾ, ಯಡಿಯೂರಪ್ಪ, ಅನಂತ ಕುಮಾರ್‌, ಸದಾನಂದ ಗೌಡರು ಸೇರಿ ದೊಡ್ಡ ದೊಡ್ಡ ನಾಯಕರನ್ನು ಹೊಂದಿರುವ ಬಿಜೆಪಿಗೆ 224 ಕ್ಷೇತ್ರಗಳಲ್ಲೂ ಗೆಲ್ಲೋ ಶಕ್ತಿ ಇದೆಯೆನ್ರೀ?

ನಿಮ್ಮ ಮಾತಿನ ಅರ್ಥ?
ಅಂದ್ರೆ, ಯಾರ್ಯಾರ ಶಕ್ತಿ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಕರಾವಳಿ ಭಾಗದಲ್ಲಿ ನಮಗೆ ಶಕ್ತಿ ಇಲ್ಲ, ಈ ಬಾರಿ ಅಲ್ಲೂ ಶಕ್ತಿ ತುಂಬುವ ಪ್ರಯತ್ನ ನಡೀತಿದೆ. ಉಳಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಜೆಡಿಎಸ್‌ ಶಕ್ತಿಯುತವಾಗಿದೆ. ಕೇಂದ್ರ ಮತ್ತು ರಾಜ್ಯ ಗುಪ್ತದಳ ಏನು ಮಾಹಿತಿ ಕೊಟ್ಟಿದೆ ಅಂತ ನರೇಂದ್ರ ಮೋದಿ, ಸಿದ್ದರಾಮಯ್ಯ ಬಹಿರಂಗ ಪಡಿಸಲಿ ನೋಡೋಣ.

ಏನ್‌ ಸಾರ್‌ ಆ ಮಾಹಿತಿ?
ಅಯ್ಯೋ, ನಾನ್ಯಾಕೆ ಹೇಳಲಿ. ಸೆಂಟ್ರಲ್‌ ಇಂಟಲಿಜೆನ್ಸ್‌, ಸ್ಟೇಟ್‌ ಇಂಟಲಿಜೆನ್ಸ್‌ ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಗ್ರೌಂಡ್‌ ರಿಯಾಲಿಟೀಸ್‌ ರಿಪೋರ್ಟ್‌ ಕೊಟ್ಟಿಲ್ವೇನ್ರಿ?ಆ ರಿಪೋರ್ಟ್‌ನಲ್ಲಿ ಜೆಡಿಎಸ್‌ ಶಕ್ತಿ ಏನು ಅಂತಾನೂ ಹೇಳಿಲ್ವಾ? ಅದಕ್ಕೆ ಬಿಜೆಪಿ- ಕಾಂಗ್ರೆಸ್‌ನೋರು ಶೇಕ್‌ ಆಗಿರೋದು.

ಪ್ರಜ್ವಲ್‌ ವಿಚಾರದಲ್ಲಿ ಯಾಕೆ ಗೊಂದಲ?
ಏನೂ ಗೊಂದಲ ಇಲ್ಲ. ಆತ ಇನ್ನೂ ಹುಡುಗ, ಕೆಲವರು ಪ್ರಚೋದಿಸ್ತಾರೆ, ಏನ್‌ ಮಾಡೋದು. ಆದರೆ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಲಕ್ಷ್ಮಣರೇಖೆ ದಾಟಲು ನಾನು ಬಿಡುವುದಿಲ್ಲ.

ಕುಮಾರಸ್ವಾಮಿ ಎರಡು ಕಡೆ ಸ್ಪರ್ಧೆ ಮಾಡ್ತಾರಾ?
ಇಲ್ಲ, ರಾಮನಗರ ನಮಗೆ ರಾಜಕೀಯವಾಗಿ ಪುನರ್‌ಜನ್ಮ ನೀಡಿದ ಕ್ಷೇತ್ರ. ಆ ಕ್ಷೇತ್ರ ಬಿಡುವ ಪ್ರಶ್ನೆ ಇಲ್ಲ. ಉತ್ತರ ಕರ್ನಾಟಕ ಭಾಗದ ಜನ ಕುಮಾರಸ್ವಾಮಿಯನ್ನು ತುಂಬಾ ಪ್ರೀತಿ ಮಾಡ್ತಾರೆ. ಹೀಗಾಗಿ, ಸಹಜವಾಗಿ ಸ್ಪರ್ಧೆಗೆ ಒತ್ತಡ ಇದೆ. ಆದರೆ, ಒಂದು ಕ್ಷೇತ್ರದಲ್ಲಿ ಮಾತ್ರ ನಿಲ್ತಾರೆ.

ಲಿಂಗಾಯತ ಪ್ರತ್ಯೇಕ ಧರ್ಮ, ಜಾತಿ ಜನಗಣತಿ, ಒಳ ಮೀಸಲಾತಿ ವಿಚಾರ ದೊಡ್ಡ ವಿವಾದವಾಗಿದೆಯಲ್ಲಾ?
ನಾನು ಜಾತಿ ಒಡೆಯುವ ಕೆಲಸ ಮಾಡಲ್ಲ. ಅಂತಹ ಕೀಳು ಮಟ್ಟಕ್ಕೆ ಇಳಿದು ರಾಜಕಾರಣ ಮಾಡಿ ಲಾಭ ಮಾಡುವ ಜಾಯಮಾನ ನನ್ನದಲ್ಲ. ಹೀಗಾಗಿ, ಆ ಬಗ್ಗೆ ನಾನು ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ. ಜಾತಿ ಜನಗಣತಿ, ಒಳ ಮೀಸಲಾತಿ ಬಗ್ಗೆಯೂ ನಾನು ಹೆಚ್ಚಾಗಿ ಪ್ರತಿಕ್ರಿಯಿಸಲ್ಲ. ಯಾವುದೇ ಸಮುದಾಯ ಆಗಿದ್ದರೂ ಅನ್ಯಾಯಕ್ಕೊಳಗಾಗಿದ್ದರೆ ಮೀಸಲಾತಿ ಸೇರಿ ಸೌಲಭ್ಯ ಕೊಡಬೇಕು ಎಂಬುದು ನನ್ನ ನಿಲುವು. ಇಷ್ಟೆಲ್ಲಾ ಗೊಂದಲ ಸೃಷ್ಟಿಸಿ ಸಿದ್ದರಾಮಯ್ಯ ಅವರು ಏನನ್ನು ಸಾಧಿಸಲು ಹೊರಟಿದ್ದಾರೋ ಗೊತ್ತಿಲ್ಲ.

ಇತ್ತೀಚಿನ ಐಟಿ ದಾಳಿ ಬಗ್ಗೆ ಏನು ಹೇಳುತ್ತೀರಿ?
ನಾನೇನು ಹೇಳಲಿ?ನಮ್ಮ ಕುಟುಂಬದ ಸದಸ್ಯರ ಮೇಲೂ ಇಂತಹ ದಾಳಿಗಳು ಆಗಿರಲಿಲ್ಲವೇ? ಏನಾದರೂ ಸಿಕ್ಕಿತೇ? ಭ್ರಷ್ಟಾಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಒಳಗೊಳಗೆ ಹಸ್ತಲಾಘವ ಮಾಡ್ತಾರೆ. ಸಿದ್ದರಾಮಯ್ಯ ಬಿಜೆಪಿ ಭ್ರಷ್ಟ ಅಂತಾರೆ, ಯಡಿಯೂರಪ್ಪ ಕಾಂಗ್ರೆಸ್‌ ಭ್ರಷ್ಟ ಅಂತಾರೆ. ಇವರ ಆಟ ಗೊತ್ತಾಗೋಲ್ವೇ?ಸಿದ್ದರಾಮಯ್ಯ, ಯಡಿಯೂರಪ್ಪ, ಡಿ.ಕೆ.ಶಿವಕುಮಾರ್‌ ನಡುವೆ ಹಳೇ ಸ್ನೇಹ, ವಿಶ್ವಾಸ ಇದೆ ಎಂಬುದನ್ನು ನಾನು ಹೇಳಬೇಕಿಲ್ಲ. 

ದೇವೇಗೌಡರು ಪದೇ ಪದೇ ನರೇಂದ್ರ ಮೋದಿ ಅವರನ್ನು ಯಾಕೆ ಭೇಟಿ ಮಾಡ್ತಾರೆ?
 ಚಕ್ಕಂದ ಆಡೋಕೆ ಹೋಗಿರ್ಲಿಲ್ಲಾ ಸಾರ್‌ ನಾನು. ಕಾವೇರಿ, ಮಹದಾಯಿ, ಮಹಾಮಸ್ತಕಾಭಿಷೇಕ, ರೈತರ ಸಮಸ್ಯೆ ಮಾತಾಡೋಕೆ ಹೋಗಿದ್ದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಿದರೆ ನಾನು ಏನ್‌ ಮಾಡ್ಲಿ? ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕಣ್ಣಲ್ಲಿ ನೀರು ಬರುತ್ತೆ, ನನ್ನ ರಾಜ್ಯಕ್ಕೆ ಅನ್ಯಾಯ ತಪ್ಪಿಸಿ ಎಂದು ಅಂಗಲಾಚಿದ್ದೇನೆ. 

ವಿಧಾನಸಭೆ ಚುನಾವಣೇಲಿ ಅತಂತ್ರ ಸ್ಥಿತಿಯಾದ್ರೆ ಬಿಜೆಪಿ ಜತೆ ದೋಸ್ತಿ ಮಾಡೋ ಪ್ಲಾನ್‌ ಅಂತಾರೆ?
ನಾನ್‌ಸೆನ್ಸ್‌, ಕಾಂಗ್ರೆಸ್‌ ಸಹವಾಸ ಮಾಡಿ ಅನುಭವಿಸಿದ್ದೇವೆ. ನನ್ನ ಮಗ ಬಿಜೆಪಿ ಜತೆ ಹೋಗಿ ಅನುಭವಿಸಿದ್ದಾನೆ. ಇನ್ಯಾರ ಜತೆಗೂ ಹೋಗೋ ಪ್ರಶ್ನೆನೇ ಇಲ್ಲ. ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸೋ ಸಂಖ್ಯಾ ಬಲ ಬರಲಿಲ್ಲ ಅಂದ್ರೆ ಪ್ರತಿಪಕ್ಷದಲ್ಲಿ ಕುಳಿತು ಕೆಲಸ ಮಾಡ್ತೇವೆ.

ಇದು ನಿಮ್ಮ ನಿರ್ಧಾರವಾ?
ಕಾಂಗ್ರೆಸ್‌-ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಬೇಕು ಎಂಬುದು ಪಕ್ಷದ ನಿರ್ಧಾರ. ಕಾಂಗ್ರೆಸ್ಸು-ಬಿಜೆಪಿಯವರಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಗೊತ್ತಿದೆ ನನಗೆ. ವಾಯುಸೇನೆಯ ಹೆಲಿಕಾಪ್ಟರ್‌ ಬಳಕೆ ಮಾಡಿ 23 ಲಕ್ಷ ರೂ. ಬಾಕಿ ಇಟ್‌ಕೊಂಡಿದಾರೆ ಅಂತ ನನ್ನ ಮೇಲೆ ಕೇಂದ್ರ ಸರ್ಕಾರ ಕೇಸ್‌ ಹಾಕಿದೆ. ವಾಜಪೇಯಿ ಸರ್ಕಾರದಿಂದ ಮನಮೋಹನ್‌ಸಿಂಗ್‌, ನರೇಂದ್ರಮೋದಿ ಸರ್ಕಾರದವರೆಗೆ ಅದು ನಡೆ ಯುತ್ತಲೇ ಇದೆ. ಹತ್ತೂವರೆ ತಿಂಗಳು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದವನು ನಾನು. ಒಬ್ಬ ಮಾಜಿ ಪ್ರಧಾನಿ ಎಂಬ ಕನಿಷ್ಠ ಗೌರವವೂ ಎರಡೂ ಪಕ್ಷಗಳಿಗೆ ಇಲ್ಲ.

ಮಹದಾಯಿ ಬಗ್ಗೆ ಮೋದಿ ಏನು ಹೇಳಿದರು?
ನಾನು ಹೇಳುವುದೆಲ್ಲಾ ಹೇಳಿದೆ, ಅವರು ತಟಸ್ಥವಾಗಿ ದ್ದರು. ಮಹಾಮಸ್ತಕಾಭಿಷೇಕಕ್ಕೆ 100 ಕೋಟಿ ರೂ. ಕೊಡಿ ಎಂದರೂ ಸ್ಪಂದನೆ ಸಿಗಲಿಲ್ಲ. ಏನೇ ಮಾತನಾಡಿದ್ರೂ ತಟಸ್ಥವಾಗೇ ಇರ್ತಾರೆ.

ಜನತಾಪರಿವಾರದ ಜೆಡಿಯುನಲ್ಲಿ ಬಿರುಕು ಉಂಟಾಗಿದೆಯಲ್ಲಾ?
ಅದಕ್ಕೆ ನಾನೇನು ಮಾಡಲಿ. ಮುಂದಿನ ಲೋಕಸಭೆ ಚುನಾ ವಣೆಯಲ್ಲಿ ಪ್ರಾದೇಶಿಕ ಪಕ್ಷಗಳೆಲ್ಲಾ ಸೇರಿ ನಿತೀಶ್‌ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ತೀರ್ಮಾನವಾ ಗಿತ್ತು. ನನಗೆ ವಯಸ್ಸಾಗಿದೆ, ರಾಷ್ಟ್ರ ರಾಜಕಾರಣ ನೀವು -ಮುಲಾಯಂ ಮುಂದುವರಿಸಿಕೊಂಡು ಹೋಗಿ ಎಂದು ನಿತೀಶ್‌ಗೆ ನಾನೇ ಹೇಳಿದ್ದೆ. ಆದರೆ, 24 ಗಂಟೆಗಳಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದವು. ಆರ್‌ಜೆಡಿ-ಜೆಡಿಯು ಸರ್ಕಾರ ಹೋಗಿ ಜೆಡಿಯು-ಬಿಜೆಪಿ ಸರ್ಕಾರ ಬಂತು. ಏನ್‌ ಮಾಡೋದು?

ಜೆಡಿಯು -ಜೆಡಿಎಸ್‌ನಲ್ಲಿ ವಿಲೀನ ಪ್ರಸ್ತಾಪ ಎಲ್ಲಿಗೆ ಬಂತು?
ನೋಡೋಣ, ಎಲ್ಲಿಗೆ ಬಂತು ನಿಲ್ಲುತ್ತೆ ನಿತೀಶ್‌-ಶರದ್‌ಯಾದವ್‌ ಜಗಳ ಅಂತ. ರಾಜ್ಯದ ಮಟ್ಟಿಗೆ ನಾನಂತೂ ಆ ವಿಷಯದಲ್ಲಿ ಮುಕ್ತವಾಗಿದ್ದೇನೆ. ನಾಡಗೌಡರ ಜತೆ ಮಾತನಾಡಿದ್ದೇನೆ. ಈಗ ಅವರು ಶರದ್‌ ಜತೆ ನಿಲ್ತಾರೋ? ನಿತೀಶ್‌ ಜತೆ ಹೋಗ್ತಾರೋ ನೋಡೋಣ.

2019ರ ಚುನಾವಣೇಲಿ ನರೇಂದ್ರಮೋದಿ ಅವರನ್ನು ಎದುರಿಸುವ ನಾಯಕ ಕಾಣಿಸುತ್ತಿಲ್ಲ ಎಂದು ನಿತೀಶ್‌ ಹೇಳಿದ್ದಾರಲ್ಲಾ?
ಹೂ ಈಸ್‌ ಆಫ್ಟರ್‌ ನೆಹರು ಅಂತ ದೇಶವ್ಯಾಪಿ ಚರ್ಚೆ ಯಾಯ್ತು, ಆತಂಕ ವ್ಯಕ್ತವಾಯ್ತು, ನೆಹರು ನಂತರ ಬೇರೆ ಯಾರೂ ದೇಶ ಆಳಲಿಲ್ಲವೇ? ಭ್ರಮೆ ಬೇಕಿಲ್ಲ. ನಾನು ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ. ಆದರೆ, “ಮಾರ್ಕೆಟಿಂಗ್‌’ ಜಾಸ್ತಿ ದಿನ ನಡೆಯೋಲ್ಲ.

2019 ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೀರಾ?
2019ಕ್ಕೆ ಚುನಾವಣೆ ನಡೆದರೆ ಸ್ಪರ್ಧೆ ಮಾಡಬಾರದು ಎಂದುಕೊಂಡಿದ್ದೇನೆ. ಆದರೆ, ಅದಕ್ಕೂ ಮುಂಚೆ ಲೋಕ ಸಭೆ ಹಾಗೂ ದೇಶದ ಎಲ್ಲ ರಾಜ್ಯಗಳ ವಿಧಾನಸಭೆ ಚುನಾವಣೆ ಒಟ್ಟಿಗೆ ಮಾಡುವ ಪ್ರಯತ್ನಗಳು ನಡೆಯು ತ್ತಿವೆ. ಅಂತಹ ಸ್ಥಿತಿ ಎದುರಾದರೆ ಪಕ್ಷ ನಿಲ್ಲಲೇಬೇಕು ಎಂದರೆ ನಿಲ್ಲಬೇಕಾಗಬಹುದು.

ಮನೆ ಸಮಸ್ಯೆ ಬಗೆಹರಿಸುತ್ತೇನೆ
ನಮ್ಮ ಕುಟುಂಬದಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸ ಇದೆ. ನಾನು ಇದನ್ನು ಯಾವ ಮುಚ್ಚು ಮರೆ ಇಲ್ಲದೆ ಒಪ್ಪಿಕೊಳೆ¤àನೆ. ಯಾರ ಮನೆಯಲ್ಲಿ ಇರೋಲ್ಲ ಹೇಳಿ?ಆದರೆ, ಮನೆ ಯಜಮಾನನಾಗಿ ನಾನು ಅದನ್ನು ಸರಿಪಡಿಸುತ್ತೇನೆ. ಸರಿಪಡಿಸಲಾಗದಂತಹ ಸಮಸ್ಯೆಯೇನೂ ಅಲ್ಲ. ಇದನ್ನೇ ಕೆಲವರು ಬಂಡವಾಳ ಮಾಡಿಕೊಳ್ಳೋಕೆ ನೋಡಿದ್ರೆ ನಿರಾಸೆ ಖಂಡಿತ.

ಸಂದರ್ಶನ: ಎಸ್‌.ಲಕ್ಷ್ಮೀನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next